ಇದುವರೆಗೆ ಜನ ಮಳೆ ಗಾಳಿಗೆ ಹೆದರದ ಕೊಡಗಿನ ಜನ ಮನೆಯ ಹಿಂಬದಿಯಲ್ಲಿರುವ ಬರೆ, ಗುಡ್ಡಗಳಿಗೆ ಹೆದರುವಂತಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಪ್ರಕೃತಿ ನಮ್ಮೆಡೆಗೆ ಬೊಟ್ಟು ಮಾಡಿ ತೋರಿಸುತ್ತಿದೆ.ಕಳೆದ ಎರಡು ವರ್ಷದವರೆಗೂ ಇಂತಹದೊಂದು ಭಯ ಕಾಡಿರಲಿಲ್ಲ. ಮಳೆಗಾಲದಲ್ಲಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಗುಡ್ಡ ಹಾಗೂ ಮನೆಯ ಹಿಂಭಾಗದ ಬರೆ ಸಣ್ಣ ಪ್ರಮಾಣದಲ್ಲಿ ಕುಸಿಯುವುದು ಸಹಜವಾಗಿತ್ತು. ಆದರೆ ಜನರ ಜೀವ ಬಲಿ ಪಡೆಯುವ ಮಟ್ಟಿಗಿನ ಗಂಭೀರ ಸ್ವರೂಪ ತಾಳುತ್ತಿದ್ದದ್ದು ಅಪರೂಪ. ಆದರೆ ಈಗ ಹಾಗಿಲ್ಲ. ಮಳೆ ಬಂದ ತಕ್ಷಣ ಎಲ್ಲಿ ಗುಡ್ಡ ಕುಸಿಯುತ್ತದೆಯೋ? ಮನೆ ಹಿಂಭಾಗದಲ್ಲಿರುವ ಬರೆ ಜಾರಿ ಬಂದು ಅಪ್ಪಳಿಸಿ ಬಿಡುತ್ತದೆಯೋ ಎಂಬ ಭಯದಲ್ಲಿ ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಕಾಯುವಂತಹ ಸ್ಥಿತಿ ನಮ್ಮದಾಗಿದೆ.
ಮಲೆನಾಡು ಹೊರತುಪಡಿಸಿದಂತೆ ಹೊರಗಿನ ಪ್ರದೇಶದವರಿಗೆ ಬರೆ ಪದ ತಕ್ಷಣಕ್ಕೆ ಅರ್ಥವಾಗುವುದಿಲ್ಲ. ಇದೇನಪ್ಪಾ ಬರೆ ಎಂದು ತಲೆ ಕೆಡಿಸಿಕೊಳ್ಳುತ್ತಾರೆ. ಮಲೆನಾಡು ಪ್ರದೇಶ ಗುಡ್ಡಗಾಡುಗಳಿಂದ ಕೂಡಿರುವುದರಿಂದ ಮತ್ತು ಸಮತಟ್ಟು ಪ್ರದೇಶವೇ ಅಪರೂಪವಾಗಿರುವ ಕಾರಣ ಮನೆ, ಕಟ್ಟಡ ಮತ್ತು ರಸ್ತೆ ಹೀಗೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬೇಕಾದರೂ ಇರುವ ಜಾಗವನ್ನು ಸಮತಟ್ಟು ಮಾಡಲೇ ಬೇಕಾಗುತ್ತದೆ. ಈ ವೇಳೆ ಮಣ್ಣನ್ನು ಅಗೆದು ತೆಗೆಯುವಾಗ ಒಂದೋ, ಎರಡೋ ಅಥವಾ ಮೂರು ಬದಿಯಲ್ಲಿ ಎತ್ತರದ ಪ್ರದೇಶ ನಿರ್ಮಾಣವಾಗಿ ಬಿಡುತ್ತದೆ. ಇದನ್ನು ಬರೆ ಎಂದು ಕರೆಯಲಾಗುತ್ತದೆ. ಈ ಬರೆ ನಾವು ಮಣ್ಣು ತೆಗೆದು ಜಾಗ ವಿಸ್ತರಿಸುತ್ತಾ ಹೋದಂತೆ ಅದರ ಎತ್ತರವೂ ಹೆಚ್ಚುತ್ತಾ ಹೋಗುತ್ತದೆ.
