ಇಡೀ ವಿಶ್ವಕ್ಕೆ ಕೊರೊನಾ ಅಂಟಿ ಬಹುತೇಕ ಆರು ತಿಂಗಳುಗಳೇ ಕಳೆದಿವೆ. ಜನರಿಗೆ ಕೊರೊನಾ ಅಸಹ್ಯ ಮೂಡಿಸಿದೆ. ಯಾವಾಗಪ್ಪಾ ಈ ಮಹಾಮಾರಿ ತೊಲಗುತ್ತದೆ ಎಂದು ಕಂಡ ಕಂಡವರಲ್ಲಿ ಕೇಳುವಂತಾಗಿದೆ. ಈ ದರಿದ್ರ ರೋಗದಿಂದಾಗಿ ಬದುಕೇ ಹಾಳಾಗಿ ಹೋಯ್ತು ಅಂತ ಶಪಿಸುವ ಸಾವಿರ ಮಂದಿ ಇದ್ದಾರೆ. ಅದು ನಿಜವೂ ಹೌದು. ಏಕೆಂದರೆ ಈ ರೋಗ ಮನುಷ್ಯನಿಗೆ ದೈಹಿಕವಾಗಿ ಮಾಡಿರುವ ಹಾನಿಗಿಂತ ಸಾಮಾಜಿಕ, ಆರ್ಥಿಕ ಮತ್ತು ಭಾವನಾತ್ಮಕ ಬದುಕಿನ ಮೇಲೆ ಬೀರಿರುವ ಪರಿಣಾಮ ಇದೆಯಲ್ಲಾ ಅದು ಘನಘೋರ. ಈ ಕೊರೊನಾ ಅನ್ನೋ ಒಂದು ವೈರಾಣು ಎಷ್ಟೋ ಜನರಲ್ಲಿ ಖಿನ್ನತೆಯ ಹೊಸ ರೋಗವನ್ನೇ ಸೃಷ್ಟಿ ಮಾಡುತ್ತಿದೆ. ಇಂತಹ ಕೊರೊನಾ ಇನ್ನೆಷ್ಟು ದಿನ ಸಮಾಜದಲ್ಲಿ ಇರುತ್ತದೆ ಎಂಬುದು ಇದೀಗ ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಇದೇ ಆಗಸ್ಟ್ ಅಂತ್ಯದ ವೇಳೆಗೆಲ್ಲಾ ಸರಿಹೋಗ ಬಹುದೇನೋ ಎಂಬುದು ಕೆಲವರ ನಿರೀಕ್ಷೆಯಾದರ್ರೆ ಕೆಲವು ತಜ್ಞರ ಪ್ರಕಾರ ಬಹುಶಃ ಇದು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಕೊನೆಯವರೆಗೂ ಹೋಗಬಹುದು ಎನ್ನುತ್ತಾರೆ. ಆದರೆ ವಾಸ್ತವ ಏನು ಗೊತ್ತಾ ? ಕೊರೊನಾ ಮನುಜನನ್ನ ಬಿಟ್ಟು ಹೋಗದೆಯೂ ಇರಬಹುದು ಎಂಬ ಆತಂಕಕಾರಿ ಮಾಹಿತಿಯನ್ನ ವಿಶ್ವ ಆರೋಗ್ಯ ಸಂಸ್ಥೆಯೇ ಹೊರಹಾಕಿದೆ. ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸೀಸ್ ಡೈರೆಕ್ಟರ್ ಡಾ. ಮೈಕ್ ರಯಾನ್ ಅವರು ಹೇಳೋ ಪ್ರಕಾರ, ಈ ಖಾಯಿಲೆ ಇತರ ಖಾಯಿಲೆಗಳಂತೆ ಮಾನವ ಸಮುದಾಯದಲ್ಲೇ ಉಳಿಯಬಹುದು.

