ಹಳಬರು-ಹೊಸಬರ ಮಧ್ಯೆ ಹಲವರು...!
ಕುಶಾಲನಗರ, ಜೂ. 24: ಕೊಡಗು ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರದಲ್ಲಿ ನಗರ ಕಾಂಗ್ರೆಸ್ ಕೆಲವು ಸಮಯದಿಂದ ಗೊಂದಲದ ಗೂಡಾಗಿ ಪರಿವರ್ತನೆಗೊಳ್ಳುವುದರೊಂದಿಗೆ ರಾಷ್ಟ್ರೀಯ ಪಕ್ಷವೊಂದು ಕೇವಲ ಹುದ್ದೆಗಾಗಿ ಮೀಸಲಿಟ್ಟಂತೆ ಕಾರ್ಯತತ್ಪರವಾಗಿರುವುದು ಕಂಡುಬಂದಿದೆ. ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಹೆಮ್ಮೆಯ ಕುಶಾಲನಗರದಲ್ಲಿ ಪಕ್ಷವೊಂದು ಹಲವು ಬಾಗಿಲುಗಳು ಎಂಬಂತೆ ಪಕ್ಷದ ಚಟುವಟಿಕೆಗಳು ಗೋಚರವಾಗುತ್ತಿದೆ ಎನ್ನುವುದು ಸಾಮಾನ್ಯ ಕಾರ್ಯಕರ್ತರ ಅಳಲಾಗಿದೆ.
ಗುಂಡುರಾಯರ ಕಾಲದ ಕಾಂಗ್ರೆಸ್ ಪಕ್ಷನಿಷ್ಠರು ಬಹುತೇಕ ಮನೆ ಸೇರಿದ್ದರೆ ನಂತರದ ಪೀಳಿಗೆ ಸಮರ್ಪಕವಾಗಿ ಪಕ್ಷ ಕಟ್ಟುವಲ್ಲಿ ಎಡವುತ್ತಿದೆ ಎನ್ನುವುದು ಹಲವರ ಅಳಲು. ಹೆಚ್ಚಿನ ಮುಖಂಡರು ತಮ್ಮ ಹುದ್ದೆಗಾಗಿ ಪೈಪೋಟಿ ನಡೆಸುವ ಮೂಲಕ ಪಕ್ಷವನ್ನು ನಾಶ ಮಾಡುವ ಮನಸ್ಥಿತಿಗೆ ಒಳಗಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಕಳೆದ ಒಂದು ವರ್ಷದ ಈಚೆಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೇಮಕವಾಗುತ್ತಿದ್ದಂತೆ ನಗರ ಕಾಂಗ್ರೆಸಿಗರ ಅಸಮಾಧಾನ ಸ್ಫೋಟಗೊಂಡಿರುವುದು ಇನ್ನೂ ಶಮನವಾಗಿಲ್ಲ. ಶನಿವಾರಸಂತೆಯ ವ್ಯಕ್ತಿಯೊಬ್ಬರಿಗೆ ಕುಶಾಲನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನ ಪಟ್ಟ ನೀಡಿರುವುದೇ ಈ ಎಲ್ಲಾ ಅಸಮಾಧಾನಕ್ಕೆ ಕಾರಣವಾಗಿದೆ.
