ಭಾಗಮಂಡಲದ ಸಂಗಮದಲ್ಲಿ ಸ್ನಾನ ಮಾಡಿದ ಬಳಿಕ ಸಂಗಮದ ದಡದಲ್ಲಿರುವ ಪವಿತ್ರ ಅಶ್ವತ್ಥ ವೃಕ್ಷಕ್ಕೆ ಮೂರು ಬಾರಿ ಪ್ರದಕ್ಷಿಣೆ ಬರಬೇಕು. ಆ ಸಂದರ್ಭ

ಅಶ್ವತ್ಥಾಯ ವರೇಣ್ಯಾಯ ಸರ್ವೈಶ್ವರ್ಯಪ್ರದಾಯಿನೇ

ಇಷ್ಟ ಕಾಮಾಂಶ್ಚಮೇ ದೇಹಿ ಶತ್ರುಭ್ಯಸ್ತು ಪರಾಭವಂ

ಅಶ್ವತ್ಥ ವೃಕ್ಷನೇ, ಶ್ರೇಷ್ಠನಾದವನೇ, ಸರ್ವ ಐಶ್ವರ್ಯಗಳನ್ನೂ ನೀಡುವವನೇ, ಇಷ್ಟ, ಬಯಕೆಗಳನ್ನು ಈಡೇರಿಸಿ ಶತ್ರ್ರುಗಳನ್ನು ಪರಾಭವ ಗೊಳಿಸು ಎಂದು ಪ್ರಾರ್ಥಿಸಬೇಕು. ಪ್ರದಕ್ಷಿಣೆಯಾದ ಬಳಿಕ ಸನಿಹದಲ್ಲಿಯೇ ಅಗಸ್ತ್ಯ ಕಟ್ಟೆಯಿದೆ. ಆ ಅಗಸ್ತ್ಯ ಕಟ್ಟೆಗೂ ಪ್ರದಕ್ಷಿಣೆ ಮಾಡಿ

ಓಂ ಶ್ರೀಂ ಗ್ರೀಂ ಸದ್ಗುರು ಪಾದ ಕಮಲಾಯ

ಜನ್ಮ ಕರ್ಮ ಪಾಪ ಶಾಪ ವಿಮೋಚನ

ಸಕಲ ಋಣ ರೋಗ ಮೃತ್ಯು ಅಹಂಕಾರ ದುರ್ವಿಮೋಚನ

ಸರ್ವ ದೇವ ಸಕಲ ಸಿದ್ಧಸ್ತೇಜಸ್ವರೂಪಾಯ

ಮಹಾ ಜ್ಞಾನವಿದಯೇ ಕುಂಭ ಸಂಭೂತ ಬ್ರಹ್ಮ ನಿಷ್ಠಾಯ

ಲೋಪಾಮುದ್ರಾಂಬಿಕಾ ಸಹಿತ ಭಗವಾನ್ ಶ್ರೀ ಅಗಸ್ತ್ಯ ಗುರು ಸ್ವಾಮಿನೇ ನಮಃ

ಸೃಷ್ಟಿ ಸ್ಥಿತಿ ಲಯಗಳ ಪಾರಮಾರ್ಥಿಕ ಜ್ಞಾನವುಳ್ಳ ಸದ್ಗುರುವಿನ ಪಾದ ಕಮಲಕ್ಕೆ ನಮಿಸುವೆ. ಋಣ, ರೋಗ, ಮೃತ್ಯು, ಅಹಂಕಾರ, ಜನ್ಮ ದೋಷ, ಪಾಪ, ಶಾಪಗಳನ್ನು ಸರ್ವದೇವತಾ, ತೇಜೋರೂಪಿ ಯಾದ ಮಹಾ ಜ್ಞಾನಿಯಾದ ಕುಂಭಸಂಭವನಾದ, ಮಾತೆ ಲೋಪಾಮುದ್ರಿಕಾ ಸಹಿತನಾದ ಭಗವಾನ್ ಅಗಸ್ತ್ಯ ಗುರುಗಳು ಪರಿಹರಿಸಲಿ ಎಂದು ಪ್ರಾರ್ಥಿಸಬೇಕು. ಬಳಿಕ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ತೆರಳಬೇಕು. ಅಲ್ಲಿ ಪ್ರಥಮವಾಗಿ ಮಹಾಗಣಪತಿಯ ದರ್ಶನ ಮಾಡಿ:-

