ಕಾಫಿ, ಏಲಕ್ಕಿ, ಕಿತ್ತಳೆ, ಕರಿಮೆಣಸು ಈ ಸಾಲಿಗೆ ಕೊಡಗಿನಲ್ಲಿ ಇದೀಗ ಬಾಯಲ್ಲಿ ನೀರೂರಿಸುವ ಎಲ್ಲರ ಅಚ್ಚುಮೆಚ್ಚಿನ ಹಣ್ಣುಗಳ ಪೈಕಿ ಒಂದಾಗಿ ರುವ ಸೇಬು ಹಣ್ಣು ಸೇರ್ಪಡೆ ಗೊಳ್ಳುತ್ತಿದೆ. ಬೆಳೆಗಾರರೊಬ್ಬರ ಆಸಕ್ತಿ ಎಡೆಬಿಡದ ಪ್ರಯತ್ನದ ಫಲ ಎಂಬಂತೆ ಹೆಚ್ಚಾಗಿ ಉತ್ತರ ಭಾರತದಲ್ಲಿ ಮಾತ್ರ ಕಂಡುಬರುವ ಈ ಸೇಬು ಹಣ್ಣು ಜಿಲ್ಲೆಯಲ್ಲಿ ಇದೀಗ ನಳನಳಿಸುತ್ತಿದೆ. ಕೆಂಪು ಮಿಶ್ರಿತವಾಗಿ ಸಣ್ಣ ಮರದ ರೀತಿಯಲ್ಲಿನ ಗಿಡದಲ್ಲಿ ತೂಗಾಡುತ್ತಿರುವ ಈ ಸೇಬು ಹಣ್ಣಿನ ವೀಕ್ಷಣೆಯೇ ಆಕರ್ಷಣೆಯಂತಿದೆ. ಇದು ಕಂಡುಬರುತ್ತಿರುವುದು ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ. ದೊಡ್ಡಮಳ್ತೆಯಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಬೆಳೆಯುತ್ತಿರುವ ರಾಶಿತ್ ಹೆಚ್.ಕೆ. ಅವರು ಸೇಬು ಬೆಳೆಯುವ ನಿಟ್ಟಿನಲ್ಲೂ ಪ್ರಯತ್ನ ನಡೆಸುತ್ತಿದ್ದು, ಇವರ ಈ ಪ್ರಯತ್ನ ಇದೀಗ ಇತರರಿಗೂ ಮಾದರಿಯಾಗುವಂತೆ ಯಶಸ್ಸು ಕಾಣುತ್ತಿದೆ.

ಆಸಕ್ತಿ ಮೂಡಿದ ಬಗ್ಗೆ

ತೋಟಗಾರಿಕಾ ಬೆಳೆಗಳತ್ತ ಆಸಕ್ತಿ ಹೊಂದಿರುವ ರಾಶಿತ್ ಅವರಿಗೆ 2012ರಲ್ಲಿ ಹಿಮಾಚಲ ಪ್ರದೇಶದ ತಳಿಯ ಐದು ಸೇಬು ಗಿಡಗಳು ಆಕಸ್ಮಿಕವಾಗಿ ಲಭ್ಯವಾಗಿತ್ತು. ಇದನ್ನು ಅವರು ನೆಟ್ಟು ಪೋಷಿಸಿದಾಗ, ಗಿಡ ಒಂದಷ್ಟು ಎತ್ತರಕ್ಕೆ ಬೆಳೆದಿತ್ತು. ಇವರ ಪ್ರಯತ್ನಕ್ಕೆ ಉತ್ತೇಜನ ಎಂಬಂತೆ ಹಿಮಾಚಲ ಪ್ರದೇಶದಿಂದ ಕೆಲವು ವಿಜ್ಞಾನಿಗಳೂ ಆಗಮಿಸಿ ಇಲ್ಲಿ ಈ ಬೆಳೆಯನ್ನು ಬೆಳೆಯಲು ಅವಕಾಶವಿರುವುದಾಗಿ ತಿಳಿಸಿ ಅಗತ್ಯ ಸಲಹೆ ನೀಡಿದ್ದಾರೆ. ನಂತರ ಮತ್ತೆ ಒಂದಷ್ಟು ಗಿಡಗಳನ್ನೂ ಕಳಿಸಿಕೊಟ್ಟಿದ್ದಾರೆ. ಸುಮಾರು 13 ಬಗೆಯ ತಳಿಗಳನ್ನು ಇವರು ಬೆಳೆದಿದ್ದು, ಇದಕ್ಕೆ ರಾಶಿತ್ ಅವರ ಸ್ನೇಹಿತ ಬೀದರ್‍ನಲ್ಲಿ ವಿಜ್ಞಾನಿಯಾಗಿರುವ ಡಾ. ಸುನಿಲ್ ತಾಮಗಳೆ ಅವರೂ ಸಹಕಾರ-ಸಲಹೆ ನೀಡಿದ್ದಾರೆ. ಡಾರ್‍ಸೆಟ್ ಗೋಲ್ಡನ್, ಅನ್ನಾ, ಹರಿಮಾನ್, ರೆಡ್‍ಫೀಜಿ, ಗಾಲಾ ಎಂಬ ತಳಿಗಳನ್ನು ರಾಶಿತ್ ಬೆಳೆದಿದ್ದು, ಕಿತ್ತಳೆ ಬೆಳೆಯ ನಿರ್ವಹಣೆಗಿಂತಲೂ ವೆಚ್ಚ ಕಡಿಮೆಯಾಗಲಿದೆ ಎನ್ನುತ್ತಾರೆ.

