ಮಡಿಕೇರಿ, ಜು. 7: ಕೊಡಗಿನ ರಾಜಪರಂಪರೆಗೆ ಸಂಬಂಧಿಸಿದ ಅರಮನೆಯೊಂದು ಗರ್ವಾಲೆಯಲ್ಲಿ ನಾಮಾವಶೇಷಗೊಂಡು, ಇಡೀ ಪ್ರದೇಶ ಕಾಡುಪಾಲಾಗಿರುವ ದೃಶ್ಯ ಕಂಡುಬಂದಿದೆ. ಸುಮಾರು 200 ವರ್ಷಗಳ ಹಿಂದೆ ಮಡಿಕೇರಿಯನ್ನು ಕೇಂದ್ರವಾಗಿಟ್ಟುಕೊಂಡು, ರಾಜಪರಂಪರೆ ಅಲ್ಲಲ್ಲಿ ಅರಮನೆ ಶಾಖೆಗಳೊಂದಿಗೆ ಆಡಳಿತ ನಡೆಸಿರುವ ಇತಿಹಾಸವಿದೆ.
ಈ ಕಾಲಘಟ್ಟದಲ್ಲಿ ಏಳು ಸಾವಿರ ಸೀಮೆಯ ಸೂರ್ಲಬ್ಬಿ ನಾಡಿನ ಗರ್ವಾಲೆಯನ್ನು ಕೇಂದ್ರವಾಗಿ ಇರಿಸಿಕೊಂಡು ರಾಜರು ಆಳ್ವಿಕೆ ನಡೆಸಿರುವ ಕುರುಹು ಪತ್ತೆಯಾಗಿದೆ. ಆದರೆ 1834ರ ಅವಧಿಗೆ ಕೊಡಗು ರಾಜಪರಂಪರೆಯ ಆಳ್ವಿಕೆ ಕೊನೆಗೊಂಡ ಬಳಿಕ, ಗರ್ವಾಲೆ ಅರಮನೆ ನಿರ್ವಹಣೆಯಿಲ್ಲದೆ ನೆಲಕಚ್ಚಿ ಹೋಗಿದ್ದಾಗಿ ಅಲ್ಲಿನ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ರಾಜರ ಆಳ್ವಿಕೆಯಲ್ಲಿ ಗರ್ವಾಲೆ ಅರಮನೆಗೆ ಸಂಬಂಧಿಸಿದಂತೆ ಶಿವನ ಆರಾಧನೆ ಹಾಗೂ ದೇವಿ ಆರಾಧನೆಯ ಗುಡಿಗಳು ಇಂದಿಗೂ ಗ್ರಾಮಸ್ಥರಿಂದ ಪೂಜೆಗೊಳ್ಳುತ್ತಾ ಬಂದಿದೆ. ಅಲ್ಲದೆ ಅರಮನೆ ದೈವಗಳಿಗೂ ವರ್ಷಕ್ಕೊಮ್ಮೆ ಸೇವೆ ನಡೆಸಲಾಗುತ್ತಿದೆ ಎಂದು ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಕನ್ನಿಕಂಡ ಸುಭಾಷ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಆದರೆ ತೀರಾ ಅಪರೂಪವೆಂಬಂತೆ ವಿಶಾಲ ಪರಿಸರದಲ್ಲಿ ಇದ್ದಂತಹ ಅರಮನೆ ಇತ್ತೀಚಿನ ವರ್ಷಗಳ ಗಾಳಿ ಮಳೆ ನಡುವೆ ಸಂಪೂರ್ಣ ಮಣ್ಣುಪಾಲಾಗಿದೆ. ಹೀಗಿದ್ದರೂ ಕಾಡಿನ ನಡುವೆ ಅಪರೂಪದ ಕೆತ್ತನೆಯಿಂದ ಕೂಡಿರುವ ಕಲ್ಲಿನ ಅವಶೇಷಗಳು ಇಂದಿಗೂ ಗರ್ವಾಲೆ ಅರಮನೆಯ ಕತೆ ಹೇಳುತ್ತಿವೆ.
