ವೀರಾಜಪೇಟೆ, ಜೂ. 27: ಮೈಸೂರು ಜಿಲ್ಲೆಯಿಂದ ಹುಣಸೂರು ಮಾರ್ಗವಾಗಿ ಗೋಣಿಕೊಪ್ಪಲು ಮೂಲಕ ವೀರಾಜಪೇಟೆಗೆ ಅಕ್ರಮವಾಗಿ ಗಾಂಜಾ ತರುತ್ತಿದ್ದ ಸುಳಿವಿನ ಮೇರೆಗೆ, ಪೊಲೀಸರು ಮಾಲು ಸಹಿತ ಇಬ್ಬರನ್ನು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ (ಕೆಎ-12, ಎ-2439) ವನ್ನು ವಶಪಡಿಸಿಕೊಳ್ಳಲಾಗಿದೆ.(ಮೊದಲ ಪುಟದಿಂದ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜಯಕುಮಾರ್ ನಿರ್ದೇಶನದಂತೆ, ವೃತ್ತ ನಿರೀಕ್ಷಕ ಕ್ಯಾತೇಗೌಡ ನೇತೃತ್ವದಲ್ಲಿ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಖಚಿತ ಮಾಹಿತಿಯಂತೆ ಆರೋಪಿಗಳಾದ ಮೈಸೂರಿನ ಕಲ್ಯಾಣಗಿರಿ ನಿವಾಸಿ ಡಿ. ಮಹಮ್ಮದ್ ಇದ್ರೀಸ್ (43), ಪಿರಿಯಾಪಟ್ಟಣದ ಪಂಚವಳ್ಳಿಯ ಆಟೋ ಚಾಲಕ ಜಬಿವುಲ್ಲಾಖಾನ್ (38) ಸೇರಿಕೊಂಡು ರೂ. 41 ಸಾವಿರ ಮೌಲ್ಯದ 1.182 ಕೆ.ಜಿ. ತೂಕದ ಗಾಂಜಾ ಸರಬರಾಜುಗೊಳಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಆಟೋ ರಿಕ್ಷಾ ಹಾಗೂ ಗಾಂಜಾ ಸಹಿತ ಆರೋಪಿಗಳಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪ್ರೊಬೆಷನರಿ ಎಸ್.ಐ.ಗಳಾದ ವಿನಯ್ ಕುಮಾರ್, ಸಿ.ಎಸ್. ಅಭಿಜಿತ್, ಎ.ಎಸ್.ಐ. ಶ್ರೀಧರ್, ಸಿಬ್ಬಂದಿಗಳಾದ ಮುಸ್ತಾಫ, ಮುನೀರ್, ಲೋಕೇಶ್, ಗಿರೀಶ್, ಈರಪ್ಪ, ಚಾಲಕ ಯೋಗೇಶ್ ಪಾಲ್ಗೊಂಡಿದ್ದರು.