ವಿನಾಯಕ ಸಮಸ್ತುಭ್ಯಂ ಭಕ್ತಾನಾಮಭಯಪ್ರದ

ತ್ವತ್ಪ್ರಸಾದಾತ್ಫಲಂ ಸರ್ವಂ ಯಾಚಯಾಮಿ ಗಣಾಧಿಪ

ವಿನಾಯಕನೇ, ನಿನಗೆ ನಮಸ್ಕರಿಸುತ್ತೇನೆ. ಭಕ್ತರಿಗೆ ಅಭಯವನ್ನು ನೀಡುವವನೇ, ನಿನ್ನ ಕರುಣೆಯಿಂದ ಸರ್ವ ಫಲಗಳೂ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎನ್ನುತ್ತ-ಮಂಗಳಾರತಿ ಪಡೆದು ಒಳ ಪ್ರಾಂಗಣದಲ್ಲಿ ಭಗಂಡೇಶ್ವರನನ್ನು ದರ್ಶಿಸಿ

ವೃಷಧ್ವಜ ವಿರೂಪಾಕ್ಷ ಭಗಂಡಾಧಿಪ ಶಂಕರ

ಸರ್ವ ಪಾಪವಿನಾಶಾಯ ತೀರ್ಥಂ ದೇಹಿ ಮಹೇಶ್ವರ

ನಂದೀಧ್ವಜವುಳ್ಳ ವಿರೂಪಾಕ್ಷನೇ, ಭಗಂಡನಿಗೆ ಒಡೆಯನಾದ ಶಂಕರನೇ, ಸರ್ವ ಪಾಪಗಳನ್ನೂ ವಿನಾಶಗೊಳಿಸುವಂತಹ ತೀರ್ಥ ವನ್ನು ದಯಪಾಲಿಸು ಎಂದು ಪ್ರಾರ್ಥಿಸಿ ಭಗಂಡೇಶ್ವರನ ಪೂಜೆಯಲ್ಲಿ ಪಾಲ್ಗೊಳ್ಳಬೇಕು. ದೇವಾಲಯಕ್ಕೆ ಪ್ರದಕ್ಷಿಣೆ ಬರುತ್ತಾ ಬರುವಾಗ ಮಹಾವಿಷ್ಣುವನ್ನು ಆತನ ಗುಡಿಯಲ್ಲಿ ದರ್ಶಿಸಬೇಕು. ಅಲ್ಲಿ ನಮಸ್ಕರಿಸುತ್ತ

ವಾಸುದೇವ ಹರೇ ವಿಷ್ಣೋ ಭೂತಿ ಭಾವನ ಕೇಶವ

ತೀರ್ಥಸ್ಯ ತು ಫಲಂ ಸರ್ವಂ ದೇಹಿ ಮೇ ಶಂಕರ ಪ್ರಿಯ

ವಾಸುದೇವನೇ, ಹರಿಯೇ, ವಿಷ್ಣುವೇ, ಕಲ್ಯಾಣಕರನಾದ ಕೇಶವನೇ, ಶಂಕರ ಪ್ರಿಯನೇ ತೀರ್ಥಕ್ಷೇತ್ರದ ಸರ್ವ ಫಲವನ್ನೂ ನೀಡು ಎಂದು ಪ್ರಾರ್ಥಿಸಬೇಕು. ಅಲ್ಲಿ ಪೂಜೆ ಮುಗಿಸಿದ ಬಳಿಕ ಸುಬ್ರಹ್ಮಣ್ಯನ ಗುಡಿಯಲ್ಲಿ ದರ್ಶನ ಪಡೆದು

