ಮಡಿಕೇರಿ, ಜು. 4: ಕೊಡವ ಬುಡಕಟ್ಟು ಕುಲಕ್ಕೆ ಎಸ್‍ಟಿ ಪಟ್ಟಿಯಲ್ಲಿ ಮಾನ್ಯತೆ ನೀಡಬೇಕು. ಈ ಮೂಲಕ ಅಲ್ಪಸಂಖ್ಯಾತ ಕೊಡವ ಜನಾಂಗಕ್ಕೆ ರಾಜ್ಯಾಂಗ ಖಾತ್ರಿ ನೀಡಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯಿಂದ ಸತ್ಯಾಗ್ರಹ ನಡೆಸಲಾಯಿತು.

ಕೊಡವರನ್ನ ಎಸ್.ಟಿ. ಪಟ್ಟಿಗೆ ಸೇರಿಸುವ ಮೂಲಕ ಅವರ ಅಧಿಕೃತ ದಾಖಲೆಗಳಿಲ್ಲದ ಪೂರ್ವಾಜಿತ ಆಸ್ತಿ, ಚಾರಿತ್ರಿಕ ನಿರಂತರತೆ, ಭಾಷೆ, ಸಂಸ್ಕøತಿ, ರಾಜಕೀಯ ಸಬಲೀಕರಣ, ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ರಾಜ್ಯಾಂಗ ಖಾತ್ರಿಗೆ ಒಳಪಡಿಸಬೇಕು. ಅದಕ್ಕಾಗಿ ಇದೀಗ ಸಿ.ಎನ್.ಸಿ/ಕೊಡವ ನ್ಯಾಷನಲ್ ಕೌನ್ಸಿಲ್ ಹಕ್ಕೋತ್ತಾಯದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ (ಕೆ.ಎಸ್.ಟಿ.ಆರ್.ಐ) ನಡೆಯುತ್ತಿರುವ ಕೊಡವರ ಕುಲಶಾಸ್ತ್ರ ಅಧ್ಯಯನವು ಲೋಕೂರು ಕಮಿಟಿಯ ಮಾನದಂಡಗಳ ಆಧಾರದಲ್ಲಿ ಯಾವುದೇ ಪೂರ್ವಾಗ್ರಹ ಇಲ್ಲದೆ ನಡೆಯಬೇಕು. ಇಲ್ಲಾ ಇದರಲ್ಲಿ ಎಡವಿದರೆ ಮರು ಅಧ್ಯಯನ ನಡೆಸಬೇಕು. ಅಥವಾ, ನೇರವಾಗಿ ಸ್ವಾತಂತ್ರ್ಯ ಪೂರ್ವದ ‘ಎಮಿಕ್ ಅಪ್ರೋಚ್’ನಲ್ಲಿ ರೂಪಿಸಲಾದ ಎಲ್ಲಾ ದಾಖಲೆಗಳ ನಿಖರತೆಯ ಆಧಾರದಲ್ಲಿ ಯಾವುದೇ ಅಧ್ಯಯನವಿಲ್ಲದೆ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಎನ್.ಯು. ನಾಚಪ್ಪ ನೇತೃತ್ವದಲ್ಲಿ ಧರಣಿ ನಡೆಸಿದ ಸಂಘಟನೆ ಕಾರ್ಯಕರ್ತರು ಬಳಿಕ ಉಪವಿಭಾಗಾಧಿಕಾರಿ ಜವರೇಗೌಡ ಅವರ ಮೂಲಕ ಸರಕಾರಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದರು. ಈ ಸಂದರ್ಭ ಕಲಿಯಂಡ ಪ್ರಕಾಶ್, ಪುಲ್ಲೆರ ಕಾಳಪ್ಪ, ಅಪ್ಪಚ್ಚಿರ ರಮ್ಮಿನಾಣಯ್ಯ, ಚೆಂಬಾಂಡ ಜನತ್, ನಂದಿನೆರವಂಡ ಅಪ್ಪಯ್ಯ, ಪುಟ್ಟಿಚಂಡ ಡಾನ್ ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.