*ಸಿದ್ದಾಪುರ, ಜೂ. 25 : ಕಾಡಾನೆ ದಾಳಿಗೆ ಸಿಲುಕಿದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಿಂದ ಪಾರಾದ ಘಟನೆ ಅಭ್ಯತ್ ಮಂಗಲದ ಚೆಟ್ಟಿಮೂಲೆಯಲ್ಲಿ ನಡೆದಿದೆ. ಆದರೆ ವ್ಯಕ್ತಿ ಚಾಲಿಸುತ್ತಿದ್ದ ಸ್ಕೂಟಿಯನ್ನು ಆನೆ ಜಖಂಗೊಳಿಸಿದೆ.
ಬಡ ಕೃಷಿಕ ಚೆಟ್ಟಿಮೂಲೆ ನಿವಾಸಿ ಬಿ.ಎಸ್.ಸುರೇಶ್ ಎಂಬವರು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಮನೆಯಿಂದ ನೂರು ಮೀಟರ್ ಅಂತರದಲ್ಲಿ ಕಾಡಾನೆ ದಾಳಿ ಮಾಡಿದೆ. ತಕ್ಷಣ ಎಚ್ಚೆತ್ತುಕೊಂಡ ಸುರೇಶ್ ಅವರು ಸ್ಕೂಟಿಯನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಆನೆ ಸ್ಕೂಟಿಯನ್ನು ಬೀಳಿಸಿ ಜಖಂಗೊಳಿಸಿದೆ.
ಸ್ಥಳಕ್ಕೆ ವನಪಾಲಕ ಕೂಡಕಂಡಿ ಸುಬ್ರಾಯ ಭೇಟಿ ನೀಡಿ ಪರಿಶೀಲಿಸಿದರು. ಸುಮಾರು ನಾಲ್ಕು ತಿಂಗಳ ಹಿಂದೆಯಷ್ಟೇ ಸುರೇಶ್ ಅವರಿಗೆ ಸೇರಿದ ಹಸುವನ್ನು ಕಾಡಾನೆಯೊಂದು ಘಾಸಿಗೊಳಿಸಿತ್ತು. ಈ ಭಾಗದಲ್ಲಿ ನಿರಂತರವಾಗಿ ಆನೆಗಳ ದಾಳಿಯಾಗುತ್ತಿದ್ದು, ಕೃಷಿಕರು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. -ಸುಧಿ