ನಾಪೆÇೀಕ್ಲು, ಜೂ. 24: ಸ್ಥಳೀಯ ಪಂಚಾಯಿತಿ, ಸರಕಾರ ಸಾರ್ವಜನಿಕರ ಹಿತಕಾಯುವ, ಕಾನೂನು ಪಾಲನೆ ಮಾಡುವ ಕೆಲಸ ನಿರ್ವಹಿಸುವದು ಸಹಜ. ಆದರೆ, ಸರಕಾರದ, ಪಂಚಾಯಿತಿಯ ಕಾನೂನು ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ, ಬಿಡ್ಡುದಾರನಿಗೆ ಸಮಸ್ಯೆಯಾದರೆ ಇದನ್ನು ಪರಿಹರಿಸುವವರು ಯಾರು? ಇದಕ್ಕೆ ಉದಾಹರಣೆ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಕಾನೂನು.

ನಾಪೆÇೀಕ್ಲು ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ. ಹಾಗೆಯೇ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿ ಕೂಡ. ಇಲ್ಲಿ ಪ್ರತಿ ವರ್ಷ ಮಾರುಕಟ್ಟೆ ಸುಂಕ ಎತ್ತಾವಳಿಗೆ ಟೆಂಡರ್ ಕರೆಯಲಾಗುತ್ತದೆ. ಬಿಡ್ಡು ದರ ಮಾತ್ರ ವರ್ಷದಿಂದ ವರ್ಷಕ್ಕೆ ಶೇ.10ರಷ್ಟು ಹೆಚ್ಚಳವಾಗಿರುತ್ತದೆ. ಇದು ಪಂಚಾಯತ್ ರಾಜ್ ಇಲಾಖೆಯ ಕಾನೂನು. ಇದನ್ನು ಗ್ರಾ.ಪಂ. ಆಡಳಿತ ಸಡಿಲ ಗೊಳಿಸುತ್ತಿಲ್ಲ. ಅದರಂತೆ 2018-19ನೇ ಸಾಲಿನಲ್ಲಿ 11 ಲಕ್ಷದ 600 ರೂ. 2019-20ನೇ ಸಾಲಿನಲ್ಲಿ 12,10,870 ರೂ. ಹಾಗೂ 2020-21ನೇ ಸಾಲಿನಲ್ಲಿ 13 ಲಕ್ಷದ 40 ಸಾವಿರ ರೂ.ಗಳಿಗೆ ಹರಾಜಾಗಿದೆ.

ಬಿಡ್ಡುದಾರ ಪಂಚಾಯಿತಿಗೆ ನೀಡಿದ ಈ ಮೊತ್ತದ ಹಣ ವಸೂಲಾತಿಗೆ 52 ವಾರಗಳು ಮಾತ್ರ ಲಭಿಸುತ್ತದೆ. ಅದರಲ್ಲಿ ಮಳೆಗಾಲದ ಪ್ರವಾಹದಿಂದ ಕೆಲವು ದಿನ ಸಂತೆ ನಡೆಯುವುದಿಲ್ಲ. ನಡೆದ ದಿನ ವ್ಯಾಪಾರಸ್ತರು ಕಡಿಮೆಯಿರುತ್ತಾರೆ. ಅಂಗಡಿ ಸುಂಕದ ಮೊತ್ತವನ್ನು ಪಂಚಾಯಿತಿ ನಿಗದಿಪಡಿಸುತ್ತದೆ. ಈ ಹಣವನ್ನು ಬಿಡ್ಡುದಾರ ವಸೂಲಾತಿ ಮಾಡಬೇಕಾಗುತ್ತದೆ. ಸುಂಕ ಹೆಚ್ಚು ಎಂಬ ಕಾರಣ ನೀಡಿ ಸಂತೆಯಲ್ಲಿ ಮಾರಾಟ ಮಾಡುವ ತರಕಾರಿ, ವಸ್ತುಗಳ ದರ ಹೆಚ್ಚಳವಾಗುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಹೊರೆ ಬೀಳುತ್ತದೆ ಎನ್ನುವದು ಸಾರ್ವಜನಿಕರ ಅಳಲಾಗಿದೆ. ಇದು ನಿವಾರಣೆಯಾಗ ಬೇಕಾದರೆ ಪಂಚಾಯಿತಿಯ ಬಿಡ್ಡನ್ನು ಕಡಿಮೆ ಗೊಳಿಸಬೇಕು. ಬಿಡ್ಡು ಪಡೆದವರು ಸುಂಕವನ್ನು ಕಡಿಮೆಗೊಳಿಸಬೇಕು. ವ್ಯಾಪಾರಸ್ಥರು ತಾವು ಮಾರಾಟ ಮಾಡುವ ವಸ್ತುಗಳ ಬೆಲೆಯನ್ನು ಕಡಿಮೆಗೊಳಿಸ ಬೇಕು. ಆದರೆ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಂತಾಗುತ್ತದೆ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬುದು ಪ್ರಶ್ನೆ.

- ಪಿ.ವಿ. ಪ್ರಭಾಕರ್