ಸದಾ ಗಿಜಿಗುಡುತ್ತಿದ್ದ ಮಡಿಕೇರಿಗೆ ಯಾರ ದೃಷ್ಟಿ ಬಿತ್ತೋ ಏನೋ ಮೌನದಿಂದ ಮಡುಗಟ್ಟಿದಂತಿದೆ. ಸದಾ ಹಸನ್ಮುಖರಾಗಿದ್ದ ಜನರ ಮುಖದಲ್ಲಿ ಹಿಂದಿನ ಕಳೆ ಇಲ್ಲ.
v
v
v
v
v
ದಿನವಿಡೀ ಮೂರ್ನಾಡು ವಿರಾಪೇಟ್... ವಿರಾಪೇಟ್... ಎಂದು ಬೊಬ್ಬಿರಿಯುತ್ತಿದ್ದ ಬಸ್ ನಿರ್ವಾಹಕರು, ಹಾರ್ನ್ ಹೊಡೆಯುತ್ತಲೇ ಇರುತ್ತಿದ್ದ ಚಾಲಕರು, ಕೊನೆ ಬಸ್ ಆದರೂ ಹಿಡಿಯಲೇಬೇಕು ಎಂದು ದಡಬಡನೆ ಓಡಿ ಬರುತ್ತಿದ್ದ ಹಳ್ಳಿಜನರು ಇವರೆಲ್ಲ ಎಲ್ಲಿ ಮಾಯವಾದರು ?
ಗುರುವಾರ ರಾತ್ರಿಯೇ ಸಿನೆಮಾ ಪೋಸ್ಟರ್ ಬದಲಾಯಿಸುತ್ತಿದ್ದ ಹುಡುಗರು, ಶುಕ್ರವಾರದ ದೂರದೂರದ ಹಳ್ಳಿಗಳಿಂದ ತಾವು ಬೆಳೆದ ತರಕಾರಿಗಳನ್ನು ಮಾರಲು ಕುಳಿತಿರುತ್ತಿದ್ದ ಮುಗ್ಧ ಮನಸಿನ ಜನರನ್ನು ಹುಡುಕುವಂತಾಗಿದೆ.
ಹಳೇ ಪೇಪರ್, ಪುಸ್ತಕ, ಬಾಟ್ಲಿ ಎಂದು ಕೂಗುತ್ತಿದ್ದವರು, ಸೊಪ್ಪು, ಹೂವೇೀೀೀ.. ಎನ್ನುವ ಜೋಗುಳದ ದನಿಯ ಹೆಂಗಸರು, ಏನೇನೋ ಸಾಮಾನುಗಳನ್ನು ಮನೆಬಾಗಿಲಿಗೆ ತಂದು, ನಿರರ್ಗಳವಾಗಿ ಅದರ ಬಗ್ಗೆ ಭಾಷಣ ಬಿಗಿದು, ದಯವಿಟ್ಟು ತೆಗೆದುಕೊಳ್ಳಿ, ನಮಗೆ ‘ಅಂಕ’ ಸಿಗುತ್ತದೆ, ಪಕ್ಕದ ಮನೆಯವರು ತೆಗೆದುಕೊಂಡರು, ನೀವೂ ತೆಗೆದುಕೊಳ್ಳಿ ಎಂದು ಗೋಗರೆಯುತ್ತಿದ್ದವರ ದನಿ ಕೂಡ ಕೇಳಿಸದಾಗಿದೆ
ಸದಾ ವಾಹನಗಳಿಂದ ಗಿಜಿಗಿಡುತ್ತಿದ್ದ ರಸ್ತೆಯ ಮಧ್ಯದಲ್ಲಿಯೇ ರೊಯ್ಯನೇ ಆಟೋ ತಿರುಗಿಸುತ್ತಿದ್ದವರು, ಸೈಲೆನ್ಸರ್ ತೆಗೆದು ಕರ್ಕಶ ಶಬ್ದದಿಂದ ಓಡಿಸುತ್ತಿದ್ದ ಬೈಕ್ ಸವಾರರು, ಹೆಲ್ಮೆಟ್ ಇಲ್ಲದೆ ಟ್ರಾಫಿಕ್ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದವರು, ಮರಕೆಸ, ಕಣಿಲೆ, ಕಿತ್ತಳೆ, ಹಲಸಿನಹಣ್ಣು ಮಾರುತ್ತಿದ್ದ ಹೆಂಗಸರು, ಬಳಂಜಿ ಮಾರುವವರು, ಇವರೆಲ್ಲಾ ಎಲ್ಲಿ ಹೋದರು ? ಏನು ಮಾಡುತ್ತಿರುವರು ? ಪ್ರವಾಸಿಗರ ಚಿತ್ರ-ವಿಚಿತ್ರ ವೇಷಭೂಷಣಗಳು, ಮಳೆಯಲ್ಲೂ ಚಡ್ಡಿ, ಸ್ಲೀವ್ಲೆಸ್ ಟಾಪ್ ಹಾಕಿಕೊಂಡು, ಬಣ್ಣ-ಬಣ್ಣದ ಮೇಕಪ್, ಲಿಪ್ಸ್ಟಿಕ್ ಹಾಕಿ, ಮೆರೆಯುತ್ತಿದ್ದ ಲಲನೆಯರು, ಅವರನ್ನು ಬಳಸಿ ಒಂದೇ ಕೊಡೆಯಲ್ಲಿ ಅಂಟಿಕೊಂಡೇ ಹೋಗುತ್ತಿದ್ದ ಹುಡುಗರು, ಒದ್ದೆಯಾಗಿ ನೋಡುಗರಿಗೆ ಕಚಗುಳಿಯಿಡುತ್ತಿದ್ದ ಜನರೆಲ್ಲ ಎಲ್ಲಿ ಹೋದರು ? ಎಲ್ಲರನ್ನೂ ಪ್ರೀತಿಯಿಂದ ಭೇದ-ಭಾವವಿಲ್ಲದೇ ನೋಡಿಕೊಳ್ಳುತ್ತಿದ್ದ ಮಡಿಕೇರಿ ತನ್ನತನವನ್ನು ಕಳೆದುಕೊಂಡು ಬಿಕೋ ಎನ್ನುತ್ತಿದೆ. ಬೆರಳೆಣಿಕೆ ಮಂದಿ ಕಂಡು ಬಂದರೂ ಅವರ ಮುಖದಲ್ಲೂ ಎಂದಿನ ಸಂತಸವಿಲ್ಲ, ಅಲಂಕಾರವಿಲ್ಲ ಮಾಸ್ಕ್ ಮುಚ್ಚಿದ ಮುಖದಲ್ಲಿ ಕಾಣುವುದು ಕಣ್ಣುಗಳೆರೆಡೇ ಆದರೂ ಆತಂಕ ಮಡುಗಟ್ಟಿದೆ.
ಗೆಳೆಯನ ಅಥವಾ ಪಕ್ಕದ ಮನೆಯವರ ಹೊಸಕಾರು, ಹೊಸಬಟ್ಟೆ, ಅದ್ಧೂರಿ ಪಾರ್ಟಿಗಳು, ಎಲ್ಲವನ್ನೂ ಕಂಡು ತನಗೆ ಆ ಭಾಗ್ಯವಿಲ್ಲವಲ್ಲ ಎಂದು ಮರುಗುತ್ತಿದ್ದವರೆಲ್ಲ ಅವನಿಗೆ ‘ಕೊರೊನಾ ಅಂತೆ’ ಎನ್ನುತ್ತಾ, ಸದ್ಯ ತನಗಿಲ್ಲದಿದ್ದರೆ ಸಾಕು ಎಂದು ನಿಟ್ಟುಸಿರು ಬಿಡುವಲ್ಲಿಗೆ ತಂದು ನಿಲ್ಲಿಸಿದೆ. ಮಹಾಮಾರಿ ‘‘ಕೊರೊನಾ’’ ಪ್ರಯಾಣಿಸಿದವರಿಗೆ ಬಂತಂತೆ, ಅವನಿಗೆ ಬಂತಂತೆ, ಇವನಿಗೆ ಬಂತಂತೆ ಅಂತ ಮಾತನಾಡಿಕೊಳ್ಳುತ್ತಿರುವಾಗಲೇ, ಸೋಂಕಿತರ ಕೇಸ್ಗಳು ಇತರೆಡೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದೆ ಅಂತ ಕೊರೊನಾ ವಾರಿಯರ್ಸ್ ಸಂಭ್ರ್ರಮ ಪಟ್ಟುಕೊಳ್ಳುತ್ತಿರುವಾಗಲೇ ಶುಶ್ರೂಷೆ ನೀಡಬೇಕಾದÀ ಡಾಕ್ಟರ್ಗಳಿಗೇ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೇ ಸೋಂಕು ತಗಲಿರುವುದು ಮತ್ತಷ್ಟು ಭಯಭೀತರನ್ನಾಗಿ ಮಾಡಿರುವುದು ಸುಳ್ಳಲ್ಲ. ಬದುಕಲು ಯಾವುದೂ ಅನಿವಾರ್ಯವಲ್ಲ, ಆರೋಗ್ಯವೇ ಮಹಾಭಾಗ್ಯ ಎಂಬ ನಾಣ್ಣುಡಿ ತಿಳಿದುಕೊಂಡಿದ್ದಂತಹವರಿಗೂ ಅನುಭವದ ಅರಿವು ಮೂಡಿಸಿದೆ ಕೊರೊನಾ