1980ರ ದಶಕದಲ್ಲಿ ಹೆಚ್‍ಐವಿ ರೋಗ ಜಗತ್ತಿಗೆ ಅಪ್ಪಳಿಸಿದಾಗ ಜನರು ಅದು ಯಾವ ಪರಿಯಲ್ಲಿ ಆತಂಕಗೊಂಡಿದ್ದರು ಎಂದರೆ ಇನ್ನು ಬದುಕೇ ಮುಗಿತು ಹೋಯಿತೇನೋ ಎಂಬಂತೆ ಹೆದರಿ ಹೋಗಿದ್ದರು. ಈ ರೋಗ ಪತ್ತೆಯಾದ ಆರಂಭದ ದಿನಗಳಲ್ಲಿ ವಿಶ್ವದಲ್ಲಿ ಸುಮಾರು 75 ಮಿಲಿಯನ್ ಮಂದಿ ಹೆಚ್‍ಐವಿ ಬಾಧಿತರಿದ್ದರು. ಇದಾದ ಬಳಿಕ ಹೆಚ್‍ಐವಿ ಹರಡುವಿಕೆ ಬಗ್ಗೆ ಮೂರು ದಶಕಗಳ ನಿರಂತರ ಅರಿವು ಕಾರ್ಯಕ್ರಮಗಳ ಹೊರತಾಗಿಯೂ ಇಂದು ಪ್ರಪಂಚದಲ್ಲಿ ಸರಿ ಸುಮಾರು 38 ಮಿಲಿಯನ್ ಜನ ಸೋಂಕಿತರಿದ್ದಾರೆ. ಅಂದರೆ ಈ ಹೆಚ್‍ಐವಿ ಅನ್ನೋ ರೋಗ ಮನುಕುಲವನ್ನ ಬಿಟ್ಟುಹೋಗುವ ಸಾಧ್ಯತೆಗಳು ಬಹಳ ಕಡಿಮೆ. ಹಾಗಾಗಿ ಜನರು ಆ ಭಯಾನಕ ರೋಗವನ್ನ ಒಪ್ಪಿಕೊಂಡು ಬದುಕುತ್ತಿದ್ದಾರೆ ಅಲ್ಲವೆ ಅದೇ ರೀತಿ ಕೊರೊನಾವನ್ನು ಕೂಡ ಒಪ್ಪಿಕೊಂಡು ಬದುಕುವಂತಹ ಪರಿಸ್ಥಿತಿ ಬರಬಹುದು.

ಒಂದುವೇಳೆ ಕೊರೊನಾ ನಮ್ಮ ಸಮಾಜವನ್ನು ಬಿಟ್ಟು ಹೋಗುವುದಿಲ್ಲ ವೆಂದಾದರೆ ಮುಂದೆ ಹೇಗಪ್ಪಾ ಬದುಕು ಅನ್ನುವುದನ್ನ ಯೋಚಿಸಿದರೆ ಪರಿಸ್ಥಿತಿ ಇನ್ನೂ ಭೀಕರವಾಗುತ್ತದೆ. ಆದರೆ ಸದ್ಯಕ್ಕೆ ಕೊರೊನಾ ಜೊತೆಗಿನ ನಮ್ಮ ಭವಿಷ್ಯದ ಬದುಕು ಹೇಗಿರುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಏಕೆಂದರೆ ತಜ್ಞರ ಪ್ರಕಾರ ನಾವು ಈಗ ನೋಡುತ್ತಿರುವುದು ಕೊರೊನಾದ ಒಂದು ಮುಖ ಮಾತ್ರ. ಅಂದರೆ ಕೊರೊನಾಕ್ಕೆ ಹಲವು ಅಲೆಗಳಿವೆ. ಈಗ ಬಂದು ಅಪ್ಪಳಿಸಿರುವುದು ಅದರ ಒಂದು ಅಲೆ ಮಾತ್ರ. ಮುಂದಿನ ದಿನಗಳಲ್ಲಿ ಕೊರೊನಾ ಬೇರೆ ಬೇರೆ ಅಲೆಗಳಾಗಿ ನಮ್ಮ ಜಗತ್ತನ್ನು ಬಾಧಿಸಲಿದೆಯಂತೆ. ಹಾಗಾಗಿ ಆ ದಿನಗಳನ್ನು ಎದುರಿಸುವುದು ಹೇಗೆ ಎಂಬುದನ್ನ ಈಗಲೇ ಊಹಿಸುವುದು ಕಷ್ಟ. ಒಂದಂತೂ ನಿಜ, ಕೊರೊನಾ ಅಷ್ಟು ಸುಲಭದಲ್ಲಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಕೊಳ್ಳುವು ದೊಂದೇ ಸದ್ಯಕ್ಕೆ ಇರುವ ಪರಿಹಾರ ಅಂತ ವೈದ್ಯ ಜಗತ್ತು ಹೇಳುತ್ತಿದೆ. ಬಹುಶಃ ಈ ನಿಟ್ಟಿನಲ್ಲೇ ನಾವು ಇನ್ನು ಮುಂದೆ ನಮ್ಮ ಜೀವನ ರೀತಿಯನ್ನು ಬದಲಾಯಿಸಿಕೊಳ್ಳ ಬೇಕೇನೋ. ಎಲ್ಲದಕ್ಕೂ ಕಾಲಾಯ ತಸ್ಮೈಯೇ ನಮಃ.

? ಐಮಂಡ ಗೋಪಾಲ್ ಸೋಮಯ್ಯ,

ಮರಗೋಡು