ಕುಶಾಲನಗರ, ಜು. 6: ಕುಶಾಲನಗರದ ದಂಡಿನಪೇಟೆ ಮತ್ತು ಬಸವನಹಳ್ಳಿ ವ್ಯಾಪ್ತಿಯಲ್ಲಿ ಇಬ್ಬರು ಕೊರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾದ ಹಿನೆÀ್ನಲೆಯಲ್ಲಿ ಆ ಪ್ರದೇಶವನ್ನು ನಿರ್ಭಂದಿತ ವಲಯವನ್ನಾಗಿ ಘೋಷಿಸಲಾಗಿದೆ. ಕುಶಾಲನಗರ ಪಟ್ಟಣದ ದಂಡಿನಪೇಟೆಯಲ್ಲಿ 58 ವರ್ಷದ ವ್ಯಕ್ತಿಯೊಬ್ಬರಿಗೆ ಸೊಂಕು ತಗುಲಿ ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಪತ್ತೆಹಚ್ಚಲು ಕ್ರಮಕೈಗೊಳ್ಳಲಾಗಿದೆ. ವ್ಯಕ್ತಿ ನೆಲೆಸಿದ್ದ ಮನೆಯ 100 ಮೀ. ಅಂತರದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ.
ಇದರೊಂದಿಗೆ ಮೃತ ವ್ಯಕ್ತಿ ಚಿಕಿತ್ಸೆಗೆ ತೆರಳಿದ ಖಾಸಗಿ ಆಸ್ಪತ್ರೆಯನ್ನು ಬಂದ್ ಮಾಡುವುದರೊಂದಿಗೆ ಅಲ್ಲಿನ ವೈದ್ಯರು, ತಂತ್ರಜ್ಞರು ಸೇರಿದಂತೆ ಒಟ್ಟು 7 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇನ್ನುಳಿದಂತೆ ಕಳೆದ 1 ವಾರದ ಅವಧಿಯಲ್ಲಿ ಸೋಂಕಿತ ವ್ಯಕ್ತಿ ಓಡಾಡಿದ ಮನೆ, ಪ್ರದೇಶಗಳನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.
ಗುಡ್ಡೆಹೊಸೂರು ಸಮೀಪದ ಮನೆಯೊಂದರಲ್ಲಿ 31 ವರ್ಷದ ವ್ಯಕ್ತಿಗೆ ಸೋಂಕು ಪತ್ತೆಯಾದ ಕಾರಣ ಆತನ ಕುಟುಂಬ ಸದಸ್ಯರನ್ನು ಕ್ವಾರಂಟೈನ್‍ಗೆ ಒಳಪಡಿಸುವುದರೊಂದಿಗೆ ಸೀಮಿತ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸೋಂಕು ತಗುಲಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಕುಶಾಲನಗರದ ದಂಡಿನಪೇಟೆ ಮೂಲದ ವ್ಯಕ್ತಿ ಆಟೋ ಚಾಲಕನಾಗಿದ್ದು, ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ನೆಲೆಸಿದ್ದ. ಕೆಲವು ಸಮಯದಿಂದ ಬೆಂಗಳೂರಿನಲ್ಲಿ ವಾಸವಾಗಿ ಕಳೆದ 10 ದಿನದಿಂದ ಕುಶಾಲನಗರದ ದಂಡಿನಪೇಟೆಯಲ್ಲಿರುವ ಸಹೋದರನ ಮನೆಗೆ ಕುಟುಂಬ ಸಮೇತ ಆಗಮಿಸಿದ್ದರು. ಈ ಅವಧಿಯಲ್ಲಿ ಸೋಂಕು ತಗುಲಿದ ವ್ಯಕ್ತಿ ಕುಶಾಲನಗರ, ಕೊಪ್ಪ, ಗುಡ್ಡೇನಹಳ್ಳಿ, ಬೆಟ್ಟದಪುರ ಮುಂತಾದ ಕಡೆ ಓಡಾಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಈ ಹಿನೆÀ್ನಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಗಳ ಪತ್ತೆಹಚ್ಚಲು ಕ್ರಮಕೈಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವೃತ್ತ ನಿರೀಕ್ಷಕ ಮಹೇಶ್, ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್, ಆರೋಗ್ಯಾಧಿಕಾರಿ ಉದಯಕುಮಾರ್, ತಾಲೂಕು ಇಒ ಸುನಿಲ್, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಪ್ರಕರಣ ಹೊರಬಿದ್ದ ಬೆನ್ನಲ್ಲೇ ಕುಶಾಲನಗರ ಮತ್ತು ಕೊಪ್ಪ ಭಾಗದ ಜನತೆ ಆತಂಕಕ್ಕೆ ಒಳಗಾಗಿದ್ದು, ಹೆಚ್ಚಿನ ಮಂದಿ ಕೊರೊನಾ ಪರೀಕ್ಷೆಗೆ ದಾಖಲಾಗುತ್ತಿರುವುದು ಕಂಡುಬಂದಿದೆ.