*ಸಿದ್ದಾಪುರ, ಜೂ. 30 : ಕಾಡಾನೆಗಳ ಕಾಟದಿಂದ ಬೇಸತ್ತ ಅಭ್ಯತ್ಮಂಗಲ ಗ್ರಾಮದ ಗ್ರೀನ್ ಫೀಲ್ಡ್ ಎಸ್ಟೇಟ್ನ ಮಾಲೀಕರು ತೋಟದಲ್ಲಿದ್ದ ಹಲಸಿನ ಫಸಲನ್ನು ಸಂಪೂರ್ಣವಾಗಿ ಕಿತ್ತು ಎಸೆದ ಬೆನ್ನಲ್ಲೇ ವನ್ಯಜೀವಿಗಳ ಹಿಂಡು ತೋಟದ ಮನೆ ಮತ್ತು ಕಚೇರಿ ಎದುರು ಬೀಡುಬಿಟ್ಟು ಆತಂಕ ಸೃಷ್ಟಿಸಿವೆ.
ಕಳೆದ ಎರಡು ದಿನಗಳಿಂದ ಎಸ್ಟೇಟ್ನ ಬಿ.ವಿಭಾಗದ ಕುರಿಯನ್ ಜೋಸ್ ಎಂಬವರಿಗೆ ಸೇರಿದ ಮನೆ ಹಾಗೂ ಕಚೇರಿ ಎದುರಿನಲ್ಲೇ ಸುಮಾರು ಏಳು ಆನೆಗಳು ಓಡಾಡುತ್ತಿವೆ. ಇಂದು ಮನೆಯ ಎದುರಿನಲ್ಲಿದ್ದ ಕೃಷಿ ಪರಿಕರ, ಔಷಧಿ ಸಿಂಪಡಣೆಯ ಯಂತ್ರ, ನೀರಿನ ಟ್ಯಾಂಕ್, ಹೂವಿನ ಕುಂಡ ಮತ್ತಿತರ ವಸ್ತುಗಳನ್ನು ಸಂಪೂರ್ಣವಾಗಿ ಜಖಂಗೊಳಿಸಿವೆ.
ಸ್ಥಳಕ್ಕೆ ವನಪಾಲಕ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪಟಾಕಿಗಳನ್ನು ಸಿಡಿಸಿ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಸದ್ಯಕ್ಕೆ ಆನೆಗಳು ಕಾಲ್ಕಿತ್ತಿವೆ ಯಾದರೂ ಮತ್ತೆ ಪ್ರತ್ಯಕ್ಷ ವಾಗುವ ಆತಂಕ ಮನೆ ಮಾಡಿದೆ. ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುವುದೇ ಕಷ್ಟವಾಗಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರವನ್ನು ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ದ್ದಾರೆ. - ಅಂಚೆಮನೆ ಸುಧಿ