ನಮ್ಮೆಲ್ಲರ ಬೇಕುಗಳ ಪಟ್ಟಿ ದಿನಾ ಏರುತ್ತಾ ಸಾಗುತ್ತಿತ್ತೇ ವಿನಃ ಕಡಿಮೆಯಾಗುತ್ತಿರಲಿಲ್ಲ. ಆ ಪಟ್ಟಿಯಲ್ಲಿರುವ ಯಾವುದೂ ಕೂಡ ಬದುಕಲು ಬೇಡವೇ ಬೇಡ, ವೈರಸ್ ಇಲ್ಲದ ಶುದ್ಧಗಾಳಿ ಮಾತ್ರ ಸಾಕು ಎನ್ನುವಲ್ಲಿಗೆ ತಂದಿಟ್ಟಿದೆ ಕೊರೊನಾ. ಜೀವನ ಯಾವತ್ತೂ ಒಂದೇ ತೆರನಾಗಿರುವುದಿಲ್ಲ. ಸುಖ, ದುಃಖ ಒಂದರ ಮೇಲೆ ಒಂದರಂತೆ ಬರುತ್ತಿರುತ್ತದೆ. ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ, ಶಾಶ್ವತವಾದ ಜೀವನವನ್ನು ಪ್ರೀತಿಸಿ, ವೃದ್ಧರನ್ನು ಆದರಿಸಿ, ಕಿರಿಯರಿಗೆ ಭರವಸೆ ನೀಡಿ, ಮಕ್ಕಳಲ್ಲಿ ಧನಾತ್ಮಕ ಅಂಶಗಳನ್ನು ಬಿತ್ತಿ ಜೀವನವನ್ನು ಎದುರಿಸಲು ಧೈರ್ಯವನ್ನು ಒಗ್ಗೂಡಿಸಿ ಮುಂದೆ ನಡೆದಾಗ, ನಮ್ಮ ಧೈರ್ಯವನ್ನು ಕಂಡು ಕೊರೊನಾ ನಮ್ಮೂರಿನಿಂದ ಕಾಲ್ಕಿತ್ತು ಹೋಗುವ ದಿನ ಬಂದೇ ಬರುವುದು.
ಪೂರಕವಾಗಿ ಕಡ್ಡಾಯ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಮನೆ ಮದ್ದಾದ ಕಷಾಯ, ಲೇಹ್ಯ ಸೇವಿಸಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡಬೇಕು. ಜೀರಿಗೆ, ಕೊತ್ತಂಬರಿ, ಮೆಂತ್ಯೆ, ಕಾಳುಮೆಣಸು, ಅರಿಶಿಣ, ಶುಂಠಿ, ಜಾಯ್ಕಾಯಿ, ದಾಲ್ಚೀನ್ನಿ, ಏಲಕ್ಕಿ, ಬೆರೆಸಿ ಮಾಡುವ ಕಷಾಯ ರುಚಿಕರವಾಗಿರುವುದಲ್ಲದೇ ಆರೋಗ್ಯಕ್ಕೂ ಹಿತಕರ. ಯೋಗ, ಧ್ಯಾನ ನಮ್ಮ ಮುದುಡಿದ ಮನವನ್ನು ಉದ್ದೀಪನಗೊಳಿಸಿ ನವಚೈತನ್ಯವನ್ನು ತುಂಬಲು ಸಹಾಯಕಾರಿ. ಲಾಕ್ಡೌನ್, ಸೀಲ್ಡೌನ್ ಅವಧಿಯಲ್ಲಿ ಮನೆಯಲ್ಲಿ ಕಳೆಯಲು ಸಿಗುವ ಹೆಚ್ಚಿನ ಸಮಯವನ್ನು ಮನೆಯವರೊಂದಿಗೆ ಸಂತಸದಿಂದ ಕಳೆಯುವದರ ಜೊತೆಗೆ ಇವೆಲ್ಲವನ್ನೂ ಮಾಡಿ. ಕರಾಳ ದಿನಗಳು ಅಂತ್ಯ ವಾಗಿ ಹೊಸ ಬದುಕಿಗೆ ಹೊಸ ಬೆಳಕು ಬರುವ ದಿನ ದೂರವಿಲ್ಲ ಕಾರಣ ಪರಿವರ್ತನೆ ಜಗದ ನಿಯಮ ಅಲ್ಲವೇ ?
?ವೀಣಾ ಪುರುಷೋತ್ತಮ,
ಮಡಿಕೇರಿ.