ಮಡಿಕೇರಿ, ಜು. 2: ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನೆರವೇರಿಸುವಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಹಕಾರ ಸಚಿವ ಸೋಮಶೇಖರ್ ಹೇಳಿದರು.
ನಗರದಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಸೇರಿದಂತೆ ಕೆಲವೆಡೆ ಕೊರೊನಾದಿಂದ ಮೃತಪಟ್ಟವರ ಶವಗಳನ್ನು ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ರಾಜ್ಯದ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ವ್ಯಾಪ್ತಿಯಲ್ಲಿ ಕೊರೊನಾದಿಂದ ಮೃತಪಡುವವರ ಶವ ಸಂಸ್ಕಾರ ಮಾಡಲು ಜಾಗ ಗುರುತಿಸುವಂತೆ ಕಂದಾಯ ಸಚಿವರಿಗೆ ಈಗಾಗಲೇ ಸೂಚಿಸಿದ್ದಾರೆ. ಅಲ್ಲದೆ ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಅಂತ್ಯಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸುವಂತೆ ನಿಗಾವಹಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ಸರ್ಕಾರ ರಚಿಸಿದ್ದು, ಇನ್ನು ಮುಂದೆ ಅಮಾನವೀಯವಾಗಿ ಅಂತ್ಯಕ್ರಿಯೆಗಳು ನಡೆಯುವದಿಲ್ಲ ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.