ಈ ನಡುವೆ ಯಾವುದೇ ಸಭೆ, ಕಾರ್ಯಕ್ರಮಗಳಿಗೆ ಕುಶಾಲನಗರದ ಕಾಂಗ್ರೆಸ್ ಮುಖಂಡರು ಬಹುತೇಕ ಕಾರ್ಯಕರ್ತರು ಗೈರು ಹಾಜರಾಗುತ್ತಿರುವುದು ಇದಕ್ಕೆ ಪುಷ್ಠಿ ನೀಡಿದಂತಿದೆ. ಪಕ್ಷದ ಹುದ್ದೆಗಳನ್ನು ದಿಢೀರ್ ಬದಲಾವಣೆ ಮಾಡುವ ಸಂದರ್ಭ ತಮ್ಮನ್ನು ಕಡೆಗಣನೆ ಮಾಡಿದ್ದಾರೆ ಎನ್ನುವುದು ಕುಶಾಲನಗರದ ಹಿರಿಯ ಕಾಂಗ್ರೆಸಿಗರ ಬೇಸರ ಹಾಗೂ ನೋವಾಗಿದೆ. ಕಳೆದ 4 ದಶಕಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದು ಈ ಪರಿಶ್ರಮ ಈಗಿನ ಪೀಳಿಗೆಗೆ ಅರಿವು ಇಲ್ಲದಿರುವ ಕೆಲವರ ಬಗ್ಗೆ ಕುಶಾಲನಗರದ ಹಿರಿಯ ಕಾಂಗ್ರೆಸಿಗರಾದ ಎಸ್.ಎನ್. ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಗುಂಡುರಾವ್, ಮಾಜಿ ಮಂತ್ರಿ ಬೆಳ್ಳಿಯಪ್ಪ ಅವರ ಕಾಲದಲ್ಲಿ ಒಗ್ಗಟ್ಟಿನಿಂದ ದುಡಿದ ಕಾಂಗ್ರೆಸ್ ಪಕ್ಷದ ಹಿರಿಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎನ್ನುವುದು ಅವರ ಆರೋಪವಾಗಿದೆ. ಪ್ರಸಕ್ತ ಸ್ಥಿತಿಯಲ್ಲಿ ಕುಶಾಲನಗರದಲ್ಲಿ ಕಾಂಗ್ರೆಸ್ ಬಾಗಿಲೇ ಇಲ್ಲದಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಬಹುತೇಕ ಮುಖಂಡರು ಹುದ್ದೆಗೆ ಮಾತ್ರ ಪೈಪೋಟಿ ನಡೆಸುತ್ತಿದ್ದು ಪಕ್ಷ ಸಂಘಟನೆಗೆ ಒತ್ತು ನೀಡುತ್ತಿಲ್ಲ ಎನ್ನುವುದು ಕೆಪಿಸಿಸಿ ಸಂಚಾಲಕ ಮಂಜುನಾಥ್ ಗುಂಡುರಾವ್ ಅವರ ಅಭಿಪ್ರಾಯವಾಗಿದೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ, ಇತ್ತೀಚೆಗೆ ನಡೆದ ನಗರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂದರ್ಭ ಯಾವುದೇ ರೀತಿಯ ಚರ್ಚೆಯೂ ನಡೆಸದೆ ಏಕಾಏಕಿ ನಿರ್ಧಾರ ಕೈಗೊಂಡಿರುವ ಬಗ್ಗೆ ನಗರ ಕಾಂಗ್ರೆಸಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಪಕ್ಷದ ಚಟುವಟಿಕೆ ಕೇಂದ್ರವಾಗಿರುವ ಕುಶಾಲನಗರದ ನಗರಾಧ್ಯಕ್ಷ ನೇಮಕ ಸಂದರ್ಭ ಯಾರ ಗಮನಕ್ಕೂ ತಂದಿಲ್ಲ ಎನ್ನುವ ಬೇಸರ ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರ ಅಭಿಪ್ರಾಯವಾಗಿದೆ. ಇದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವೈಫಲ್ಯ ಎನ್ನುವುದು ಅವರ ಆರೋಪವಾಗಿದೆ. ಕುಶಾಲನಗರದ ಕಾಂಗ್ರೆಸ್ ಮುಖಂಡರು ಕೂಡ ಯಾವುದೇ ಸಭೆಗೆ ಹಾಜರಾಗಿಲ್ಲ. ಆದರೆ ಈ ನಿಟ್ಟಿನಲ್ಲಿ ತಾವ್ಯಾರೂ ವಿಚಲಿತರಾಗಿಲ್ಲ ಎನ್ನುವುದು ಅವರ ವಾದವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ಜಿಲ್ಲಾ ಕಾಂಗ್ರೆಸ್ ಎಡವಿದೆ ಎನ್ನುತ್ತಾರೆ.
