ಹೈಕೋರ್ಟ್‍ಗೂ ಕೊರೊನಾ ಭೀತಿ

ಬೆಂಗಳೂರು, ಜೂ. 30: ರಾಜ್ಯ ಹೈಕೋರ್ಟ್‍ಗೂ ಈಗ ಕೊರೊನಾ ಭೀತಿ ಆವರಿಸಿದೆ. ಮಂಗಳವಾರ ನಿಗದಿಯಾಗಿದ್ದ ಕಾರ್ಯಕಲಾಪಗಳನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಸಿಬ್ಬಂದಿಗೂ ಒಂದು ದಿನ ರಜೆ ಘೋಷಣೆ ಮಾಡಿದ್ದು, ಇಡೀ ಹೈಕೋರ್ಟ್ ಸ್ಯಾನಿಟೈಸ್ ಮಾಡಲಾಗುವುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದರೆ. ಆದರೆ, ಈ ಹಠಾತ್ ಬೆಳವಣಿಗೆ ಸ್ಪಷ್ಟ ಕಾರಣ ಬಹಿರಂಗಪಡಿಸಿಲ್ಲ. ಜೊತೆಗೆ, ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಹೈಕೋರ್ಟ್‍ನ ಬೆಂಗಳೂರು ಪ್ರಧಾನ ಪೀಠದಲ್ಲಿ ತೆರೆದ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ತುರ್ತು ವಿಚಾರಣೆಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ. ಧಾರವಾಡ ಹಾಗೂ ಕಲಬುರ್ಗಿ ಪೀಠಗಳಲ್ಲಿ ಮಾರ್ಗಸೂಚಿ ಅನುಸಾರ ಕಲಾಪಗಳು ನಡೆಯಲಿವೆ.

ಆಗಸ್ಟ್ ಮೊದಲ ವಾರ ಎಸ್‍ಎಸ್‍ಎಲ್‍ಸಿ ಫಲಿತಾಂಶ

ಬೆಂಗಳೂರು, ಜೂ. 30: ಜುಲೈ 4 ರಂದು ಮುಕ್ತಾಯಗೊಳ್ಳಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಪರೀಕ್ಷೆ ಮುಗಿದ ಸುರಕ್ಷಿತ ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಸೋಮವಾರ ಎಸ್‍ಎಸ್‍ಎಲ್ ಸಿಪಿ ಮೂರನೇ ಪರೀಕ್ಷೆಯನ್ನು ಶೇ. 97.3ರಷ್ಟು ಮಕ್ಕಳು ಬರೆದಿದ್ದಾರೆ. ಕಳೆದ ವರ್ಷ ಶೇ. 98.69 ರಷ್ಟು ಮಕ್ಕಳು ಪರೀಕ್ಷೆ ಬರೆದಿದ್ದರು. ನಿನ್ನೆ ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಹಾಗೂ ರಾಯಚೂರಿನಲ್ಲಿ ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದರು. ಎಲ್‍ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿರುವುದಿಲ್ಲ. ವಾರಕ್ಕೆ ಎರಡು ಬಾರಿ ಶಾಲೆಗಳ ಶಿಕ್ಷಕರು ಮಕ್ಕಳೊಂದಿಗೆ ದೂರವಾಣಿ ಮೂಲಕ ಸಂವಹನ ನಡೆಸುತ್ತಿರಬೇಕು ಎಂದು ಸೂಚಿಸಿದ್ದೇವೆ ಎಂದರು.

ಕುರಿ-ಮೇಕೆಗಳಿಗೂ ಸೋಂಕು ಪರೀಕ್ಷೆ

ತುಮಕೂರು, ಜೂ. 30: ತುಮಕೂರು ಜಿಲ್ಲೆಯಲ್ಲಿ ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆತ ಮೇಯಿಸುತ್ತಿದ್ದ 50ಕ್ಕೂ ಹೆಚ್ಚು ಕುರಿ ಹಾಗೂ ಮೇಕೆಗಳನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದ ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಹಾಗಾಗಿ ಆತನ 50 ಕುರಿಗಳನ್ನು ಪ್ರತ್ಯೇಕವಾಗಿರಿಸಿ ಅವುಗಳ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದನ್ನು ಮಧ್ಯ ಪ್ರದೇಶದ ಭೂಪಾಲ್‍ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ. ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಕೆ.ಜಿ. ನಂದೀಶ್ ನೇತೃತ್ವದಲ್ಲಿ ತಜ್ಞರಾದ ಡಾ. ಪ್ರವೀಣ್ ಮತ್ತು ಮಂಜುನಾಥ್ ಅವರು ಪಿಪಿಇ ಕಿಟ್ ಧರಿಸಿ ಕುರಿಗಳ ಗಂಟಲು ದ್ರವ ಸಂಗ್ರಹಿಸಿದರು. 10 ರಿಂದ 15 ದಿನಗಳಲ್ಲಿ ಕುರಿಗಳ ಕೋವಿಡ್-19 ವರದಿ ಬರಲಿದ್ದು, ಅಲ್ಲಿಯವರಿಗೆ ಈ ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಭಾರತವನ್ನು ಹೊಣೆ ಮಾಡಿದ ಪಾಕ್

