ಕೂಡಿಗೆ, ಜು. 7: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹುದುಗೂರು ಗ್ರಾಮದಲ್ಲಿ ಬ್ರಿಟೀಷರ ಕಾಲದಲ್ಲಿ ಕಾಡಾನೆಗಳನ್ನು ಹಿಡಿದು ಯಡವನಾಡು ಮತ್ತು ಜೇನುಕಲ್ಲು ಬೆಟ್ಟದ ಹತ್ತಿರ ಅವುಗಳನ್ನು ಪಳಗಿಸಿ ಹುದುಗೂರು ಆನೆ ಶಿಬಿರದಲ್ಲಿ ತರಬೇತಿ ನೀಡಲಾಗುತಿತ್ತು. ನೂರಾರು ವರ್ಷಗಳ ಹಿಂದೆ ಬ್ರಿಟೀಷ್ ಸಾಮ್ರಾಜ್ಯದ ಸೈನಿಕರು ಹಾರಂಗಿ ಸಮೀಪದಲ್ಲಿ ಬಿಡಾರ ಹೂಡಿ ಮುಂದಿನ ಯುದ್ಧದ ಸಿದ್ಧತೆಯ ಬಗ್ಗೆ ತಾಲೀಮು ನಡೆಸುವ ಸಂದರ್ಭದಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿ ಅನೇಕ ಸೈನಿಕರನ್ನು ಬಲಿಪಡೆದಿತ್ತು. ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಲು ಒಂದು ಯೋಜನೆಯನ್ನು ರೂಪಿಸಿ ಈ ಶಿಬಿರವನ್ನು ಪ್ರಾರಂಭಿಸಿದ್ದರು.

ಅಂದಿನಿಂದ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ನಮ್ಮ ರಾಜ್ಯ ಸರ್ಕಾರ ಅಲ್ಲಿನ ವ್ಯವಸ್ಥೆಗಳನ್ನು ಪರಿಗಣಿಸಿ ತರಬೇತಿ ವ್ಯವಸ್ಥೆಗೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ರೂಪಿಸಿ ಆಹಾರ ತಯಾರಿಸುವ ಕೊಠಡಿ, ಆನೆ-ಮಾವುತರ ವಸತಿ ನಿಲಯ, ಆನೆಗಳ ಆಹಾರ ಸಂಗ್ರಹದ ಗೋದಾಮು ಇಂದಿಗೂ ನೆನಪಾಗಿ ಉಳಿದಿದೆ. ಇತಿಹಾಸ ಪುಟ ಸೇರಿದ ಹುದುಗೂರು ಸಾಕಾನೆ ತರಬೇತಿ ಶಿಬಿರ ಕೆಲ ವರ್ಷಗಳವರೆಗೆ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆಯ ವತಿಯಿಂದ 1990 ರಿಂದ 2004 ರವರೆಗೆ ಹುದುಗೂರುವಿನಲ್ಲಿ ಸಾಕಾನೆಗಳ ಕೇಂದ್ರವಾಗಿತ್ತು. ಈ ಶಿಬಿರದಲ್ಲಿ ಬ್ರಿಟೀಷರು ಬಳಸುತ್ತಿದ್ದ ಎಲ್ಲಾ ಮಣ್ಣಿನ ಮನೆಗಳು, ಆನೆ ಕೊಠಡಿಗಳು, ಆಹಾರ ಸಂಗ್ರಹ ಕೊಠಡಿಗಳನ್ನು ಅರಣ್ಯ ಇಲಾಖೆಯವರು ಬಳಸಿಕೊಳ್ಳುತ್ತಿದ್ದರು.

2004 ರಲ್ಲಿ ಕುಶಾಲನಗರ ವಲಯ ಅರಣ್ಯ ಇಲಾಖೆಯ ವತಿಯಿಂದ ಆನೆಕಾಡು, ದುಬಾರೆ, ಮತ್ತಿಗೋಡು ಪ್ರದೇಶಗಳಲ್ಲಿ ಶಿಬಿರ ಪ್ರಾರಂಭಿಸಲಾಗಿತ್ತು. ಆನೆಗಳಿಗೆ ಬೇಕಾಗುವ ನೀರಿನ ವ್ಯವಸ್ಥೆಗೆ ಸಮೀಪದಲ್ಲಿರುವ 100 ಮೀಟರ್ ಅಂತರದಲ್ಲಿ ಹಾರಂಗಿ ನದಿ ಇದೆ. ಇದರಿಂದ. ವರ್ಷಪೂರ್ತಿ ನೀರಿನ ಸೌಕರ್ಯ ಸಿಕ್ಕುತಿತ್ತು. ಇದರಿಂದ ಶಿಬಿರದಲ್ಲಿ ಆನೆ ತರಬೇತಿಗೆ ಬಹಳ ಅನುಕೂಲವಾಗುತಿತ್ತು ಎಂಬದು ಹಿರಿಯ ನಾಗರಿಕರ ಅಭಿಪ್ರಾಯವಾಗಿದೆ. 2008-2009ನೇ ಸಾಲಿನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲೇಶ್ ಅವರು ಮತ್ತೆ ಹುದುಗೂರುವಿನಲ್ಲಿ ಆನೆ ಶಿಬಿರವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದರು. ಅದು ಕೂಡ ಸಾಕಾರಗೊಳ್ಳಲಿಲ್ಲ ಎಂಬುದು ಬೇಸರದ ಸಂಗತಿ. ಈ ಶಿಬಿರಕ್ಕೆ ಕಾಯಕಲ್ಪ ಅಗತ್ಯ. - ಕೆ.ಕೆ. ನಾಗರಾಜ ಶೆಟ್ಟಿ