ಮಯೂರಧ್ವಜ ದೇವೇಶ ದ್ವಾದಶಾಕ್ಷ ದ್ವಿಷಡ್ಭುಜ

ಸುಬ್ರಹ್ಮಣ್ಯ ನಮಸ್ತೇಸ್ತು ತೀರ್ಥಂ ಮೇ ದಾತುಮರ್ಹಸಿ

ನವಿಲಿನ ಧ್ವಜವುಳ್ಳ ದೇವ ಸೇನಾಧಿಪತಿಯೇ, ಹನ್ನೆರಡು ನೇತ್ರ, ಹನ್ನೆರಡು ಭುಜಗಳನ್ನು ಹೊಂದಿರುವ ಸುಬ್ರಹ್ಮಣ್ಯನೇ ಕ್ಷೇತ್ರ ತೀರ್ಥ ಫಲವನ್ನು ಕೊಡುವಂತಹನಾಗು ಎಂದು ಪ್ರಾರ್ಥಿಸಿ ಪೂಜೆ ಮಾಡಿಸ ಬೇಕು. ಬಳಿಕ ಸುಬ್ರಹ್ಮಣ್ಯ ದೇಗುಲದ ಮುಂಭಾಗದಲ್ಲಿರುವ ಕಿಣುಮಾಣಿ ದೈವಗಳ ದರ್ಶನ ಪಡೆದು ಪ್ರಾರ್ಥಿಸಬೇಕು. ಮುಂದುವರಿದು ದೇವಾಲಯ ಹೊರಾಂಗಣ ಆವರಣದಲ್ಲಿ ಶಿಲಾ ರೂಪದಲ್ಲಿರುವ ಚಾಮುಂಡಿ ದೈವ ಸ್ಥಾನದ ಬಳಿ ನಿಂತು ಪ್ರಾರ್ಥನೆ ಸಲ್ಲಿಸಬೇಕು.

ಬಳಿಕ ಭಕ್ತರು ತಲಕಾವೇರಿಗೆ ತೆರಳಬೇಕು. ಅಲ್ಲಿ ಕಾವೇರಿಯ ಪವಿತ್ರ ಕುಂಡಿಕೆಯ ಬಳಿಯಿರುವ ಸ್ನಾನಕೊಳದಲ್ಲಿ ಇಳಿದು ಸ್ನಾನಕ್ಕೆ ಮುನ್ನ ಸರ್ವ ತೀರ್ಥ ಸ್ವರೂಪಿಣಿಯಾದ ಮಾತೆ ಕಾವೇರಿಯನ್ನು ಈ ರೀತಿ ಸ್ತುತಿಸಬೇಕು:-

ದೇವರ್ಷಿ ಪೂಜ್ಯೇ ವಿಮಲೇ ನದೀಶೇ

ಪರಾತ್ಪರೇ ಭಾವಿತ ನಿತ್ಯಪೂರ್ಣೇ

ಸಮಸ್ತ ಲೋಕೋತ್ತಮ ತೀರ್ಥ ಮಾತಃ

ಕಾವೇರಿ ಕಾವೇರಿ ಮಮ ಪ್ರಸೀದ

ದೇವರ್ಷಿಗಳಿಂದಲೂ ಪೂಜಿತಳಾದವಳೇ, ಪವಿತ್ರಳಾದವಳೇ, ನದಿಗಳಿಗೆ ಒಡತಿಯೇ, ಅತ್ಯಂತ ಶ್ರೇಷ್ಠಳಾದವಳೇ, ಮಂಗಳಕರ ಳಾದವಳೇ, ನಿತ್ಯವೂ ಪೂರ್ಣ ವಾಗಿರುವವಳೇ, ವಿಶ್ವದಲ್ಲಿಯೇ ಅತ್ಯಂತ ಉತ್ತಮಳಾದ ತೀರ್ಥ ಸ್ವರೂಪಿಣಿಯಾದ ಮಾತೆಯೇ, ಕಾವೇರಿಯೇ, ಕಾವೇರಿಯೇ ನನ್ನನ್ನು ಹರಸು ಎಂದು ಪ್ರಾರ್ಥಿಸಿ ಸ್ನಾನ ಮಾಡಬೇಕು. ಬಳಿಕ ಅರ್ಚಕರ ಮೂಲಕ ಕುಂಡಿಕಾ ತೀರ್ಥ ವನ್ನು ತಲೆಗೆ-ಮೈಗೆ ಹಾಕಿಸಿಕೊಳ್ಳ ಬೇಕು. ಸ್ನಾನಾ ನಂತರ ಬೇರೆ ಉಡುಪು ಧರಿಸಿ ತಲಕಾವೇರಿ ಯಲ್ಲಿ ಶ್ರೀ ಮಹಾ ಗಣಪತಿಯನ್ನು ದರ್ಶಿಸಬೇಕು.