ಇಸ್ಲಾಮಾಬಾದ್, ಜೂ. 30: ದೇಶದ ಅತಿದೊಡ್ಡ ನಗರ ಕರಾಚಿಯಲ್ಲಿ ಪಾಕಿಸ್ತಾನ ಸ್ಟಾಕ್ ಎಕ್ಸ್‍ಚೇಂಜ್ (ಪಿಎಸ್‍ಎಕ್ಸ್) ಮೇಲೆ ಇತ್ತೀಚೆಗೆ ನಡೆದ ದಾಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನದ ಜಿಯೋ ಟಿವಿ ಪ್ರಸಾರಕರು ಉಲ್ಲೇಖಿಸಿದಂತೆ ಭಾರತ ಈ ದಾಳಿಯಲ್ಲಿ ಭಾಗಿಯಾಗಿದೆ ಎಂಬದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ ಎಂದು ಖಾನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಪಿಎಸ್‍ಎಕ್ಸ್ ಕಟ್ಟಡದಲ್ಲಿ ಉಗ್ರರು ವಿವೇಚನೆಯಿಲ್ಲದೆ ಗುಂಡು ಹಾರಿಸಿದಾಗ ಕನಿಷ್ಟ ಏಳು ಜನರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ ಭಾಗಿಯಾದ ನಾಲ್ವರು ದಾಳಿಕೋರರನ್ನು ಪೊಲೀಸರು ಕೊಂದಿದ್ದಾರೆ. ಉಗ್ರರು ಪೊಲೀಸ್ ಅಧಿಕಾರಿಗಳ ವೇಷ ಧರಿಸಿ, ಬಹುಶಃ ಸ್ಫೋಟಕಗಳನ್ನು ಹೊಂದಿದ್ದ ಚೀಲವನ್ನು ಹೊತ್ತೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಡಿಜಿಟಲೀಕರಣ

ಬೆಂಗಳೂರು, ಜೂ. 30: ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು, ಸಂಪೂರ್ಣ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿದ್ದು, ಜುಲೈ 15 ರಿಂದ ಎಲ್ಲ ವಿಶ್ವವಿದ್ಯಾಲಯಗಳು ಸರ್ಕಾರದ ಜತೆ ಇ-ಆಫೀಸ್ (ಆನ್‍ಲೈನ್) ಮೂಲಕವೇ ವ್ಯವಹರಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ, ಎನ್‍ಐಸಿ ಸಹಯೋಗದಲ್ಲಿ ರೂಪಿಸಿರುವ ಶಿಕ್ಷಣ ಸಂಸ್ಥೆಗಳ ಆನ್‍ಲೈನ್ ಸಂಯೋಜನೆ ಪೋರ್ಟಲ್ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇ-ಆಫೀಸ್ ಯಶಸ್ವಿಯಾಗಿದ್ದು, ಅದರ ಮೂಲಕವೇ ಕಡತಗಳು ರವಾನೆ ಆಗಬೇಕು. ಎಲ್ಲಿ ಯಾವ ಕಡತ ಇದೆ, ವಿಲೇವಾರಿ ವಿಳಂಬವಾಗಲು ಕಾರಣ ಏನು ಎನ್ನುವುದನ್ನು ತಿಳಿಯಬಹುದು. ಅನಗತ್ಯವಾಗಿ ಕಡತಗಳನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗೆ ತಿಲಾಂಜಲಿ ಇಡಬಹುದು ಎಂದು ಅವರು ಹೇಳಿದರು. ಯಾವುದೇ ಕಾಲೇಜು ಅಥವಾ ಕೋರ್ಸ್‍ಗಳಿಗೆ ಮಾನ್ಯತೆ ನೀಡಬೇಕಾದರೂ ಆದಕ್ಕೆ ಸಂಬಂಧಿಸಿದ ಕಡತ ಅಥವಾ ಪತ್ರ ವ್ಯವಹಾರಗಳು ಆನ್‍ಲೈನ್ ಮೂಲಕವೇ ಆಗಬೇಕು. ಇದರಿಂದ ವಿಳಂಬ ಆಗುವುದು ತಪ್ಪುವ ಜತೆಗೆ ವ್ಯವಸ್ಥೆಯಲ್ಲಿ ಸುಧಾರಣೆ ಕೂಡ ಕಾಣಬಹುದು ಎಂದು ಹೇಳಿದರು.

ಭಾರತೀಯ ಯೋಧರಿಗೆ ಹೊಸ ಸಮಸ್ಯೆ

ನವದೆಹಲಿ, ಜೂ. 30: ಭಾರತ-ಚೀನೀ ಸೈನಿಕರ ಸಂಘರ್ಷ ಮತ್ತು ಸಾವಿಗೆ ವೇದಿಕೆಯಾಗಿದ್ದ ಗಲ್ವಾನ್ ಕಣಿವೆಯಲ್ಲಿ ಇದೀಗ ಭಾರತೀಯ ಯೋಧರಿಗೆ ಹೊಸ ಸಮಸ್ಯೆ ಎದುರಾಗಿದ್ದು, ಗಲ್ವಾನ್ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕರ್ತವ್ಯ ಪಾಲನೆಗೆ ಸೈನಿಕರಿಗೆ ವಾಟರ್ ಪ್ರೂಫ್ ಸಮವಸ್ತ್ರ ಅನಿವಾರ್ಯತೆ ಎದುರಾಗಿದೆ. ಗಲ್ವಾನ್ ಕಣಿವೆಯಲ್ಲಿ ಇದೀಗ ನೀರಿನ ಹರಿವು ಹೆಚ್ಚಾಗಿದ್ದು, ಇದರಿಂದಾಗಿ ಇಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಸೈನಿಕರಿಗೆ ಹೊಸ ಸಮಸ್ಯೆ ಎದುರಾಗಿದೆ. ಸೈನಿಕರ ಬಳಿ ವಾಟರ್ ಪ್ರೂಫ್ ಸಮವಸ್ತ್ರಗಳಿಲ್ಲದೇ ಇರುವುದರಿಂದ ನೀರಿನಲ್ಲಿ ಅವು ಒದ್ದೆಯಾದರೆ ಸೈನಿಕರಿಗೆ ಅನಾರೋಗ್ಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಸೈನಿಕರಿಗೆ ವಾಟರ್ ಪ್ರೂಫ್ ಸಮವಸ್ತ್ರಗಳನ್ನು ವಿತರಿಸಬೇಕು ಎಂದು ಮನವಿ ಮಾಡಲಾಗಿದೆ. ಅದರೆ ಅತ್ತ ಚೀನಾ ಸೇನೆ ಮಾತ್ರ ಇದಕ್ಕೆ ಸಂಪೂರ್ಣವಾಗಿ ಸಜ್ಜಾಗಿರುವಂತೆ ಕಂಡುಬಂದಿದ್ದು, ಗಲ್ವಾನ್ ಸಂಘರ್ಷದ ಬಳಿಕ ಚೀನಾ ಸೈನಿಕರಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಎಲ್ಲ ಚೀನಾ ಸೈನಿಕರು ವಾಟರ್ ಪ್ರೂಫ್ ಸಮವಸ್ತ್ರಗಳ ಸಹಿತ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಚೀನಾ ಸರ್ಕಾರಕ್ಕೆ ಹೆಚ್ಚಾಯಿತು ಆತಂಕ

ನವದೆಹಲಿ, ಜೂ. 30: ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸೋರಿಕೆ ಕಾರಣ ನೀಡಿ ಭಾರತ ಸರ್ಕಾರ 59 ಚೀನಾ ಮೂಲದ ಮೊಬೈಲ್ ಆ್ಯಪ್‍ಗಳನ್ನು ನಿಷೇಧಿಸಿದ ಬೆನ್ನಲ್ಲೇ ಇದಕ್ಕೆ ಚೀನಾ ಸರ್ಕಾರ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು, ಭಾರತ ಸರ್ಕಾರದ ನಡೆ ತೀವ್ರ ಆತಂಕಕಾರಿಯಾಗಿದೆ. ಈ ಕುರಿತಂತೆ ಪರಿಸ್ಥಿತಿ ಚೀನಾ ಸರ್ಕಾರ ಪರಾಮರ್ಶಿಸುತ್ತಿದೆ ಎಂದು ಹೇಳಿದ್ದಾರೆ. ಅಂತೆಯೇ ನಾನು ಈ ಮೂಲಕ ಸ್ಪಷ್ಟಪಡಿಸುವುದೇನೆಂದೆರೆ, ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನು-ನಿಬಂಧನೆಗಳನ್ನು ಪಾಲಿಸುವಂತೆ ಚೀನೀ ಸರ್ಕಾರ ಯಾವಾಗಲೂ ಚೀನಾ ಮೂಲದ ಸಂಸ್ಥೆಗಳಿಗೆ ಹೇಳುತ್ತದೆ. ಅಂತೆಯೇ ಚೀನಾ ಸೇರಿದಂತೆ ಅಂತರರಾಷ್ಟ್ರೀಯ ಹೂಡಿಕೆದಾರರ ಕಾನೂನು ಹಕ್ಕುಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಭಾರತ ಸರ್ಕಾರ ಹೊಂದಿದೆ ಎಂದೂ ಅವರು ಹೇಳಿದ್ದಾರೆ.