ಗೋಣಿಕೊಪ್ಪಲು.ಜೂ.30: ಕೊರೊನಾ ರೋಗದ ಹರಡುವಿಕೆಯನ್ನು ತಡೆಗಟ್ಟಲು ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮಸ್ಥರು ಹಲವು ಕಠಿಣ ನಿಯಮಗಳನ್ನು ಅಳವಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮದ ಹಿರಿಯರು ಹಾಗೂ ದೇವಾಲಯದ ಅಧ್ಯಕ್ಷ ಕುಪ್ಪಂಡ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಹಲವಾರು ನಿಯಮಗಳನ್ನು ಗ್ರಾಮದಲ್ಲಿ ಪಾಲಿಸಲು ತೀರ್ಮಾನ ಕೈಗೊಳ್ಳಲಾಯಿತು.
ಹೊರ ಊರಿನಿಂದ ಬಂದವರಿಗೆ ಗ್ರಾಮದ ದೇವಸ್ಥಾನಕ್ಕೆ ಪ್ರವೇಶವಿರುವುದಿಲ್ಲ, ಗ್ರಾಮಸ್ಥರ ಮನೆಗೆ ಬಂದ ಇತರ ರಾಜ್ಯ ಅಥವಾ ಜಿಲ್ಲೆಯ ಅತಿಥಿಗಳನ್ನು ಗ್ರಾಮಕ್ಕೆ ಸಂಪರ್ಕ ಹೊಂದದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಅವರನ್ನು ಕ್ವಾರಂಟೈನ್ ಮಾಡುವ ಜವಾಬ್ದಾರಿ ಮನೆಯ ಮಾಲೀಕರು ವಹಿಸಬೇಕು. ಹೊರ ಜಿಲ್ಲೆಯಿಂದ ಆಗಮಿಸುವ ಅಪರಿಚಿತ ವ್ಯಕ್ತಿಗಳ ಮಾಹಿತಿಯನ್ನು ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ತಿಳಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನು ವ್ಯಾಪಾರಿಗಳು ಮೀನನ್ನು ಹಗಲುಹೊತ್ತಿನಲ್ಲಿ ತರಿಸಿಕೊಳ್ಳಬೇಕು, ಇದನ್ನು ಉಲ್ಲಂಘಿಸಿದಲ್ಲಿ ಲೈಸನ್ಸ್ ಅನ್ನು ರದ್ದುಗೊಳಿಸಲಾಗುವುದು, ಸಂಚಾರಿ ವ್ಯಾಪಾರವನ್ನು ಗ್ರಾಮದಲ್ಲಿ ನಿಷೇಧಿಸಲಾಗಿದ್ದು ಯಾವುದೇ ಹೋಂಸ್ಟೇ, ರೆಸಾರ್ಟ್ ತೆರೆಯದಂತೆ ತಿಳಿಸಲಾಗಿದೆ. ತೋಟದ ಮಾಲೀಕರು ತಮ್ಮಲ್ಲಿಗೆ ಕೆಲಸಕ್ಕೆ ಬರುವ ಜನರ ವಿವರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳುತಕ್ಕದ್ದು. ಗ್ರಾಮದಿಂದ ಕ್ವಾರಂಟೈನ್ ಹೊಟೇಲಿನ ಕೆಲಸಕ್ಕೆ ತೆರಳುವವರು ಅಲ್ಲಿಯೇ ತಂಗಬೇಕು. ಗ್ರಾಮದಲ್ಲಿ ಹಲವಾರು ಬಾಡಿಗೆದಾರರು ಇರುವುದರಿಂದ ಮನೆಯ ಮಾಲೀಕರು ಹೊರ ಊರಿನವರು ಬಂದು ತಂಗದಂತೆ ಎಚ್ಚರಿಕೆ ವಹಿಸಬೇಕೆಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಗ್ರಾಪಂ ಸದಸ್ಯ ಕುಪ್ಪಂಡ ಗಿರೀಶ್ ಪೂವಣ್ಣ, ಆರ್ ಎಂ ಸಿ ಸದಸ್ಯ ಚಿಯಕ್ಪೂವಂಡ ಸುಬ್ರಮಣಿ ಕಾಫಿ ಬೆಳೆಗಾರ ಜಮ್ಮಡ ಮೋಹನ್ ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.