ಗಣಪತಿ ಪರಿವಾರಂ ಚಾರು ಕೇಯೂರ ಹಾರಂ

ಗಿರಿಧರ ವರಸಾರಂ ಯೋಗಿನೀ ಚಕ್ರಚಾರಂ

ಭವ ಭಯ ಪರಿಹಾರಂ

ದುಃಖ ದಾರಿದ್ರ್ಯದೂರಂ ಗಣಪತಿಮಭಿವಂದೆ

ವಕ್ರ ತುಂಡಾವತಾರಂ

ಗಣಗಳ ಕೂಟದೊಂದಿಗೆ ಮನೋಹರ ತೋಳುಗಳೊಂದಿಗೆ ಹಾರ ಸಹಿತನಾದ ಯೋಗ ಚಕ್ರಗಳ ಸಂಚಲನವುಳ್ಳವನೇ ಸಂಸಾರ ಭಯವನ್ನು ಪರಿಹರಿಸುವವನೇ, ದುಃಖವನ್ನೂ ದಾರಿದ್ರ್ಯವನ್ನೂ ದೂರ ಮಾಡುವವನೇ, ವಕ್ರ ತುಂಡಾವತಾರನಾದ ಗಣಪತಿಯೇ ನಿನಗೆ ಅಭಿವಂದನೆ ಎಂದು ಪ್ರಾರ್ಥನೆ ಮಾಡಿ ಪೂಜೆ ಮಾಡಿಸ ಬೇಕು. ಬಳಿಕ ಶಾಸ್ತ್ತಾವುನನ್ನು ವಂದಿಸಿ ಪರಮ ಪಾವನನಾದ ಅಗಸ್ತ್ಯೇಶ್ವರನ ಬಳಿ ತೆರಳಿ ಸಾಷ್ಟಾಂಗ ಪ್ರಣಾಮ ಪೂರ್ವಕ ವಾಗಿ ನಮಸ್ಕರಿಸಬೇಕು.ಮೊದಲು ಗುರು ಅಗಸ್ತ್ಯರನ್ನು ಸ್ತುತಿಸಬೇಕು.

ವಾತಾಪಿ ಭಕ್ಷಿತೋ ಯೇನ ಸಮುದ್ರಃ ಶೋಷಿತ: ಪುರಾ

ಲೋಪಾಮುದ್ರಪತಿಃ ಶ್ರೀಮಾನ್ ಅಗಸ್ತ್ಯಾಯೈ ನಮೋ ನಮಃ

ವಾತಾಪಿಯನ್ನು ಸಂಹರಿಸಿದ, ಸಮುದ್ರದ ನೀರನ್ನು ಪೂರ್ಣ ಕುಡಿದ ಲೋಪಾಮುದ್ರೆಯ ಪತಿಯಾದ ಶ್ರೀ ಅಗಸ್ತ್ಯರಿಗೆ ವಂದನೆ ಎಂದು ಸ್ತುತಿಸಬೇಕು ಬಳಿಕ ಅಗಸ್ತ್ಯೇಶ್ವರ ಶಿವನನ್ನು ಕುರಿತು:-

ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ

ಮಹೇಶಾನ ಶೂಲಿನ್ ಜಟಾ ಜೂಟಧಾರಿನ್

ತ್ವಮೇಕೋ ಜಗದ್ವ್ಯಾಪಕೋ ವಿಶ್ವರೂಪಃ

ಪ್ರಸೀದ ಪ್ರಸೀದಃ ಪ್ರಭೋ ಪೂರ್ಣ ರೂಪಃ

ಪಾರ್ವತಿಯ ಪತಿಯಾದ ಶಂಭುವೇ, ಶೂಲ ಧಾರಿಯಾದವನೇ, ಜಟಾಜೂಟಧಾರಿಯಾದ ಮಹೇಶನೇ, ನೀನು ಏಕನಾಗಿ ಜಗತ್ತನ್ನೇ ವ್ಯಾಪಿಸಿರುವ ವಿಶ್ವ ಸ್ವರೂಪನಾಗಿದ್ದೀಯ. ಪೂರ್ಣ ರೂಪನಾದ ಪ್ರಭುವೇ ಪ್ರಸನ್ನನಾಗು ಎಂದು ಪ್ರಾರ್ಥಿಸಿ, ಪೂಜೆಯಲ್ಲಿ ಪಾಲ್ಗೊಳ್ಳ ಬೇಕು. ಬಳಿಕ ಕೆಳಗಿಳಿದು ಬಂದು ಅರಳಿ ಮರಕ್ಕೆ ಪ್ರದಕ್ಷಿಣೆ ಬರುತ್ತಾ

