ಸೋಮವಾರಪೇಟೆ, ಜೂ. 24: ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಧನ ಸಹಾಯ ನೀಡುವದರೊಂದಿಗೆ ಹಣ್ಣು ಹಂಪಲು ವಿತರಿಸಿದರು.

ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ 18 ಒಳರೋಗಿಗಳಿಗೆ ತಲಾ 500 ರೂಪಾಯಿ ಧನ ಸಹಾಯ ನೀಡಿದರಲ್ಲದೇ, ಹಣ್ಣು ಹಂಪಲು ವಿತರಿಸಿ ಶೀಘ್ರ ಗುಣಮುಖ ರಾಗುವಂತೆ ಆಶಿಸಿದರು.

ಈ ಸಂದರ್ಭ ಮಾತನಾಡಿದ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಅವರು, ಕಳೆದ ಅನೇಕ ವರ್ಷಗಳಿಂದ ವಾರ್ಷಿಕ ಸಾವಿರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಅವರು, ಪಟ್ಟಣದ ಆನೆಕೆರೆ ಮತ್ತು ಯಡೂರು ಕೆರೆಯನ್ನು 12 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹೂಳು ತೆಗೆಸುವ ಮೂಲಕ ಕೃಷಿಕರ ನೆರವಿಗೆ ಧಾವಿಸಿದ್ದಾರೆ ಎಂದರು.

ಪ್ರತಿ ವರ್ಷ ಅವರ ಹುಟ್ಟುಹಬ್ಬದಂದು ಸಂಘದ ವತಿಯಿಂದ ಸಮಾಜಮುಖಿ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಪಟ್ಟಣದ ಆನೆಕೆರೆಯಲ್ಲಿ ನೀರಿನ ಮಟ್ಟ ಅಧಿಕಗೊಳ್ಳುತ್ತಿದ್ದು, ಈ ವರ್ಷದ ಬೇಸಿಗೆಯಲ್ಲೂ ಸಹ ಕೆರೆ ಬತ್ತಿಲ್ಲ. ಆದರೆ ಕೆರೆಯ ಸುತ್ತಮುತ್ತ ಅಶುಚಿತ್ವ ತಾಂಡವವಾಡುತ್ತಿದ್ದು, ಕೆರೆಯ ಆವರಣ ಶುಚಿತ್ವಕ್ಕೆ ಪ.ಪಂ. ಮುಂದಾಗಿಲ್ಲ. ತಕ್ಷಣ ಈ ಬಗ್ಗೆ ಕ್ರಮ ವಹಿಸದಿದ್ದಲ್ಲಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಆನಂದ, ಕಾರ್ಯದರ್ಶಿ ರಾಜಪ್ಪ, ಸಹಕಾರ್ಯದರ್ಶಿ ಹೆಚ್.ಓ. ಪ್ರಕಾಶ್, ಪದಾಧಿಕಾರಿ ಅಜಯ್ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.