ಕೊಡಗಿನ ಹೆಚ್ಚಿನ ಮನೆಗಳ ಹಾಗೂ ಕಟ್ಟಡಗಳ ಹಿಂದೆ ಇಂತಹ ಬರೆಗಳು ಸೃಷ್ಟಿಯಾಗಿವೆ. ಇವು ಕೆಲವು ಕಡೆಗಳಲ್ಲಿ ಮನೆಗಿಂತಲೂ ಎತ್ತರದಲ್ಲಿವೆ. ಇಂತಹ ಬರೆಗಳಿಂದ ಗುದ್ದಲಿ, ಪಿಕಾಸಿ ಇನ್ನಿತರೆ ಹತ್ಯಾರುಗಳನ್ನು ಬಳಸಿ ಅಥವಾ ಜೆಸಿಬಿ ಮೂಲಕ ಮಣ್ಣು ತೆಗೆಯುವುದರಿಂದ ಕೆಲವೊಮ್ಮೆ ಮಣ್ಣು ಸಡಿಲಗೊಂಡು ಮಳೆ ಬೀಳುತ್ತಿದ್ದಂತೆಯೇ ತೇವಾಂಶ ಹೆಚ್ಚಾಗಿ ಕುಸಿಯುತ್ತದೆ. ಇದೆಷ್ಟು ಅಪಾಯಕಾರಿ ಎಂಬುದು ಇತ್ತೀಚೆಗೆ ನಡೆದ ದುರ್ಘಟನೆಗಳಿಂದ ಮನದಟ್ಟಾಗಿದೆ.
ಹಿಂದಿನ ಕಾಲದಲ್ಲಿ ಮನೆ ಹಿಂದೆ ಬರೆ ನಿರ್ಮಾಣವಾದರೂ ಅವುಗಳನ್ನು ತಮ್ಮದೇ ತಂತ್ರಗಳನ್ನು ಬಳಸಿ ಗುದ್ದಲಿ, ಪಿಕಾಸಿ, ಹಾರೆಗಳನ್ನು ಬಳಸಿ ಹಂತ ಹಂತವಾಗಿ ಮಣ್ಣು ತೆಗೆಯುವ ಮೂಲಕ ಮಳೆ ಬಿದ್ದು ಮಣ್ಣು ತೇವಗೊಂಡರೂ ಅದು ಕುಸಿಯದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಹಾಗಿಲ್ಲ. ಜೆಸಿಬಿಯಿಂದ ಮಣ್ಣು ತೆಗೆಯುವುದರಿಂದ ಇಡೀ ಪ್ರದೇಶ ಅಲುಗಾಡುತ್ತದೆ. ಇದರಿಂದ ಮಣ್ಣು ಸಡಿಲಗೊಳ್ಳುತ್ತದೆ. ಅದು ಮಳೆ ಬೀಳುತ್ತಿದ್ದಂತೆಯೇ ತೇವಗೊಂಡು ಕುಸಿದು ಬೀಳುತ್ತದೆ. ಜತೆಗೆ ಹೆಮ್ಮರಗಳನ್ನು ಕಡಿದು ಉರುಳಿಸಿದ ಪರಿಣಾಮ ಅದರ ಬೇರುಗಳು ಹರಡಿದ್ದ ಪ್ರದೇಶವೆಲ್ಲ ಸಡಿಲಗೊಂಡು ಕುಸಿಯುತ್ತಿದೆ.
