ವೀರಾಜಪೇಟೆ, ಜು.1 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯ ಉದರದಿಂದ ಸುಮಾರು ನಾಲ್ಕೂವರೆ ಕೆ.ಜಿ.ತೂಕದ ಗೆಡ್ಡೆಯನ್ನು ಎರಡೂವರೆ ಗಂಟೆಗಳ ಕಾಲ ಉದರದ ಶಸ್ತ್ರ ಚಿಕಿತ್ಸೆ ನಡೆಸಿ ಮಹಿಳಾ ವೈದ್ಯೆ ಡಾ. ರೇಣುಕಾ ರವಿ ಕುಮಾರ್ ಹೊರ ತೆಗೆದಿದ್ದಾರೆ.

ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯ ಮಹಿಳೆಯೊಬ್ಬರು (44) ಐದು ವರ್ಷಗಳಿಂದ ಉದರದ ನೋವಿನಿಂದ ಬಳಲುತ್ತಿದ್ದರು. ಕೋವಿಡ್ 19 ಬಂದ ಹಿನ್ನೆಲೆಯಲ್ಲಿ ಯಾವುದೇ ಆಸ್ಪತ್ರೆಗೆ ಹೋದರೂ ಶಸ್ತ್ರ ಚಿಕಿತ್ಸೆಯ ಮೊದಲ ಪರೀಕ್ಷೆಗೆ ನಿರಾಕರಿಸಿದ್ದರಿಂದ ಈ ಮಹಿಳೆ ಇಲ್ಲಿನ ವೈದ್ಯರ ಸಲಹೆಯಂತೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಉದರದ ಶಸ್ತ್ರ ಚಿಕಿತ್ಸೆಯಲ್ಲಿ ಈ ಗೆಡ್ಡೆ ಪತ್ತೆಯಾಗಿದೆ. ಗೆಡ್ಡೆಯಿಂದ ಮಹಿಳೆಗೆ ಉದರ ನೋವು ಬರುತ್ತಿತ್ತೆಂದೂ ವೈದ್ಯರು ತಿಳಿಸಿದ್ದು ಶಸ್ತ್ರ ಚಿಕಿತ್ಸೆಯ ನಂತರ ಮಹಿಳೆ ಚೇತರಿಸಿಕೊಳ್ಳುತ್ತಿರುವುದಾಗಿ ಡಾ. ರೇಣುಕಾ ರವಿ ಕುಮಾರ್ ತಿಳಿಸಿದ್ದಾರೆ.