ರಾಷ್ಟ್ರ, ರಾಜ್ಯ, ಜಿಲ್ಲೆ ಸೇರಿದಂತೆ ಹಲವು ಹಂತದ ಅಧಿಕಾರ ಭಾರತೀಯ ಜನತಾ ಪಕ್ಷದ ತೆಕ್ಕೆಯಲ್ಲಿದ್ದು ಇದೀಗ ವಿರೋಧ ಪಕ್ಷವಾಗಿ ಸಂಘಟನೆಯಲ್ಲಿ ತೊಡಗಬೇಕಾದ ಕಾಂಗ್ರೆಸ್ ಕುಶಾಲನಗರದಲ್ಲಿ ಮಾತ್ರ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿದೆ. ಆದಷ್ಟು ಬೇಗ ಈ ಬಗ್ಗೆ ಸಂಪೂರ್ಣ ಚಿತ್ರಣವನ್ನು ಕೆಪಿಸಿಸಿ ಅಧ್ಯಕ್ಷರ ಬಳಿ ನಿಯೋಗ ತೆರಳಿ ನೀಡಲಾಗುವುದು ಎಂದು ಕುಶಾಲನಗರ ಮಾಜಿ ಕುಡ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದಲ್ಲಿ ಎಂಎಲ್ಎ, ಎಂಎಲ್ಸಿ ಚುನಾವಣೆ ಸಂದರ್ಭ ಹೊರಗಿನಿಂದ ಅಭ್ಯರ್ಥಿಗಳನ್ನು ತಂದು ನಿಯೋಜಿಸುವುದು ಇತ್ತೀಚಿನ ಬೆಳವಣಿಗೆಯಾಗಿದ್ದು, ಇಷ್ಟೆಲ್ಲಾ ಆವಾಂತರಕ್ಕೆ ಕಾರಣ. ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಪೈಸಾರಿ ಜಾಗದಂತೆ ಕೆಲವರು ಬಳಸಿಕೊಳ್ಳುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಕೆಲವರು ಕಾಂಗ್ರೆಸ್ನ ಅವನತಿಗೆ ಹುನ್ನಾರ ಮಾಡುತ್ತಿದ್ದಾರೆ ಎನ್ನುವುದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಅವರ ಪ್ರತಿಕ್ರಿಯೆಯಾಗಿದೆ. ಈ ಬಗ್ಗೆ ದೂರುಗಳು ಬಂದಿದ್ದು ಪಕ್ಷದಲ್ಲಿದ್ದುಕೊಂಡು ಆರೋಪ ಮಾಡುವವರೇ ಆರೋಪಿಗಳು ಎಂದು ಹೇಳುವ ಅವರು ಪಕ್ಷದ ಮಾರ್ಗಸೂಚಿಯಲ್ಲಿ ಎಲ್ಲಾ ಕಾರ್ಯ ನಡೆಯುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಗುಂಪು ಕಟ್ಟಿಕೊಂಡು ಸ್ವಾರ್ಥ ರಾಜಕಾರಣ ಮಾಡುವ ಜನ ಕುಶಾಲನಗರದಲ್ಲಿ ಕಂಡುಬರುತ್ತಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕುಶಾಲನಗರದಲ್ಲಿ ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದು ಪಕ್ಷದ ಕಾರ್ಯಕರ್ತರಲ್ಲಿ ಮಾತ್ರ ನಿತ್ಯ ಗೊಂದಲ ಮೂಡಿಸುತ್ತಿರುವುದಂತೂ ಸತ್ಯ.
- ಎಂ.ಎನ್. ಚಂದ್ರಮೋಹನ್