‘ಶಕ್ತಿ’ಯೊಂದಿಗೆ ಅನುಭವ ಹಂಚಿಕೊಂಡ ರಾಶಿತ್, ಕೊಡಗಿಗೆ ಇದು ಆಶಾದಾಯಕವಾಗಿದೆ. ಹಣ್ಣು ರಸಭರಿತವಾಗಿದ್ದು, ಜ್ಯೂಸ್ ಜಾಸ್ತಿಯಿದೆ. ಅಲ್ಲದೆ ಈ ಹಣ್ಣು ಹಿಟ್ಟಿನ ರೀತಿ ಇಲ್ಲ. ವರ್ಷಕ್ಕೆ ನಾಲ್ಕು ಬಾರಿ ಫಸಲು ಬರುತ್ತದೆ. ಮಳೆಗಾಲದಲ್ಲಿ ಎರಡು ತಿಂಗಳು ಕಷ್ಟವಾದರೂ ಹೊಸ ಹುಮ್ಮಸ್ಸು ಮೂಡಿಸುತ್ತಿದೆ. ತಾವು 80 ಗಿಡಗಳನ್ನು ಸದ್ಯಕ್ಕೆ ಬೆಳೆದಿರುವುದಾಗಿ ತಿಳಿಸಿದರು.

ಗಿಡಗಳನ್ನು ವಿಮಾನದ ಮೂಲಕ ತರಿಸಲಾಗಿದೆ. 2019ರಲ್ಲಿ ಇವರಿಗೆ ಒಂದಷ್ಟು ಫಸಲು ಲಭಿಸಿದೆ. ಆರಂಭದಲ್ಲಿ 153 ಕಾಯಿ ದೊರೆತಿದ್ದು, ಒಂದು ಹಣ್ಣು 220 ಗ್ರಾಂ. ಬಂದಿದೆ. ಈ ಬಾರಿ ಒಂದು ಗಿಡದಲ್ಲಿ ಸುಮಾರು 250 ಕಾಯಿಯಷ್ಟು ಫಸಲು ಇವರಿಗೆ ಲಭ್ಯವಾಗಿದೆಯಂತೆ. ರಾಶಿತ್ ಅವರ ಪ್ರಯತ್ನ ಗಮನಿಸಲು ಇದೀಗ ಸಾಕಷ್ಟು ಜನತೆಯೂ ಅಲ್ಲಿಗೆ ಭೇಟಿ ನೀಡುತ್ತಿದ್ದು, ಗಿಡಗಳಿಗೂ ಬೇಡಿಕೆ ಮುಂದಿರಿಸುತ್ತಿದ್ದಾರೆ. ಆಸಕ್ತಿ ತೋರುವವರಿಗೆ ತಾವು ಗಿಡಗಳನ್ನು ತರಿಸಿಕೊಡುತ್ತಿರುವು ದಾಗಿಯೂ ಅವರು ಮಾಹಿತಿ ಯಿತ್ತರು. ಇವರು ತಮ್ಮ ಮನೆಯ ಸುತ್ತಮತ್ತ ಕಿವಿ ಫ್ರೂಟ್, ಸಾಫ್ಟ್‍ಷಿಯರ್ಸ್, ಬಾದಾಮಿ, ಡ್ರ್ಯಾಗನ್ ಫ್ರೂಟ್, ಸೀಬೆ, ನೇರಳೆ ಹಣ್ಣನ್ನೂ ಬೆಳೆಯುತ್ತಿದ್ದಾರೆ. ವಿಶೇಷವಾಗಿ ಸೇಬು ಬೆಳೆಯುವ ಬಗ್ಗೆ ಇವರು ಇದೀಗ ಸಾಕಷ್ಟು ಅನುಭವವನ್ನೂ ಹೊಂದಿದ್ದು, ಇತರರಿಗೂ ತಿಳಿಸಿಕೊಡುತ್ತಿದ್ದಾರೆ.

ಕಾಶ್ಮೀರ... ಹಿಮಾಚಲ ಪ್ರದೇಶ, ಶಿಮ್ಲಾನಂತಹ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಪುಟ್ಟ ಮಕ್ಕಳು ಇಂಗ್ಲಿಷ್ ಕಲಿಯುವ ಪ್ರಾರಂಭಿಕ ಹಂತದಲ್ಲಿ ಎ... ಫಾರ್ ಆ್ಯಪಲ್ ಎಂದೇ ಕರೆಯುವ ಈ ಆ್ಯಪಲ್ (ಸೇಬು) ಕೊಡಗಿನಲ್ಲೂ ಸಮೃದ್ಧಿಯಾಗಿ ಬರುತ್ತಿರುವುದು ವಿಶೇಷವಾಗಿದೆ. ಸಾಕಷ್ಟು ಮಂದಿಯೂ ಇದೀಗ ಇದರತ್ತ ಆಸಕ್ತಿ ತೋರುತ್ತಿರುವುದು ಮತ್ತೊಂದೆಡೆ ಯಾಗಿದೆ. ಕೊಡಗಿನ ಕಾಫಿ ತೋಟಗಳ ನಡುವೆ ಇನ್ನು ಕಿತ್ತಳೆ, ಬಟರ್ ಫ್ರೂಟ್, ಸಪೋಟ ಮತ್ತಿತರ ಹಣ್ಣಿನ ಬೆಳೆಗಳ ನಡುವೆ ಭವಿಷ್ಯದಲ್ಲಿ ಸೇಬು ಕೂಡ ರಾರಾಜಿಸಬಹುದು. ಈ ಬಗ್ಗೆ ಆಸಕ್ತಿ ಇರುವವರು ರಾಶಿತ್ 9886630600, 9743630600 ಅವರನ್ನು ಸಂಪರ್ಕಿಸಬಹುದು.

- ಶಶಿ ಸೋಮಯ್ಯ