2018ರವರೆಗೆ ಭೂಕುಸಿತದ ರೌದ್ರ ಮುಖವನ್ನು ಕೊಡಗಿನವರು ನೋಡಿಯೇ ಇರಲಿಲ್ಲ. ಚಿಕ್ಕಪುಟ್ಟ ಕುಸಿತಗಳು ಸಂಭವಿಸುತ್ತಿತ್ತಾದರೂ ಅದೆಲ್ಲವೂ ಮಳೆಗಾಲದಲ್ಲಿ ನಡೆಯುವ ಮಾಮೂಲಿ ಕ್ರಿಯೆಗಳಾಗಿದ್ದವು. ಆದರೆ ಊರಿಗೆ ಊರು, ಇಡೀ ಗುಡ್ಡವೇ ಕುಸಿದು ಕಿ.ಮೀ.ಗಟ್ಟಲೆ ಜಾರಿ ಹೋಗಿದ್ದನ್ನು ನೋಡಿದ ಮೇಲೆ ತಮ್ಮ ಮನೆಯ ಹಿಂದಿನ ಬರೆ ಯಾವಾಗ ನಮ್ಮ ಪಾಲಿಗೆ ಮೃತ್ಯುವಾಗಿ ಬಿಡುತ್ತದೆಯೋ ಎಂಬ ಆತಂಕ ಬಹಳಷ್ಟು ಮಂದಿಯನ್ನು ಕಾಡಲು ಆರಂಭಿಸಿದೆ. ಅದರಲ್ಲೂ ಮಳೆಗಾಲ ಬರುತ್ತಿದ್ದಂತೆಯೇ ಈ ಭಯ ಹೆಚ್ಚುತ್ತಲೇ ಹೋಗುತ್ತಿದೆ.
ಕೊಡಗಿನ ಹೆಚ್ಚಿನ ಪ್ರದೇಶ ಸಮತಟ್ಟಾಗಿಲ್ಲ. ಗುಡ್ಡಪ್ರದೇಶಗಳಿವೆ. ಆದರೆ ಅನಿವಾರ್ಯತೆಯಿಂದಾಗಿ ಇಂತಹ ಪ್ರದೇಶಗಳಲ್ಲಿ ಜನ ಗುಡ್ಡವನ್ನೇ ಸಮತಟ್ಟು ಮಾಡಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ಇದೀಗ ಸಣ್ಣಗಿನ ಆತಂಕವಂತೂ ಇದ್ದೇ ಇದೆ. ಜೋರಾಗಿ ಮಳೆ ಬಂದಾಗಲೆಲ್ಲ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತದೆ. ಇರುವ ಸೂರನ್ನು ಬಿಟ್ಟು ಎಲ್ಲಿಗೆ ಹೋಗುವುದು ಎಂಬ ಚಿಂತೆಯೂ ಕಾಡುತ್ತದೆ. ಹೀಗಾಗಿಯೇ ಕಷ್ಟವೋ ಸುಖವೋ ಅನಾಹುತ ಆಗುವ ಸಂಭವವಿದ್ದರೂ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಭೂಕುಸಿತ ಸಂಭವಿಸಿ ಪ್ರಾಣಹಾನಿಯಾಗುತ್ತಲೇ ಇದೆ. ಇದರಿಂದ ಕೊಡಗಿನಲ್ಲಿ ಸಣ್ಣದೊಂದು ಭಯ ಆವರಿಸಿರುವುದಂತು ಸತ್ಯ. ಯಾವಾಗ ಏನಾಗಿ ಬಿಡುತ್ತದೆಯೋ ಎಂಬ ಚಿಂತೆ. ಹೀಗಾಗಿ ಭಯದಲ್ಲಿ ಬದುಕುವುದು ಅನಿವಾರ್ಯ ವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಯ ಬಿಟ್ಟು ಧೈರ್ಯ ವಾಗಿ ಮುಂಜಾಗ್ರತೆ ವಹಿಸಿ ಬದುಕುವುದನ್ನು ಕಲಿಯ ಬೇಕಾಗಿದೆ. ಅದರ ಹೊರತಾಗಿ ಅನ್ಯ ಮಾರ್ಗಗಳು ಕಾಣದಂತಾಗಿದೆ.
? ಬಿ.ಎಂ. ಲವಕುಮಾರ್, ಕಗ್ಗೋಡ್ಲು.