ಗೋಣಿಕೊಪ್ಪಲು, ಜು.1: ತರಕಾರಿ ತರಲು ಗೋಣಿಕೊಪ್ಪದಿಂದ ಹುಣಸೂರಿಗೆ ತೆರಳುವ ಭರದಲ್ಲಿ ಗೋಣಿಕೊಪ್ಪ ಸಮೀಪದ ಸೀಗೆತೋಡುವಿನ ಸೇತುವೆಗೆ ವಾಹನವೊಂದು ಗುದ್ದಿದ ಪರಿಣಾಮ ವಾಹನವು ರಸ್ತೆಯಲ್ಲಿ ಮಗುಚಿಕೊಂಡು ವಾಹನದಲ್ಲಿದ್ದ ಕ್ಲೀನರ್ ಶಕೀಲ್ ಪಾಷ (32) ಮೃತ ಪಟ್ಟ ಘಟನೆ ನಡೆದಿದೆ.
ಬುಧವಾರ ಮುಂಜಾನೆ 3.30 ಗಂಟೆಗೆ ತನ್ನ ವಾಹನದೊಂದಿಗೆ ಹುಣಸೂರಿಗೆ ತೆರಳಿ ತರಕಾರಿ ತರುವ ತೀರ್ಮಾನ ಕೈಗೊಂಡಿದ್ದರು. ಅದರಂತೆ ಚಾಲಕರಾದ ವಾಹಿದ್‍ರೊಂದಿಗೆ ಕ್ಲೀನರ್ ಶಕೀಲ್ ಪಾಷ ಎಂಬ ವ್ಯಕ್ತಿ ಮಳೆಯ ನಡುವೆ ಟಾಟಾ ಎಎಸ್ ಮೆಘ ಗೂಡ್ಸ್ (ಕೆಎ 12ಬಿ 7582) (ಎಂ.ಆರ್.ವೆಜಿಟೇಬಲ್) ವಾಹನವೇರಿ ತರಕಾರಿ ತರಲು ತೆರಳಿದ್ದರು. ನಗರದಿಂದ 3 ಕಿ.ಮೀ. ದೂರ ತಲುಪುತ್ತಿದ್ದಂತೆಯೇ ವಾಹನವು ಆಯಾ ತಪ್ಪಿ ಸೀಗೆತೋಡು ಬಳಿಯ ಸೇತುವೆಗೆ ಡಿಕ್ಕಿಯಾಗಿ ಮಗುಚಿಕೊಂಡಿದೆ. ಈ ಸಂದರ್ಭ ವಾಹನದ ಎಡ ಭಾಗದಲ್ಲಿ ಕುಳಿತ್ತಿದ್ದ ಕ್ಲೀನರ್ ಶಕೀಲ್ ಪಾಷ ಎಂಬ ವ್ಯಕ್ತಿ ರಸ್ತೆಗೆ ಬಿದ್ದ ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವದೊಂದಿಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಮೃತ ವ್ಯಕ್ತಿಯನ್ನು ಬಂಧುಗಳ ಸಹಾಯದಿಂದ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಿದರು. ವಾಹನ ಚಲಾಯಿಸುತ್ತಿದ್ದ ಚಾಲಕ ವಾಹಿದ್‍ಗೆ ಯಾವುದೇ ತೊಂದರೆಯಾಗಿಲ್ಲ. ಕಳೆದ ಮೂರು ವರ್ಷಗಳಿಂದ ಗೋಣಿಕೊಪ್ಪಲುವಿನ ತರಕಾರಿ ಮಾರುಕಟ್ಟೆಯ ಸಗಟು ವ್ಯಾಪಾರ ನಡೆಸುತ್ತಿದ್ದ ಎಂ.ಆರ್.ರಫೀಕ್ ಎಂಬುವರ ತರಕಾರಿ ಅಂಗಡಿಯಲ್ಲಿ ಚಾಲಕ ಹಾಗೂ ಕ್ಲೀನರ್ ವೃತ್ತಿ ನಡೆಸುತ್ತಿದ್ದ. ಮೃತ ವ್ಯಕ್ತಿ ಮೂಲತಃ ಹುಣಸೂರು ತಾಲೂಕು ಅನುಗೋಡು ನಿವಾಸಿ ಖಾಜ ಅಲಿ ಅವರ ಪುತ್ರ. ಮೃತ ವ್ಯಕ್ತಿ ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆÉ. ಘಟನಾ ಸ್ಥಳಕ್ಕೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ, ಠಾಣಾಧಿಕಾರಿ ಸುರೇಶ್ ಬೋಪಣ್ಣ,ಪೊಲೀಸ್ ಸಿಬ್ಬಂದಿಗಳಾದ ಮಜೀದ್,ವೆಂಕಟೇಶ್, ಭೇಟಿ ನೀಡಿ ಅಪಘಾತಕ್ಕೀಡಾದ ವಾಹನವನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.