ಸೋಮವಾರಪೇಟೆ,ಜು.4: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿರುವದರಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಬೆಟ್ಟದಳ್ಳಿ ಮತ್ತು ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಸ್ಥರು ಬೆಟ್ಟದಳ್ಳಿ ಜಂಕ್ಷನ್ ಬಳಿ ರಸ್ತೆ ತಡೆ ನಡೆಸಿದರು.ಶಾಂತಳ್ಳಿ, ಬೆಟ್ಟದಳ್ಳಿ ವ್ಯಾಪ್ತಿ ಯಲ್ಲಿರುವ ಪ್ರವಾಸಿ ತಾಣ, ರೆಸಾರ್ಟ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹರಡುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ, ಪ್ರವಾಸಿಗರ ವಾಹನ ಗಳನ್ನು ತಡೆದು ವಾಪಾಸ್ ಕಳುಹಿಸಿದರು.ನಗರ ಪ್ರದೇಶಗಳಲ್ಲಿ ಅಧಿಕ ವಾಗಿದ್ದ ಸೋಂಕು ಈಗ ಗ್ರಾಮೀಣ ಭಾಗದಲ್ಲೂ ಹರಡುತ್ತಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಮಲ್ಲಳ್ಳಿ ಜಲಪಾತ ವೀಕ್ಷಿಸುವ, ಬೆಟ್ಟದ ಮೇಲೆ ಟ್ರಕ್ಕಿಂಗ್ ಮಾಡುವ ನೆಪದಲ್ಲಿ ರೆಸಾರ್ಟ್‍ಗಳಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದಾರೆ. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲಿ ಸೋಂಕಿತರನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ಕುಮಾರ್ ಆರೋಪಿಸಿದರು.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಬೇಕಾಗಿದೆ. ಪ್ರಸ್ತುತ ಕೊರೊನಾ ಭಯದಿಂದ ಮನೆ ಬಿಟ್ಟು ಹೊರಬರಲು ರೈತರು ಭಯ ಪಡುತ್ತಿದ್ದಾರೆ. ಹೊರಗಿನಿಂದ ಬರುವ ಪ್ರವಾಸಿಗರನ್ನು ಕಂಡರೆ ಭಯ ವಾಗುತ್ತಿದೆ ಎಂದು ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ.ಸತೀಶ್ ಹೇಳಿದರು.
ಮುಂದಿನ ನಾಲ್ಕು ದಿನಗಳ ಒಳಗೆ ಕೊಡಗಿಗೆ ಪ್ರವಾಸಿಗರು ಬರುವದಕ್ಕೆ ನಿರ್ಬಂಧ ಹೇರಬೇಕು. ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಇದರ ಬಗ್ಗೆ ಕ್ರಮಕೈಗೊಳ್ಳಬೇಕು ತಪ್ಪಿದ್ದಲ್ಲಿ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಜನರು
ಹಾಗೂ ಸ್ತ್ರೀಶಕ್ತಿ ಸಂಘದವರ ಸಹಕಾರದಿಂದ ಉಗ್ರ ಹೋರಾಟ ಹಮ್ಮಿಕೊಳ್ಳ ಲಾಗುವದು ಎಂದು ಎಚ್ಚರಿಸಿದರು.
ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಗ್ರಾಮದ ಪ್ರಮುಖರುಗಳಾದ ಕೆ.ಕೆ.ಈರಪ್ಪ, ಕೆ.ಆರ್.ಶಂಕರ್, ಸಂಪತ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು. ಮಧ್ಯಾಹ್ನ ದವರೆಗೆ ಹೊರಜಿಲ್ಲೆಯ ವಾಹನಗಳನ್ನು ತಡೆದು ವಾಪಾಸ್ ಕಳುಹಿಸಲಾಯಿತು. ಜಿಲ್ಲಾಡಳಿತಕ್ಕೆ 4 ದಿನದ ಗಡುವು ನೀಡಿ, ಪ್ರತಿಭಟನೆ ಹಿಂಪಡೆಯಲಾಯಿತು.