ಭಾಗಮಂಡಲ, ಜೂ. 23: ವರ್ಷದ ಹಿಂದೆ ಮೃತಪಟ್ಟಿದ್ದ ಕುಟುಂಬದ ಹಿರಿಯ ವ್ಯಕ್ತಿಯ ಹೆಸರಿನಲ್ಲಿ ವಾರ್ಷಿಕ ಪೂಜೆ ಸಲ್ಲಿಸಲು ಕಾವೇರಿ ಕ್ಷೇತ್ರ ಭಾಗಮಂಡಲಕ್ಕೆ ಆಗಮಿಸಿದ್ದ ಕುಟುಂಬವೊಂದರ ಮೂವರು ತ್ರಿವೇಣಿ ಸಂಗಮದಲ್ಲಿ ಮುಳುಗಿ, ಆ ಪೈಕಿ ಓರ್ವ ಸಾವನ್ನಪ್ಪಿ ಇನ್ನಿಬ್ಬರು ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ಸಂಭವಿಸಿದೆ.ಹುಣಸೂರಿನ ಸುಬ್ರಮಣಿ ಎಂಬವರ ತಂದೆ ಚಂದ್ರ ಎಂಬವರು ಒಂದು ವರ್ಷದ ಹಿಂದೆ ನಿಧನರಾಗಿದ್ದು, ಅವರಿಗಾಗಿ ವಾರ್ಷಿಕ ಪೂಜೆ ಸಲ್ಲಿಸುವ ನಿಟ್ಟಿನಲ್ಲಿ ಇಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಹುಣಸೂರಿನಿಂದ ಸುಬ್ರಮಣಿ, ಅವರ ಸಹೋದರ ಮಣಿಕಂಠ, ತಾಯಿ ಯಶೋಧ, ಸಹೋದರಿ ಪ್ರಮಿಳಾ, ಅವರ ಪತ್ನಿ ಕಣ್ಣನ್, ಸುಬ್ರಮಣಿ ಅವರ ಪತ್ನಿ ಆಶಾರಾಣಿ, ಪುತ್ರಿ ದೀಕ್ಷಾ ಸೇರಿದಂತೆ ಕುಟುಂಬದವರು ಹೊರಟು 7 ಗಂಟೆ ಸುಮಾರಿಗೆ ಭಾಗಮಂಡಲಕ್ಕೆ ತಲುಪಿದ್ದಾರೆ.ನಂತರ ಕುಟುಂಬಸ್ಥರೆಲ್ಲರೂ ಪೂಜೆಗೆ ಮುನ್ನ ಸ್ನಾನಕ್ಕೆಂದು ಸಂಗಮಕ್ಕೆ ಇಳಿದಿದ್ದು, ಸ್ನಾನ ಮುಗಿಸಿ ದಡ ಸೇರುವ ವೇಳೆ ಮಣಿಕಂಠ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಅವರ ನೆರವಿಗೆ ಮುಂದಾದ ಯಶೋಧ

(ಮೊದಲ ಪುಟದಿಂದ) ಹಾಗೂ ಪ್ರಮೀಳಾ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಸುಬ್ರಮಣಿ ಅವರೂ ಕೂಡ ನೀರಿಗೆ ಬಿದ್ದವರನ್ನು ರಕ್ಷಿಸುವ ಸಲುವಾಗಿ ಕೈ ಹಿಡಿದಿದ್ದು, ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ.

ಮಣಿಕಂಠ ಹಾಗೂ ಪ್ರಮಿಳಾ ಅವರ ಪತಿ ಕಣ್ಣನ್ ಪ್ರಮಿಳಾರನ್ನು ರಕ್ಷಿಸಿ ಯಶೋಧ ಅವರ ರಕ್ಷಣೆಗೆ ಮುಂದಾಗುತ್ತಾರೆ. ಘಟನೆಯನ್ನು ವೀಕ್ಷಿಸುತ್ತಿದ್ದ ಸುಬ್ರಮಣಿ ಅವರ ಪತ್ನಿ ಆಶಾರಾಣಿ ಹಾಗೂ ಪುತ್ರಿ ದೀಕ್ಷಾ ಅವರ ಕಿರುಚಾಟ ಕೇಳಿದ ಸ್ಥಳೀಯರು ಹಾಗೂ ದೇವಾಲಯ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿದ್ದ ಯಶೋಧರನ್ನು ರಕ್ಷಿಸಲು ಮುಂದಾಗುತ್ತಾರೆ.

