ಮಡಿಕೇರಿ, ಜೂ. 24: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಕೊಡಗು ಜಿಲ್ಲೆಯಾದ್ಯಂತ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಗರಸಭೆಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಹೋಂಸ್ಟೇಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಲಿ ಯಾವುದೇ ಸೂಕ್ತ ಭದ್ರತೆ ಇರುವುದಿಲ್ಲ; ಈಗಿನ ಪರಿಸ್ಥಿತಿಯಲ್ಲಿ ಕೆಲ ಹೋಂಸ್ಟೇಗಳಲ್ಲಿ ಸ್ಯಾನಿಟೈಸರ್ ಆಗಲಿ ಮಾಸ್ಕ್ ಸುರಕ್ಷತೆ ಆಗಲಿ ಇರುವುದಿಲ್ಲ.
ಮಡಿಕೇರಿ ನಗರಕ್ಕೆ ಆಗಮಿಸುವ ಕೆಲವು ಪ್ರವಾಸಿಗರನ್ನು ಹೋಂಸ್ಟೇ ದಲ್ಲಾಳಿಗಳು ಒತ್ತಾಯಪೂರ್ವಕವಾಗಿ ತಮ್ಮ ಹೋಂಸ್ಟೇಗಳಿಗೆ ಕರೆದುಕೊಳ್ಳುತ್ತಿರುವ ಬಗ್ಗೆ ಹಾಗೂ ಹೋಂಸ್ಟೇಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಅನಧಿಕೃತ ಹೋಂಸ್ಟೇಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ, ಸಂಘಟನಾ ಕಾರ್ಯದರ್ಶಿ ನಾಗೇಶ್, ಲಿಲ್ಲಿ, ನವೀನಕುಮಾರಿ ಹಾಜರಿದ್ದರು.