ಮೂಲತೋಬ್ರಹ್ಮರೂಪಾಯ ಮಧ್ಯತೋ ವಿಷ್ಣು ರೂಪಿಣೇ

ಅಗ್ರತಃ ಶಿವರೂಪಾಯ ವೃಕ್ಷ ರಾಜಾಯತೇ ನಮಃ

ಬುಡದಲ್ಲಿ ಬ್ರಹ್ಮರೂಪಿಯೂ, ಮಧ್ಯದಲ್ಲಿ ವಿಷ್ಣು ರೂಪಿಯೂ, ಮೇಲ್ಭಾಗದಲ್ಲಿ ರುದ್ರರೂಪನೂ ಆಗಿರುವ ಮರಗಳ ರಾಜನಿಗೆ ನಮಸ್ಕಾರ. ಆ ನಂತರ ಬ್ರಹ್ಮ ಕುಂಡಿಕೆಗೆ ಪ್ರದಕ್ಷಿಣೆ ಬರುತ್ತ

ಜಯದೇವ ಚತುರ್ವಕ್ತ್ರ ಸರ್ವ ಲೋಕ ಪಿತಾಮಹ

ಜಗತ್ಕಾರಣ ವಿಶ್ವಾತ್ಮನ್ ಚತುರ್ಮೂರ್ತೇ ಜಗತ್ಪತೇ

ನಾಲ್ಕು ಮುಖದವನೇ, ಎಲ್ಲ ಲೋಕಗಳಿಗೂ ಪಿತಾಮಹ ಎನಿಸಿಕೊಂಡವನೇ, ಜಗತ್ತಿನ ಸೃಷ್ಟಿಕರ್ತನೇ, ವಿಶ್ವವನ್ನೇ ಆತ್ಮವಾಗಿ ಉಳ್ಳವನೇ, ನಾಲ್ಕು ಮೂರ್ತಿಗಳ ಸ್ವರೂಪನೇ ನಿನಗೆ ಜಯವಾಗಲಿ. ಎಂದು ಸ್ತ್ತುತಿಸಬೇಕು ಜೊತೆಗೆ

ಕವೇರಕನ್ಯೇ ಕಾವೇರಿ ಲೋಪಾಮುದ್ರೇ ಸನಾತನೇ

ಅಗಸ್ತ್ಯಪತ್ನೀ ಬ್ರಹ್ಮಪುತ್ರಿ ಲೋಕಪಾವನೀ ಪುರಾತನೇ

ಎಂದು ಮನಕ್ಕೆ ತೃಪ್ತಿಯಾಗುವಷ್ಟು ಕಾಲ ಪಠಿಸಬೇಕು. ಪೂಜಾದಿ ಗಳಲ್ಲಿ ಪಾಲ್ಗೊಳ್ಳಬೇಕು.ಬಳಿಕ ಬ್ರಹ್ಮಗಿರಿ ಶಿಖರವನ್ನು ನಿಧಾನವಾಗಿ ಏರಬೇಕು. ಅಲ್ಲಿರುವ ಋಷಿಗಳ ಏಳು ಕುಂಡಗಳನ್ನು ದರ್ಶಿಸಿ ಭೂಮಿಗೆ ಶಿರಬಾಗಿ ನಮಸ್ಕರಿಸಬೇಕು.

ಮನ್ವಂತರಾವತಾರಾಯ ಸಪ್ತರ್ಷಿಭ್ಯೋ ನಮೋನಮಃ

ಶಿಷ್ಯಾನುಗ್ರಹಶಕ್ತೇಭ್ಯೋ ತಪಸ್ವಿಭ್ಯೋ ನಮೋನಮಃ

ಪ್ರತಿ ಮನ್ವಂತರಗಳಲ್ಲಿ ಅವತಾರವೆತ್ತುವ, ಸಪ್ತ ಋಷಿಗಳಿಗೆ

ನಮನವು. ಶಿಷ್ಯನಿಗೆ ಅನುಗ್ರಹ ನೀಡುವ ಶಕ್ತಿವಂತರಾದ ತಪಸ್ವಿಗಳಿಗೆ ನಮನವು ಎಂದು ಪ್ರಾರ್ಥಿಸಿ ಭಕ್ತಾದಿಗಳು ಯಾತ್ರೆಯನ್ನು ಮುಕ್ತಾಯ ಗೊಳಿಸಬಹುದು.

(ಕೃಪೆ: ಸ್ಕಾಂದ ಪುರಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೈ, ಕಾವೇರಿ ವ್ರತಕಲ್ಪ, ಶ್ರೀ ತಲಕಾವೇರಿ ಪೂಜಾ ವಿಧಿ)