ಸಂರಕ್ಷಣೆಗೆ ಕ್ರಮ: ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಕಾಡುಪಾಲಾಗಿರುವ ಅರಮನೆಯ ಅವಶೇಷಗಳ ಸಂರಕ್ಷಣೆಗೆ ಗರ್ವಾಲೆ ಗ್ರಾ.ಪಂ.ನಿಂದ ಪ್ರಯತ್ನ ಕೈಗೊಂಡಿರುವುದಾಗಿ ಅಧ್ಯಕ್ಷರು ‘ಶಕ್ತಿ’ಯೊಂದಿಗೆ ವಿವರಿಸಿದ್ದಾರೆ. ಮಡಿಕೇರಿ ಓಂಕಾರೇಶ್ವರ ಕೆರೆಯಂತೆ ಗರ್ವಾಲೆಯಲ್ಲೂ ಕೆರೆ ಇದ್ದು, ಬ್ರಿಟಿಷರ ಕಾಲದಲ್ಲಿ ಎಲ್ಲವೂ ಕಡೆಗಣಿಸಲ್ಪಟ್ಟಿದ್ದಾಗಿ ಅವರು ನೆನಪಿಸಿದ್ದಾರೆ.
ಚಿನ್ನದ ಆಸನ ಕತೆ: ಈ ಕೆರೆಗೆ ರಾಜಪರಂಪರೆಯ ಚಿನ್ನದ ಆಸನದ (ಮುಕ್ಕಾಲಿ) ಕತೆ ಹೆಣೆದುಕೊಂಡಿದೆ. ರಾಜರ ಆಳ್ವಿಕೆ ಕೊನೆಗೊಂಡ ಬೆನ್ನಲ್ಲೇ, ತಾನು ಸೆರೆಯಾಗುವ ಭಯದಿಂದ ಅಲ್ಲಿನ ರಾಜಕುಮಾರನೊಬ್ಬ ತನ್ನ ಆಸನ ಸಹಿತ ಆಭರಣಗಳನ್ನು ಈ ಕೆರೆಯಲ್ಲಿ ಎಸೆದು ತಲೆಮರೆಸಿಕೊಂಡನೆನ್ನಲಾಗುತ್ತಿದೆ.
ಪರಿಣಾಮ ಈ ಕೆರೆಯತ್ತ ಯಾರೂ ಸುಳಿಯುವುದಿಲ್ಲವೆಂದೂ, ಈಚೆಗೆ ಗ್ರಾ.ಪಂ.ನಿಂದ ಜೆಸಿಬಿ ಯಂತ್ರ ಬಳಸಿ ದುರಸ್ತಿಗೆ ಮುಂದಾಗಿದ್ದಾಗ, ಯಂತ್ರವೇ ಮುಳುಗಡೆಗೊಂಡು, ಬಳಿಕ ಇಟಾಚಿ ಇನ್ನಿತರ ಆಧುನಿಕ ಯಂತ್ರಗಳ ಸಹಾಯದಿಂದ ಜೆಸಿಬಿಯನ್ನು ಹರಸಾಹಸದಿಂದ ಹೊರತಂದಿದ್ದಾಗಿ ನೆನಪಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಗರ್ವಾಲೆ, ಸೂರ್ಲಬ್ಬಿ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ, ಕಿರುದಾಲೆ, ಶಿರಂಗಳ್ಳಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು ಗರ್ವಾಲೆ ಅರಮನೆ ಆಳ್ವಿಕೆಗೆ ಒಳಪಟ್ಟಿದ್ದಾಗಿ ಅವರು ಅಭಿಪ್ರಾಯಪಡುತ್ತಾರೆ. ಇಂದಿಗೂ ಮಂಗಳೂರು ಕೆತ್ತನೆಯ ಇಟ್ಟಿಗೆ ಗೋಡೆ, ನೆಲಹಾಸು, ಕಲ್ಲಿನ ಕಟ್ಟೊಳೆಗಳು, ಮೆಟ್ಟಿಲುಗಳು, ದೈವನೆಲೆಗಳು ಅರಮನೆಯ ಆಳ್ವಿಕೆಗೆ ಸಾಕ್ಷಿಯಾಗಿವೆ. ಕೊಡಗಿನ ರಾಜಪರಂಪರೆಯ ಕಾಲಘಟ್ಟದ ಈ ಅವಶೇಷಗಳು ಸಂರಕ್ಷಿಸಲ್ಪಟ್ಟರೆ, ಯುವ ಪೀಳಿಗೆಗೆ ಗರ್ವಾಲೆಯಂತಹ ಗ್ರಾಮೀಣ ಭಾಗದ ಗತವೈಭವದ ಇತಿಹಾಸ ನೆನಪಿಸಿದಂತಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಸಹಿತ ಗ್ರಾಮಸ್ಥರ ಆಶಯವಾಗಿದೆ.
-ಶ್ರೀಸುತ