ಕುಶಾಲನಗರ, ಜು. 1: ಸ್ಥಳೀಯ ಮುತ್ತೂಟ್ ಫೈನಾನ್ಸ್ ವತಿಯಿಂದ ಬಡ ಯುವತಿಯ ವಿವಾಹ ಕಾರ್ಯಕ್ಕೆ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಯಿತು.

ಸಂಸ್ಥೆಯ ವಿವಾಹ ಸಮ್ಮಾನಂ ಯೋಜನೆಯಡಿ ಸಾಮಾಜಿಕ ಸೇವಾ ನಿಧಿಯಿಂದ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರದ ವಿಧವೆ ಹರಿಣಿ ಎಂಬವರ ಪುತ್ರಿಯ ವಿವಾಹ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಲಿಬಿನ್ ಕೆ ಆಂಟನಿ ಆರ್ಥಿಕ ಮೊತ್ತದ ಚೆಕ್ ವಿತರಣೆ ಮಾಡಿದರು.

ಈ ಸಂದರ್ಭ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳ ಶಿಕ್ಷಣ, ಕಡುಬಡವರ ಅನಾರೋಗ್ಯ ಸಮಸ್ಯೆಗಳಿಗೆ ಸಂಸ್ಥೆ ಮೂಲಕ ಅಗತ್ಯ ನೆರವು ಒದಗಿಸಲಾಗುತ್ತಿದೆ. ಈ ಬಾರಿ ಕಡುಬಡ ಹೆಣ್ಣು ಮಗಳ ಮದುವೆಗೆ ಆರ್ಥಿಕ ನೆರವು ನೀಡಲಾಗಿದೆ. ಅಗತ್ಯ ಸಹಕಾರ ಕೋರಿ ಅರ್ಜಿಗಳು ಬಂದಲ್ಲಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕುಶಾಲನಗರ ಶಾಖೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಗ್ರಾ.ಪಂ. ಅಧ್ಯಕ್ಷ ಪ್ರೇಮಲೀಲಾ ಮಾತನಾಡಿ, ಬಡ ಯುವತಿ ವಿವಾಹಕ್ಕೆ ನೆರವು ನೀಡಿದ ಸಂಸ್ಥೆ ಹಾಗೂ ಶಿಫಾರಸು ಮಾಡಿದಂತಹ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ವಿವಾಹ ಕಾರ್ಯಕ್ಕೆ ನೆರವು ನೀಡಿದ ಸಂಸ್ಥೆಯ ಪ್ರಮುಖರಿಗೆ ಯುವತಿ ಎಂ.ಆರ್. ವಿದ್ಯಾ ಗೌರವ ಸಮರ್ಪಿಸಿದರು. ಈ ಸಂದರ್ಭ ಕೂಡಿಗೆ ಗ್ರಾಪಂ ಉಪಾಧ್ಯಕ್ಷ ಗಿರೀಶ್, ಮುತ್ತೂಟ್ ಸಂಸ್ಥೆಯ ಪ್ರಮುಖರಾದ ಜೋಹನ್ ಪಿಂಟೋ, ರಕ್ಷಿತ್ ಕೆ. ಅಪ್ಪಣ್ಣ ಇದ್ದರು.