ಸಿದ್ದಾಪುರ, ಜು. 3: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿದ್ದಾಪುರದ ಗ್ರಾ.ಪಂ. ಕಚೇರಿ ಎದುರು ಸಿಐಟಿಯು ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಸಿಐಟಿಯು ಸಂಘಟನೆಯ ಜಿಲ್ಲಾ ಖಜಾಂಜಿ ಹೆಚ್.ಬಿ. ರಮೇಶ್, ಸರಕಾರಗಳು ಕಾರ್ಮಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು. ಕೊರೊನಾ ವೈರಸ್‍ನಿಂದಾಗಿ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಸರಿಯಾದ ಕೆಲಸಗಳಿಲ್ಲದೇ ತೊಂದರೆಯಲ್ಲಿ ಸಿಲುಕಿದ್ದಾರೆ. ಕಾರ್ಮಿಕರಿಗೆ ಸಕಾಲಕ್ಕೆ ಸ್ಪಂದಿಸಿ ಸರ್ಕಾರಗಳು ಪೂರ್ಣ ಅವಧಿ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳಾದ ಎನ್.ಡಿ. ಕುಟ್ಟಪ್ಪನ್, ಶಾಲಿ ಪೌಲೋಸ್, ಮಂಜು, ಎನ್.ಕೆ ಅನಿಲ್, ಇನ್ನಿತರರು ಹಾಜರಿದ್ದರು.

ನೆಲ್ಲಿಹುದಿಕೇರಿ : ಸಿಐಟಿಯು ಸಂಘಟನೆ ವತಿಯಿಂದ ನೆಲ್ಲಿಹುದಿಕೇರಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಸರ್ಕಾರಗಳು ಕಾರ್ಮಿಕರನ್ನು ಕಡೆಗಣಿಸುತ್ತಿವೆ. ಅಲ್ಲದೇ ಕಾರ್ಮಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ದೂರಿದರು.

ಈ ಸಂದರ್ಭ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ಫಿಲೋಮಿನ, ವೆಂಕಟೇಶ್, ಜೋನಿ, ಇನ್ನಿತರರು ಹಾಜರಿದ್ದರು. ಗ್ರಾ.ಪಂ. ನೋಡಲ್ ಅಧಿಕಾರಿರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸೋಮವಾರಪೇಟೆ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ(ಜೆಸಿಟಿಯು) ಪದಾಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ದ ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದ ಪ್ರಮುಖರು, ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸರ್ಕಾರಗಳು ಕೊರೊನಾ ಸೇನಾನಿಗಳ ಸುರಕ್ಷತೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಹಾಗೂ ಸ್ಕೀಂ ನೌಕರರ ಕೆಲಸವನ್ನು ಖಾಯಂ ಮಾಡಿ ವೇತನ ಹೆಚ್ಚಳ ಮಾಡಬೇಕು. ಬಂಡವಾಳಶಾಹಿಗಳ ಪರವಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದ್ದು, ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇಂಧನ ಮೇಲಿನ ಶುಲ್ಕವನ್ನು ಕಡಿಮೆ ಮಾಡಬೇಕು. ಕೋವಿಡ್-19ನ್ನು ವೈದ್ಯಕೀಯ ತುರ್ತುಪರಿಸ್ಥಿತಿ ಎಂದು ಪರಿಗಣಿಸಿ, ಸರಕಾರವೇ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂಬ ವಿವಿಧ ಬೇಡಿಕೆಗಳ ಪಟ್ಟಿಯನ್ನು ತಹಶೀಲ್ದಾರ್ ಗೋವಿಂದರಾಜು ಮೂಲಕ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಬಿಸಿಯೂಟ ಕಾರ್ಯಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಕಾವೇರಿ, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಹಮೀದ್, ಉಪಾಧ್ಯಕ್ಷ ಕಿಶೋರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕುಶಾಲನಗರ: ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯ ಹಿನ್ನಲೆಯಲ್ಲಿ ನಾಡಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕೋವಿಡ್ ನಿಯಂತ್ರಿಸಲು ಸರಕಾರಗಳು ವಿಫಲವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಕಾರ್ಮಿಕ ಸಂಘಟನೆಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಪ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಭರತ್, ಟಿ.ಪಿ.ಹಮೀದ್, ಗೋವಿಂದರಾಜ್‍ದಾಸ್, ಕಿಶೋರ್ ಕುಮಾರ್, ವಿಜಯ್‍ಕುಮಾರ್, ಸುಗುಣ, ನಾಪಂಡ ಮುತ್ತಪ್ಪ ಮತ್ತಿತರರು ಇದ್ದರು.