ಮಡಿಕೇರಿ, ಜು. 1: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮ ವ್ಯಾಪ್ತಿಯ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಗೌರವಿಸುವದರೊಂದಿಗೆ, ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳನ್ನು ಅಭಿನಂದಿಸಿ ಬೀಳ್ಕೊಡಲಾಯಿತು.
ಸಂಘದ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಕ್ಕಂದೂರುವಿನ ಆಶಾ ಕಾರ್ಯಕರ್ತೆಯರಾದ ಅನಿತಾ ರೈ, ಬಿ.ಎಲ್. ದಿವ್ಯ, ಕೆ.ಎನ್. ಶಶಿ ಹಾಗೂ ಮುಕ್ಕೋಡ್ಲುವಿನ ಟಿ.ಕೆ. ನಾಗರತ್ನ ಅವರುಗಳಿಗೆ ತಲಾ ರೂ. 3 ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಇದರೊಂದಿಗೆ ಐದು ವರ್ಷಗಳ ಕಾಲ ಯಾವದೇ ಕಳಂಕವಿಲ್ಲದೆ ಸೌಹಾರ್ದಯುತವಾಗಿ ಆಡಳಿತ ನಡೆಸಿದ ಗ್ರಾ.ಪಂ. ಸದಸ್ಯರುಗಳನ್ನು ಅಭಿನಂದಿಸಿ, ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೊಕ್ಕಲೇರ ಸುಜು ತಿಮ್ಮಯ್ಯ ಮಾತನಾಡಿ, ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಮಹತ್ವವಾದುದು, ಎಲ್ಲರೂ ಕೂಡ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಿವಿ ಮಾತು ಹೇಳಿದರು.
ಸಂಘದ ಉಪಾಧ್ಯಕ್ಷ, ಗ್ರಾ.ಪಂ. ಸದಸ್ಯ ಅಣ್ಣೆಚ್ಚಿರ ಸತೀಶ್ ಮಾತನಾಡಿ, ಕೊರೊನಾ ಸೋಂಕು ಹರಡದಂತೆ ಶ್ರಮ ವಹಿಸಿದ ಆಶಾ ಕಾರ್ಯ ಕರ್ತೆಯರು ಅಭಿನಂದನಾರ್ಹರು, ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸಿದ ಅವರ ಸೇವೆಯನ್ನು ಮೆಚ್ಚಬೇಕೆಂದರು. 5 ವರ್ಷದ ಆಡಳಿತಾವಧಿಯಲ್ಲಿ ಪಕ್ಷಾತೀತವಾಗಿ ಎಲ್ಲರ ಸಹಕಾರದಿಂದ ಉತ್ತಮ ಆಡಳಿತ ನಡೆಸಿದ ತೃಪ್ತಿ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ, ಗ್ರಾ.ಪಂ. ಉಪಾಧ್ಯಕ್ಷ ಕನ್ನಿಕಂಡ ಶ್ಯಾಂ ಸುಬ್ಬಯ್ಯ, ನಿರ್ದೇಶಕರುಗಳಾದ ಕೊಟ್ಟಕೇರಿಯನ ಪ್ರದೀಪ್, ಪಡೇಟ್ಟಿರ ಕವಿತಾ, ಕುಂಬಗೌಡನ ಪ್ರಸನ್ನ, ಉಕ್ಕೇರಿಯಂಡ ನೀಲಮ್ಮ, ಬಿ.ಎನ್. ರಮೇಶ್, ಲಕ್ಕಪ್ಪನ ವಿಜೇತ, ಹೆಚ್.ಎಂ. ಸುಧಾಕರ್, ಪಿ.ಎಂ. ಸುಲೋಚನ, ಮಂಜುನಾಥ್ ನಾಯಕ್, ಗ್ರಾ.ಪಂ. ಸದಸ್ಯರುಗಳಾದ ಬಿ.ಎಸ್. ವಿಮಲ, ಹೆಚ್.ಆರ್. ಜಯಲಕ್ಷ್ಮಿ, ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಸಿಬ್ಬಂದಿಗಳು, ಗ್ರಾಮಸ್ಥರಾದ ಕೊಕ್ಕಲೆರ ಕಾವೇರಪ್ಪ, ಉಕ್ಕೇರಿಯಂಡ ನಾಣಯ್ಯ ಇದ್ದರು. ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಕುಟ್ಟಪ್ಪ ಸ್ವಾಗತಿಸಿ, ವಂದಿಸಿದರು.