ಕೂಡಿಗೆ, ಜೂ. 24: ಇಲ್ಲಿಗೆ ಸಮೀಪದ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದ ಆರು ತಿಂಗಳ ಹಿಂದೆ ಕಾಡಿಗೆ ಬೆಂಕಿ ಬಿದ್ದು ಕಾಡಿನ ಅನೇಕ ಗಿಡ, ಮರಗಳು ಸುಟ್ಟುಹೋಗಿದ್ದವು. ಆ ಪ್ರದೇಶದಲ್ಲಿ ಇದೀಗ ಗಿಡ ನೆಡುವ ಕಾರ್ಯಕ್ರಮ ಅರಣ್ಯ ಇಲಾಖೆಯ ವತಿಯಿಂದ ಪ್ರಾರಂಭವಾಗಿದೆ.

ಸೋಮವಾರಪೇಟೆ ತಾಲೂಕು ವಲಯ ಅರಣ್ಯ ಇಲಾಖೆ ವತಿಯಿಂದ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನೆಹರು ಅವರ ಮಾರ್ಗದರ್ಶನದಲ್ಲಿ ಯಡವನಾಡು ಅರಣ್ಯದಲ್ಲಿ ಬಿದಿರು ಗಿಡಗಳನ್ನು ನೆಡಲಾಯಿತು. ಈ ಬಿದಿರು ಗಿಡಗಳನ್ನು ಬಿದಿರು ಬೀಜ ತಂದು ಬಿತ್ತನೆ ಮಾಡಿ ಅರಣ್ಯ ಸಸ್ಯ ಕ್ಷೇತ್ರದಲ್ಲಿ ಬೆಳೆಸಲಾಗಿತ್ತು.

ಇದರ ಜೊತೆಯಲ್ಲಿ ಕಾಡುಮರದ ವಿವಿಧ ತಳಿಯ ಬೀಜದ ಉಂಡೆಗಳನ್ನು ಈ ವ್ಯಾಪ್ತಿಯ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು.

ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶಮಾ, ಕುಶಾಲನಗರ ವಲಯಾಧಿಕಾರಿ ಅನನ್ಯಕುಮಾರ್, ಶನಿವಾರಸಂತೆ ವಲಯ ಅರಣ್ಯ ಅಧಿಕಾರಿ ಕೋಟ್ಟೇಶ್, ಎಲ್ಲಾ ವಲಯ ಅರಣ್ಯಾಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಅರಣ್ಯ ಇಲಾಖೆಯ ವೀಕ್ಷಕರು, ರಕ್ಷಕರು ಹಾಗೂ ದಿನಕೂಲಿ ನೌಕರರು ಭಾಗವಹಿಸಿದ್ದರು.