ವೀರಾಜಪೇಟೆ, ಜು. 4: ವೀರಾಜಪೇಟೆ ಸರಕಾರಿ ಆಸ್ವತ್ರೆಯನ್ನು ಯಥಾ ಸ್ಥಿತಿಯಾಗಿ ಮುಂದುವರೆಸಿದರೆ, ತಾಲೂಕಿನಾದ್ಯಂತ ಬರುವ ಬಡ ರೋಗಿಗಳ ಚಿಕಿತ್ಸೆಗೆ ಹಾಗೂ ಮುಕ್ತ ಚಿಕಿತ್ಸೆಯ ದಾಖಲಾತಿಗೂ ಅವಕಾಶವಾಗಲಿದೆ. ಈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದರೆ ಸಾರ್ವಜನಿಕ ಆಸ್ಪತ್ರೆಗೆ ಎಲ್ಲ ರೀತಿಯಿಂದಲೂ ತೊಂದರೆ ಯಾಗಲಿದೆ. ಕೊರೊನಾ ಹೊರತಾಗಿ ಇತರ ಎಲ್ಲ ರೋಗಿಗಳಿಗೆ ಈಗಿನಂತೆ ಚಿಕಿತ್ಸೆಗೆ ನಿರ್ಬಂಧವಾಗಲಿದೆ. ಇದನ್ನು ಜಿಲ್ಲಾಡಳಿತ ಗಮನಿಸುವಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ವಿಶ್ವನಾಥ್ ಸಿಂಪಿ ಅಭಿಪ್ರಾಯಪಟ್ಟರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ ಬಿ.ಸಿ. ರಾಯ್ ಅವರ ಸ್ಮಾರಣಾರ್ಥದ ವೈದ್ಯಕೀಯ ದಿನಾಚರಣೆಯನ್ನು ಉದ್ಘಾಟಿಸಿದ ಡಾ. ವಿಶ್ವನಾಥ್ ಸಿಂಪಿ ಮಾತನಾಡಿ, ವೀರಾಜಪೇಟೆಯ ಸುತ್ತಮುತ್ತಲಿನಲ್ಲಿ ಕೋವಿಡ್‍ಗಾಗಿ ಪರ್ಯಾಯ ಆಸ್ಪತ್ರೆಗೆ ಅನೇಕ ಅವಕಾಶಗಳಿವೆ. ದಂತ ವೈದ್ಯಕೀಯ ಸಂಸ್ಥೆ, ದಾದಿಯರ ತರಬೇತಿ ಕೇಂದ್ರ ಸೇರಿದಂತೆ ವೈದ್ಯಕೀಯ ಸೇವೆಗಾಗಿ ಇತರ ಜಾಗ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಸ್ಪತ್ರೆಯ ಶುಶ್ರೂಷಕಿಯರು, ಆರೋಗ್ಯ ಸಿಬ್ಬಂದಿಗಳು ರೋಗಿಗೆ ಚಿಕಿತ್ಸೆ ನೀಡಲು ವಿಶೇಷ ಕಾಳಜಿಯನ್ನು ವಹಿಸಬೇಕು. ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ತಕ್ಷಣಕ್ಕೆ ಯಾವ ಕಾಯಿಲೆ ಎಂದು ಗುರುತಿಸಲು ಅಸಾಧ್ಯವಾದುದರಿಂದ ಶುಶ್ರೂಷಕಿಯರು ಜಾಗೃತರಾಗಿ ಶುಚಿತ್ವ ಹಾಗೂ ಅಗತ್ಯ ನಿಯಮ ಪಾಲನೆ ಮಾಡುವ ಅವಶ್ಯಕತೆ ಇದೆ ಎಂದರು. ದಂತ ವೈದ್ಯರಾದ ಡಾ ಅನಿಲ್ ಧÀವನ್ ಮಾತನಾಡಿ, ಈ ಆಸ್ವತ್ರೆಯನ್ನು ಕೋವಿಡ್ ಆಸ್ವತ್ರೆಯಾಗಿ ಮಾರ್ಪಡಿ ಸಿದರೆ ಬಡ ಕೂಲಿ ಕಾರ್ಮಿಕರೆ ಹೆಚ್ಚಿರುವ ತಾಲೂಕಿನಲ್ಲಿ ಅವರಿಗೆ ಚಿಕಿತ್ಸೆಗೆ ತೊಂದರೆ ಆಗಲಿದೆ. ಜೊತೆಗೆ ಆಸ್ವತ್ರೆಯ ಸುತ್ತ ಮುತ್ತಲೂ ಜನವಸತಿ ಪ್ರದೇಶಗಳಿದ್ದು ಅವರ ಬಗ್ಗೆಯೂ ಕಾಳಜಿ ಅತ್ಯಗತ್ಯವಾಗಿದೆ. ಆದ್ದರಿಂದ ತಾಲೂಕಿನಲ್ಲಿ ಕೋವಿಡ್ ಚಿಕಿತ್ಸೆಗೆ ಪರ್ಯಾಯ ಸ್ಥಳವನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇ.ಸಿ. ಜೀವನ್, ಪ್ರಮುಖರಾದ ಏಜಾಜ್ ಅಹ್ಮದ್ , ವೈದ್ಯರಾದ ಡಾ. ಹೇಮಾ ಪ್ರೀಯ, ಡಾ. ರೇಣುಕ, ಶುಶ್ರೂಷಕಿಯರು, ಆರೋಗ್ಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.