ಮಡಿಕೇರಿ, ಜು. 7: ಕೊಡಗು ಜಿಲ್ಲೆಯಲ್ಲಿ ಜಾಗತಿಕ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ದಿಸೆಯಲ್ಲಿ; ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಇಂದು ನೂತನವಾಗಿ ಮರು ಆದೇಶ ಹೊರಡಿಸಿದ್ದು, ಹೊರಗಿನಿಂದ ಕೊಡಗಿಗೆ ಬರುವಂತಹ ವಿದೇಶಿ ಪ್ರವಾಸಿಗರ ಸಹಿತ ಹೊರ ರಾಜ್ಯ, ಹೊರ ಜಿಲ್ಲೆಯವರಿಗೂ ವಾಸ್ತವ್ಯಕ್ಕೆ ಅವಕಾಶ ನೀಡದಂತೆ ಸೂಚಿಸಿದ್ದಾರೆ. ಈ ಆದೇಶವನ್ನು ಕಡ್ಡಾಯವಾಗಿ ಸಂಬಂಧಪಟ್ಟವರು ಪಾಲಿಸಬೇಕೆಂದೂ, ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಸಿದ್ದಾರೆ.ಜಿಲ್ಲೆಯ ಎಲ್ಲಾ ಹೊಟೇಲ್, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ವಸತಿ ಗೃಹ ಇತ್ಯಾದಿಗಳಲ್ಲಿ ವಸತಿ ಸೌಕರ್ಯ ನೀಡದಂತೆ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಇಂದಿನಿಂದ ಮುಂದಿನ ಆದೇಶದವರೆಗೆ ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲಾ ಹೊಟೇಲ್, ಹೋಂಸ್ಟೇ, ರೆಸಾರ್ಟ್, ಲಾಡ್ಜ್, ವಸತಿ ಗೃಹ ಇತ್ಯಾದಿಗಳಲ್ಲಿ ವಸತಿ ಸೌಕರ್ಯ ನೀಡತಕ್ಕದ್ದಲ್ಲ. ಅಲ್ಲದೆ, ಇನ್ನು ಮುಂದೆ ಜಿಲ್ಲೆಯ ಹೊರಭಾಗದ ಪ್ರವಾಸಿಗರ ಆನ್ಲೈನ್, ಆಫ್ಲೈನ್ ಮುಂತಾದ ಯಾವುದೇ ರೂಪದ ಬುಕ್ಕಿಂಗ್ ಸ್ವೀಕರಿಸತಕ್ಕದ್ದಲ್ಲ.
ಈಗಾಗಲೇ ಜಿಲ್ಲೆಗೆ ಆಗಮಿಸಿ ವಸತಿ ಸೌಕರ್ಯ ಹೊಂದಿರುವ ಪ್ರವಾಸಿಗರನ್ನು ಬಲವಂತವಾಗಿ ಕಳುಹಿಸದೆ, ಅವರು ಈಗಾಗಲೇ ವಾಸ್ತವ್ಯಕ್ಕೆ ಕಾಯ್ದಿರಿಸಿದ ಅವಧಿ ಪೂರ್ಣಗೊಳ್ಳುವವರೆಗೆ ಕಾಯುವುದು ಎಂದು ಸಂಬಂಧಿಸಿದ ಮಾಲೀಕರಿಗೆ ಸೂಚಿಸಲಾಗಿದೆ. ಪ್ರವಾಸಿ ಉದ್ದೇಶಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿ ಆಗಮಿಸಿರದಿದ್ದಲ್ಲಿ, ಅಂತಹವರು ಆಗಮಿಸುವ ಮುಂಚಿತವಾಗಿ ಅವರಿಗೆ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಪಡಿಸುವಂತೆ ನಿರ್ದೇಶಿಸಲಾಗಿದೆ.
ತುರ್ತು ಹಾಗೂ ವೈದ್ಯಕೀಯ ಮತ್ತು ಅನಿವಾರ್ಯ ಪರಿಸ್ಥಿತಿಯಲ್ಲಿ ಆಗಮಿಸುವವರಿಗೆ ನಿರ್ಬಂಧ ಇರುವುದಿಲ್ಲ. ಆದರೆ ಈ ರೀತಿಯಾಗಿ ಆಗಮಿಸಿದ್ದಲ್ಲಿ ಅವರು ಆಗಮಿಸುವ ಕಾರಣ ಮತ್ತು ಅವರ ವಿವರಗಳನ್ನು ಪಡೆದು ವಸತಿ ಸೌಕರ್ಯ ನೀಡುವದು ಮತ್ತು ಈ ಮಾಹಿತಿಯನ್ನು ಸ್ಥಳೀಯ ಕಾರ್ಯವ್ಯಾಪ್ತಿಯ ಆರಕ್ಷಕ ಠಾಣೆ, ನಗರಸಭೆ, ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತ್ಗೆ ಆ ಕೂಡಲೇ ನೀಡುವದು ಕಡ್ಡಾಯವಾಗಿದೆ. ಮೇಲ್ಕಂಡ ಆದೇಶದ ಉಲ್ಲಂಘನೆಯು ಭಾರತೀಯ ದಂಡ ಸಂಹಿತೆ 1860ರ ಕಲಂ 188 ರೀತ್ಯಾ ದಂಡನೀಯವಾಗಿದ್ದು, ಕಡ್ಡಾಯವಾಗಿ ಪಾಲಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ.