ಕೊರೊನಾ ತಡೆಗೆ ಕೇರಳ ಸರ್ಕಾರದಿಂದ ಮಹತ್ವದ ಕ್ರಮ
ತಿರುವನಂತಪುರ, ಜು. 6: 2021ರ ಜುಲೈ ಅಂತ್ಯದವರೆಗೆ ಮಾಸ್ಕ್ ಧರಿಸುವಂತೆ ಕೇರಳ ಸರಕಾರ ಸುಗ್ರಿವಾಜ್ಞೆ ಮೂಲಕ ಆದೇಶ ಹೊರಡಿಸಿದೆ. ಹೆಚ್ಚುತ್ತಿರುವ ಸೋಂಕಿನ ಹತೋಟಿಗೆ ಮುಖ್ಯ ಕ್ರಮಕೈಗೊಂಡಿದ್ದು, ಮಾಸ್ಕ್ ಧರಿಸದೇ ಹೋದಲ್ಲಿ 10 ಸಾವಿರ ರೂ. ದಂಡ ಅಥವಾ 2 ವರ್ಷ ಜೈಲುಶಿಕ್ಷೆ ವಿಧಿಸಲು ನಿರ್ಧರಿಸಿದೆ. ಮದುವೆಗಳಿಗೆ 50 ಜನ ಮಾತ್ರ ಸೇರಬೇಕು. ಅಂತ್ಯಕ್ರಿಯೆಗೆ 20 ಜನ ಮಾತ್ರ ಸೇರಲು ಅವಕಾಶವಿದ್ದು, 2021 ಜುಲೈ ಅಂತ್ಯದವರೆಗೂ ಇದೇ ನಿಯಮ ಜಾರಿ.
ದೇಶದಲ್ಲಿ ಗೊಬ್ಬರದ ಕೊರತೆ ಇಲ್ಲ
ನವದೆಹಲಿ, ಜು.6 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಹೇಳಿದ್ದಾರೆ. ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿ, ಅಗತ್ಯ ಪ್ರಮಾಣದಷ್ಟು ರಸಗೊಬ್ಬರವನ್ನು ಈಗಾಗಲೇ ರಾಜ್ಯಗಳಿಗೆ ಪೂರೈಸಿ, ದಾಸ್ತಾನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ನವದೆಹಲಿಯಲ್ಲಿಂದು ತಮ್ಮನ್ನು ಭೇಟಿ ಮಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ವಿಷಯ ತಿಳಿಸಿದ ಡಿ.ವಿ. ಸದಾನಂದಗೌಡ, ರಸಗೊಬ್ಬರ ಸಚಿವಾಲಯ ನಿರಂತರವಾಗಿ ರಸಗೊಬ್ಬರ ಲಭ್ಯತೆಯ ಬಗ್ಗೆ ತೀವ್ರ ನಿಗಾ ಇರಿಸಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಂದ ಯೂರಿಯಾ ಪೂರೈಕೆಗೆ ಬೇಡಿಕೆ ಎದುರಾದರೆ ಅದನ್ನು ಪೂರೈಸಲು ಬದ್ಧವಿದೆ ಎಂದರು. ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರೈತರಿಗೆ ಸಕಾಲದಲ್ಲಿ ಕೈಗೆಟಕುವ ದರದಲ್ಲಿ ಸೂಕ್ತ ಪ್ರಮಾಣದ ರಸಗೊಬ್ಬರ ಪೂರೈಕೆಯನ್ನು ಖಾತ್ರಿಪಡಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು.
ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ
ಬೆಂಗಳೂರು, ಜು.6 : ಕೋವಿಡ್ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ಡಿ' ಗ್ರೂಪ್ ನೌಕರರಿಗೆ ವೇತನ ದುಪ್ಪಟ್ಟು ಮಾಡುವುದು ಸೇರಿದಂತೆ ಎಲ್ಲಾ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದ್ದು 2-3 ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿದರು. ಆರೋಗ್ಯ ಯೋಧರಾಗಿ ಕೆಲಸ ಮಾಡುತ್ತಿರುವ ಎಲ್ಲರೂ ಸುಮಾರು 120 ದಿನಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಹೋಗಿದ್ದಾರೆ. ಅವರುಗಳಿಗೆ ಸೋಂಕು ತಗುಲುವ ಅಪಾಯ ಹೆಚ್ಚಾಗಿದ್ದು ಅವರ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಹೆಚ್ಚುವರಿ ಭತ್ಯೆ ಅಲ್ಪಮಟ್ಟಿನ ಪರಿಹಾರವಾಗಲಿದೆ ಎಂದು ಅವರು ತಿಳಿಸಿದರು.ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಿಸಲು ಸರ್ಕಾರ ಮತ್ತಷ್ಟು ಬಿಗಿಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿದಿನ ಕೋವಿಡ್ ಟೆಸ್ಟಿಂಗ್ ಹೆಚ್ಚಿಸುವ ಗುರಿಹೊಂದಲಾಗಿದ್ದು ಕಳೆದ 24 ಗಂಟೆಗಳಲ್ಲಿ 15 ಸಾವಿರಕ್ಕೂ ಅಧಿಕ ಪರೀಕ್ಷೆ ನಡೆಸಲಾಗಿದೆ, ಟೆಸ್ಟಿಂಗ್ ನಿರ್ವಹಣೆಗೆ ಹಿರಿಯ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರದಿಂದ ವಿವಾದದ ಹೆಡ್‍ಲೈನ್ ನಿರ್ವಹಣೆ
ನವದೆಹಲಿ, ಜು.6 : ಭಾರತ-ಚೀನಾ ಗಡಿ ವಿವಾದಗಳ ಹೆಡ್ ಲೈನ್ ನ್ನು ನಿರ್ವಹಿಸುವುದಕ್ಕಾಗಿ ಬಿಜೆಪಿ ಗಮನ ಬೇರೆಡೆಗೆ ಸೆಳೆಯುವ ಅಗ್ಗದ ಸಾಹಸದ ಮೊರೆ ಹೋಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಂಸತ್ ನ ರಕ್ಷಣಾ ಸ್ಥಾಯಿ ಸಮಿತಿ ಸಭೆಗೆ ಗೈರಾಗುತ್ತಿರುವುದರ ಬಗ್ಗೆ ರಾಹುಲ್ ಗಾಂಧಿಯನ್ನು ಬಿಜೆಪಿ ಟೀಕಿಸಿದ್ದರ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ಬಿಜೆಪಿ ಸರ್ಕಾರ ತನ್ನ ಶಕ್ತಿಯನ್ನು ಚೀನಾ ವಿರುದ್ಧ ಹೋರಾಡಲು ಬಳಸಿ, ಸೇನೆಗೆ ಬೆಂಬಲ ನೀಡಿದ್ದರೆ ಚೀನಾದ ಅತಿಕ್ರಮಣದ ವಿಷಯದಲ್ಲಿ ದೇಶದ ಜನತೆಗೆ ಸುಳ್ಳು ಹೇಳಿ ದಾರಿತಪ್ಪಿಸುವ ಅವಶ್ಯಕತೆ ಬರುತ್ತಿರಲಿಲ್ಲ ಎಂದು ಪಕ್ಷದ ವಕ್ತಾರ ರಣ್ದೀಪ್ ಸುರ್ಜೆವಾಲ ಹೇಳಿದ್ದಾರೆ. ರಾಹುಲ್ ಗಾಂಧಿ ಚೀನಾ ವಿಷಯದಲ್ಲಿ ಪ್ರತಿದಿನ ಪ್ರಧಾನಿಯನ್ನು ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ರಾಹುಲ್ ಗಾಂಧಿ ಸಂಸತ್ ನ ರಕ್ಷಣಾ ಸ್ಥಾಯಿ ಸಮಿತಿಗಳ ಒಂದೇ ಒಂದು ಸಭೆಯಗೂ ಹಾಜರಾಗುವುದಿಲ್ಲ. ಆದರೆ ದೇಶದ ಸ್ಥೈರ್ಯ ಕುಗ್ಗಿಸುವ, ಸೇನೆಯ ಶೌರ್ಯವನ್ನು ಪ್ರಶ್ನಿಸುವ ಮಾತುಗಳನ್ನಾಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದ್ದರು.
ಪಾಸಿಟಿವ್ ಸಂಖ್ಯೆ ಶೇ.10ಕ್ಕೆ ಕುಸಿತ
ನವದೆಹಲಿ, ಜು.6 : ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ದಿನ ಕಳೆದಂತೆ ಕೊರೊನಾ ಟೆಸ್ಟ್ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ ಪಾಸಿಟಿವ್ ಸಂಖ್ಯೆ ಶೇ.30ರಿಂದ ಶೇ.10ಕ್ಕೆ ಕುಸಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ ವೇಳೆ ದೇಶದಲ್ಲಿ ನಡೆಯುತ್ತಿರುವ ಕೊರೊನಾ ಟೆಸ್ಟ್ ಸಂಖ್ಯೆ ಪೈಕಿ ಕೇವಲ 6.73ರಷ್ಟು ಮಾತ್ರ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದಲ್ಲಿ ಕೊರೊನಾ -19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ, ರಾಜ್ಯ ಮತ್ತು ಕೇಂದ್ರ ಪ್ರದೇಶದ ಸರ್ಕಾರಗಳು ಜಂಟಿ ಮತ್ತು ಸಂಘಟಿತ ಪ್ರಯತ್ನವನ್ನು ಮಾಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಸಂಘಟಿತ ಪ್ರಯತ್ನಗಳ ಭಾಗವಾಗಿ, ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಪರೀಕ್ಷೆ, ತ್ವರಿತ ಸಂಪರ್ಕ ಪತ್ತೆ ಮತ್ತು ಪ್ರಕರಣಗಳ ಸಮಯೋಚಿತ ಕ್ಲಿನಿಕಲ್ ನಿರ್ವಹಣೆಗೆ ಒತ್ತು ನೀಡಿತ್ತು. ರಾಜ್ಯ ಸರ್ಕಾರಗಳು ಪರೀಕ್ಷಾ ಸಾಮಥ್ರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಇದು ದೇಶದಲ್ಲಿ ಪಾಸಿಟಿವ್ ದರವನ್ನು ಕಡಿಮೆ ಮಾಡಲು ಕಾರಣವಾಗಿದೆ ಮತ್ತು ದೇಶದಲ್ಲಿನ ಪಾಸಿಟಿವ್ ದರವು ಶೇಕಡಾ 6.73 ರಷ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸದೆ ಸುಮಲತಾಗೆ ಕೊರೊನಾ ದೃಢ
ಮಂಡ್ಯ, ಜು.6 : ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಕೊರೊನಾ ವೈರಸ್ ತಗುಲಿದೆ. ಶನಿವಾರ, ತಾ. 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀನಿ. ರೋಗನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ. ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ನಿಮ್ಮ ಹಾರೈಕೆ ಇರಲಿ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಒಂದೇ ದಿನ ರಾಜ್ಯದಲ್ಲಿ 30 ಬಲಿ
ಬೆಂಗಳೂರು, ಜು.6 : ರಾಜ್ಯದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಸೋಮವಾರ ಒಂದೇ ದಿನ 30 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 402ಕ್ಕೇರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 10 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 981 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 1843 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದ