ಮಡಿಕೇರಿ, ಜೂ. 27: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಭಿನ್ನ ಪರಿಸ್ಥಿತಿಯ ನಡುವೆ ನಿರ್ವಹಿಸಿರುವ ಸೇವೆ ತಮ್ಮ ಬದುಕಿನಲ್ಲಿ ಅವಿಸ್ಮರಣೀಯ ಎಂದು ಪ್ರತಿಕ್ರಿಯಿಸಿರುವ ಡಾ. ಸುಮನ್ ಡಿ. ಪನ್ನೇಕರ್ ಅವರು ಸರಕಾರದಿಂದ ತಮ್ಮ ವರ್ಗಾವಣೆ ನಿರೀಕ್ಷಿತವಾಗಿತ್ತು ಎಂದು ಅಭಿಪ್ರಾಯ ನೀಡಿದ್ದಾರೆ.ತಾವು ಅಧಿಕಾರ ವಹಿಸಿಕೊಂಡು ಬರುವ ಜುಲೈ 17ಕ್ಕೆ ಎರಡು ವರ್ಷ ತುಂಬಲಿದ್ದು, ಈ ಕಾಲಘಟ್ಟದಲ್ಲಿ ವರ್ಗಾವಣೆ ಸಹಜವಾದುದು ಎಂದು ಮಾರ್ನುಡಿದರು. 2018ರ ಪ್ರಾಕೃತಿಕ ವಿಕೋಪ, 2019ರ ಜಲಪ್ರವಾಹ ಹಾಗೂ 2020ರ ಈಗಿನ ಕೊರೊನಾ ಸನ್ನಿವೇಶದಲ್ಲಿ ಪೊಲೀಸ್ ಇಲಾಖೆಯಿಂದ ಜನತೆಗೆ ಉತ್ತಮ ಸೇವೆ ನೀಡುವ ಅವಕಾಶ ಲಭಿಸಿದ್ದಾಗಿ, ಅವರು ಹಿಂದಿನ ದಿನಗಳನ್ನು ಉಲ್ಲೇಖಿಸಿದರು.
ಸಾಕಷ್ಟು ತಯಾರಿ: ಪೊಲೀಸ್ ಇಲಾಖೆಯಲ್ಲಿ ತಮ್ಮ ಮೂಲಕ ಒಳ್ಳೆಯ ಕೆಲಸವಾಗಿದ್ದರೆ ಅದರ ಶ್ರೇಯಸ್ಸು ಎಲ್ಲ ಉಪ ಅಧೀಕ್ಷಕರು, ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಕಚೇರಿ ಉದ್ಯೋಗಿಗಳು, ಅಪರಾಧ ಪತ್ತೆದಳ, ಸಶಸ್ತ್ರ ಮೀಸಲು ಪೊಲೀಸರ ಸಂಘಟಿತ ಪ್ರಯತ್ನವೆಂದು ನುಡಿದ ಅವರು, ಎಲ್ಲ ಶ್ರೇಯಸ್ಸು ಪ್ರತಿಯೊಬ್ಬರಿಗೆ ಸಲ್ಲಬೇಕು ಎಂದು ಹೆಮ್ಮೆ ವ್ಯಕ್ತಪಡಿಸಿದರು.ಕೊಡಗು ಸ್ಫೂರ್ತಿ: ಕೊಡಗಿನಲ್ಲಿ ಕಾನೂನಿಗೆ ಬೆಲೆ ಕೊಡುವುದರೊಂದಿಗೆ, ಒಳ್ಳೆಯ ಕೆಲಸಗಳಿಗೆ ಎಲ್ಲ ವರ್ಗದ ಜನತೆ ಬೆಂಬಲಿಸುವ ಮೂಲಕ ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ಕೋಮು ಸಂಘರ್ಷ, ದೊಂಬಿಗಳಿಗೆ ಅವಕಾಶವಾಗದಂತೆ ಸಹಕರಿಸಿದ್ದು, ಉತ್ತಮ ಕಾರ್ಯನಿರ್ವಹಣೆಗೆ ಕೊಡಗು ತಮಗೆ ಸದಾ ಸ್ಫೂರ್ತಿ ನೀಡಿದೆ ಎಂದರು.
ತವರಿನಂತೆ ಆಸರೆ: ಒಂದು ರೀತಿ ಕೊಡಗು ತಮಗೆ ತವರು ಜಿಲ್ಲೆಯಂತೆ ಇಲ್ಲಿನ ವಾತಾವರಣ ಮನಸ್ಸಿಗೆ ಹಿಡಿಸಿದ್ದಾಗಿ ಬಣ್ಣಿಸಿದ ಎಸ್ಪಿ ಅವರು, ತಮ್ಮ ತಂದೆ-ತಾಯಿ, ಪತಿ, ಮಗು ಕೂಡ ಈ ವಾತಾವರಣಕ್ಕೆ ಒಗ್ಗಿ ಹೋಗಿದ್ದಾಗಿ ಮೆಲುಕು ಹಾಕಿದರು. (ಮೊದಲ ಪುಟದಿಂದ) ಇಲಾಖೆಯ ಪ್ರತಿಯೊಬ್ಬರ ಸ್ಪಂದನ; ಮಾಧ್ಯಮಗಳ ಬೆಂಬಲ, ಸಾರ್ವಜನಿಕರ ನೆರವಿನಿಂದ ತವರು ನೆಲದಂತೆ ಭಾಸವಾಗುತ್ತಿದ್ದುದಾಗಿ ಅಂತರಾಳದ ನುಡಿಯಾಡಿದರು.
ಒಗ್ಗಟ್ಟು ಅವಶ್ಯಕ: ಕೊಡಗು ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ಸಹಿತ ಅಧಿಕಾರಿಗಳು ಯಾರೇ ಕರ್ತವ್ಯ ನಿರ್ವಹಣೆ ನಡೆಸುವಂತಾದರೂ, ಈ ನೆಲ, ಜಲ, ಸಂಸ್ಕøತಿ, ಪರಂಪರೆಯ ರಕ್ಷಣೆಗಾಗಿ ಪ್ರಮುಖ ಜನಾಂಗಗಳ ಸಹಿತ ಸಣ್ಣ ಸಣ್ಣ ವರ್ಗದವರು ಕೂಡ ಒಗ್ಗಟ್ಟು ಕಾಪಾಡಿಕೊಂಡು ಏಕತಾ ಭಾವದಿಂದ ಇರಬೇಕಾದದ್ದು ತೀರಾ ಅವಶ್ಯಕವೆಂದು ಅವರು ಕರೆ ನೀಡಿದರು.
ಈ ಸೂಕ್ಷ್ಮತೆಯನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡರೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಕಾನೂನು ತನ್ನದೇ ರೀತಿಯಲ್ಲಿ ಯಾರಿಗೂ ತೊಂದರೆ ಉಂಟಾಗದಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಎಸ್ಪಿ ಮಾರ್ನುಡಿದರು.
ಮುಂಗಾರು ಸಿದ್ಧತೆ: ಹಿಂದಿನ ಎರಡು ವರ್ಷಗಳ ಅನುಭವದೊಂದಿಗೆ ಪ್ರಸ್ತುತ ಕೊರೊನಾ ನಡುವೆ ಮುಂಗಾರು ಎದುರಿಸಲು ಜಿಲ್ಲಾಡಳಿತ ದೊಂದಿಗೆ ಎನ್‍ಡಿಆರ್‍ಎಫ್ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಇದೊಂದು ನಿರಂತರ ಪ್ರಕ್ರಿಯೆ ಎಂಬ ಅರಿವು ತಮಗಾಗಿದೆ ಎಂದು ವಿವರಿಸಿದರು.
ಬೇಸರವೂ ಇದೆ: ಪ್ರಸ್ತುತ ಸನ್ನಿವೇಶದಲ್ಲಿ ಕೊಡಗಿನಿಂದ ಬೆಂಗಳೂರಿಗೆ ವರ್ಗಾವಣೆ ಗೊಂಡಿರುವುದು ತಂದೆ ದೇವಪ್ಪ ಪನ್ನೇಕರ್, ತಾಯಿ ಪಾರ್ವತಮ್ಮ ಹಾಗೂ ಪತಿ ಮೃತ್ಯುಂಜಯ ಸಹಿತ ಪುತ್ರಿ ಪುಟಾಣಿ ಖುಷಿಗೆ ಬೇಸರವಿದ್ದು, ತಾವು ಸದಾ ಸರಕಾರ ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳ ಆದೇಶ ಪಾಲಿಸುವೆ ಎಂದು ಡಾ. ಸುಮನ್ ತಮ್ಮ ಮಾತಿಗೆ ತೆರೆ ಎಳೆದರು.
ಅಲ್ಲದೆ ಯಾರೇ ಹೊಸ ಅಧಿಕಾರಿಗಳು ಬಂದರೂ ಜಿಲ್ಲೆಯ ಜನತೆ ಸಹಕಾರದೊಂದಿಗೆ ಕಾನೂನನ್ನು ಗೌರವಿಸುವ ಆಶಯ ತಮ್ಮದಾಗಿದೆ ಎಂದು ಸೂಚ್ಯವಾಗಿ ಬಣ್ಣಿಸಿದರು.