ಬಾಳಲೆ, ಜು. 3: ಬಾಳಲೆ ದೇವನೂರು ವಿಭಾಗದ ಕಾಫಿ ತೋಟವೊಂದರಲ್ಲಿ ಇಂದು ಅಪರಾಹ್ನ 12.30ರ ಸುಮಾರಿಗೆ ಭಾರೀ ಗಾತ್ರದ ಹುಲಿಯೊಂದು ಕಾಣಿಸಿಕೊಂಡಿದ್ದು, ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಕೆಲಸಬಿಟ್ಟು ಓಡಿ ತಪ್ಪಿಸಿಕೊಂಡ ಘಟನೆ ವರದಿಯಾಗಿದೆ.
ಅಲ್ಲಿನ ನಿವಾಸಿ ಪಾರುವಂಗಡ ಅಪ್ಪಯ್ಯ (ಅಪ್ಪುಕುಂಞ) ಅವರ ಗುಂಡಿಗದ್ದೆ ತೋಟದಲ್ಲಿ ಹತ್ತು ಮಂದಿ ಕಾರ್ಮಿಕರು ಗೊಬ್ಬರ ಹಾಕುವ ಕೆಲಸದಲ್ಲಿ ನಿರತರಾಗಿದ್ದರು.ಈ ವೇಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಅವರು ಕೆಲಸ ಬಿಟ್ಟು ಓಡಿ ಬಂದಿದ್ದಾರೆ. ಭಯಭೀತರಾಗಿದ್ದ ಅವರನ್ನು ತಕ್ಷಣ ಜೀಪಿನಲ್ಲಿ ಮಾಲೀಕರ ಮನೆಯತ್ತ ಕರೆದೊಯ್ದಿದ್ದಾಗಿ ತೋಟದ ರೈಟರ್ ದಿನೇಶ್ ‘ಶಕ್ತಿ’ಗೆ ತಿಳಿಸಿದರು. ಅರಣ್ಯದಂಚಿನ ಪ್ರದೇಶ ಇದಾಗಿದ್ದು, ಇಲ್ಲಿ ಆಗಾಗ್ಗೆ ಹುಲಿಯ ಕಾಟ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಸಿಬ್ಬಂದಿಗಳು ಭೇಟಿ ನೀಡಿದ್ದರು.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ವೀರಾಜಪೇಟೆ ಡಿಎಫ್‍ಓ ರೋಶನಿ ಅವರು, ಅಗತ್ಯ ಮುಂಜಾಗ್ರತೆ ವಹಿಸಲು ಸಿಬ್ಬಂದಿಗಳಿಗೆ ಸೂಚಿಸಿರುವದಾಗಿ ತಿಳಿಸಿದರು.