ಗೋಣಿಕೊಪ್ಪಲು, ಜೂ.30: ದ.ಕೊಡಗಿನ ಬಾಳೆಲೆ ಹೋಬಳಿಯ ಬಾಳೆಲೆ ಗ್ರಾಮವು ಇದೀಗ ಗ್ರಾಮದ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಟ್ರಾಫಿಕ್ ವ್ಯವಸ್ಥೆಗಾಗಿ ವಿನೂತನ ಪ್ರಯತ್ನ ನಡೆದಿದೆ. ಈ ಭಾಗದ ಉಪಠಾಣೆಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದು ಜೂ.29ರಿಂದ ಬಾಳೆಲೆ ನಗರದಲ್ಲಿ ರಸ್ತೆಯ ಎರಡು ಭಾಗದಲ್ಲಿ ಮಾಹೆಯಾನ 1 ರಿಂದ 15 ಹಾಗೂ 16 ರಿಂದ 31ರವರೆಗೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು ಸಾರ್ವಜನಿಕರಿಗಿದ್ದ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶೇಷ ಪ್ರಯತ್ನ ನಡೆದಿದ್ದು ಪೊಲೀಸರ ಕಾಳಜಿಗೆ ಸ್ಥಳೀಯ ನಾಗರಿಕರು, ಸಂಘ ಸಂಸ್ಥೆಗಳು ಗ್ರಾಮ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಂಪೂರ್ಣ ಸಾಥ್ ನೀಡಿದೆ. ಇದರ ಪರಿಣಾಮ ರಸ್ತೆಯ ಎರಡು ಬದಿಯಲ್ಲಿಯು ವಾಹನ ನಿಲುಗಡೆಗೆ ಬಿಳಿ ಬಣ್ಣ ಬಳಿದು ವ್ಯವಸ್ಥೆ ಕಲ್ಪಿಸಿದ್ದಾರೆ. ಇದರಿಂದ ಟ್ರಾಫಿಕ್‍ನಲ್ಲಿ ಆಗುತ್ತಿದ್ದ ಸಮಸ್ಯೆಯನ್ನು ತಹಬದಿಗೆ ತರುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಗ್ರಾಮೀಣ ಭಾಗದ ಬಾಳೆಲೆ ನಗರದಲ್ಲಿ ಸಂತೆ ದಿನ ಪ್ರತಿ ಸೋಮವಾರ ಹೆಚ್ಚಾಗಿ ಕಾರ್ಮಿಕರು ವಿವಿಧ ಭಾಗದಿಂದ ಆಹಾರ ಸಾಮಗ್ರಿಗಾಗಿ ಆಗಮಿಸುತ್ತಿದ್ದರು. ಈ ಸಂದರ್ಭ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿತ್ತು. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ಎದುರಾಗಿ ಕಿರಿಕಿರಿ ಅನುಭವಿಸುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಬಾಳೆಲೆ ಉಪ ಪೊಲೀಸ್ ಠಾಣೆಗೆ ಆಗಮಿಸಿದ ಎಎಸ್‍ಐ ಹೆಚ್.ಟಿ. ವೆಂಕಟೇಶ್, ಪೊಲೀಸ್ ಸಿಬ್ಬಂದಿಗಳಾದ ಪಿ.ಸಿ.ಜೀವನ್ ಹಾಗೂ ಎಂ.ಬಿಮಾಜಿ ಗ್ರಾಮದಲ್ಲಿ ಸಾರ್ವಜನಿಕರ ಸಲಹೆ ಸಹಕಾರ ಪಡೆದು ಟ್ರಾಫಿಕ್ ಸುಲಲಿತ ವ್ಯವಸ್ಥೆಗೆ ಕ್ರಮಕೈಗೊಂಡಿದ್ದಾರೆ.

ಪ್ರಸ್ತುತ ವಿಜಯ ಬ್ಯಾಂಕಿನಿಂದ ರಾಮ ಸರ್ಕಲ್‍ವರೆಗೆ ಹಾಗೂ ರಾಮ ಸರ್ಕಲ್‍ನಿಂದ ಹೊಸ ಆಟೋ ನಿಲ್ದಾಣದವರೆಗೆ ಟ್ರಾಫಿಕ್‍ಲೈನ್ ಸಿದ್ದಪಡಿಸಿ ಇಲ್ಲಿನ ಟ್ರಾಫಿಕ್ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ಸರ್ಕಲ್‍ನ ಸುತ್ತಲಿನ ಪ್ರದೇಶದಲ್ಲಿ ಕೇವಲ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ರಸ್ತೆ ಎರಡು ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ನಗರದಲ್ಲಿ ಕೊವೀಡ್ - 19 ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕರು ನಗರಕ್ಕೆ ಆಗಮಿಸುವ ಸಂದರ್ಭ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆಯೂ ಪೊಲೀಸರು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. -ಹೆಚ್. ಕೆ. ಜಗದೀಶ್