ತ್ರಿವೇಣಿ ಸಂಗಮದ ಬಳಿ ಬಂದ ಸ್ಥಳೀಯರಾದ ಮೊಣ್ಣಪ್ಪ, ಪ್ರಕಾಶ, ನಿಡುಬೆ ರವಿ ಮತ್ತಿತರರು ಯಶೋಧರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುತ್ತಾರೆ. ನಂತರ ಸ್ಥಳೀಯರಾದ ಶ್ರೀನಾಥ್, ಕುಟ್ಟ, ಮೊಣ್ಣಪ್ಪ, ಪ್ರಕಾಶ್ ಹಾಗೂ ಪೊಲೀಸರು ಸುಬ್ರಮಣಿ ಯವರನ್ನು ರಕ್ಷಿಸಿ ಭಾಗಮಂಡಲ ಆಸ್ಪತ್ರೆಗೆ ಕರೆತಂದರಾದರೂ ಅಷ್ಟರಲ್ಲಾಗಲೇ ಸುಬ್ರಮಣಿ (29) ಪ್ರಾಣಪಕ್ಷಿ ಹಾರಿ ಹೋಗಿತ್ತು. ಪ್ರಮಿಳಾ (34) ಹಾಗೂ ಯಶೋಧ ಅವರಿಗೆ ಇಲ್ಲಿನ ಆಸ್ಪತ್ರೆಯ ವೈದ್ಯೆ ಡಾ. ಪೊನ್ನಮ್ಮ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸ ಲಾಗಿದ್ದು, ಯಶೋಧ (65) ಅವರ ಸ್ಥಿತಿ ಗಂಭೀರವಾಗಿದೆ. ಮೃತ ಸುಬ್ರಮಣಿ ಮತ್ತು ಮಣಿಕಂಠ ಹುಣಸೂರಿನಲ್ಲಿ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದರು.

ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡುವ ಸ್ಥಳದ ಅಭಿವೃದ್ಧಿ ಕಾರ್ಯ ನಡೆದಿದ್ದು, ಸುತ್ತಮುತ್ತಲಿನ ಮರಳು ಹಾಗೂ ಹೂಳನ್ನು ತೆಗೆದು ಹೊಳೆಯ ನಡುವೆ ರಾಶಿ ಹಾಕಲಾಗಿದೆ. ಇದರಿಂದ ಹೊಳೆಯ ಎರಡು ಬದಿ 8 ರಿಂದ 10 ಅಡಿಯಷ್ಟು ಆಳವಾಗಿದ್ದು, ಹೊಳೆಯ ಕೆಳಭಾಗದಲ್ಲಿ ಬೇಸಿಗೆ ಸಂದರ್ಭ ನೀರು ಶೇಖರಣೆಗಾಗಿ ಎರಡು ಗೇಟನ್ನು ಅಳವಡಿಸಲಾಗಿದ್ದು, ನೀರು ಶೇಖರಣೆಯಾಗುತ್ತಿದೆ.

ಈ ಗೇಟ್‍ನಿಂದ ತೊಂದರೆಯಾಗುವ ಸಂಭವವಿದ್ದು, ಅದನ್ನು ತೆರೆಯುವಂತೆ ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದರೂ, ನಿರ್ಲಕ್ಷ್ಯ ತೋರಲಾಗಿದೆ. ಇದರಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯನಿರ್ವಹಣಾಧಿಕಾರಿ ಹೇಳಿಕೆ

ಘಟನೆಗೆ ಸಂಬಂಧಿಸಿದಂತೆ ತಲಕಾವೇರಿ-ಭಾಗಮಂಡಲ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಪತ್ರಿಕಾ ಹೇಳಿಕೆ ನೀಡಿದ್ದು, ಹುಣಸೂರು ಮೂಲದ ಕುಟುಂಬವು ಭಾಗಮಂಡಲಕ್ಕೆ ತಾ. 23 ರಂದು ಆಗಮಿಸಿ ಪೂಜೆಗೆಂದು ದೇವಸ್ಥಾನಕ್ಕೆ ಹೋಗುವ ಮುಂಚಿತವಾಗಿ ಅವರ ಸಂಪ್ರದಾಯದಂತೆ ನೀರಿನಲ್ಲಿ ಮುಳುಗಿದ್ದು ದೇವಸ್ಥಾನಕ್ಕೆ ಹೋಗುವ ನಿಟ್ಟಿನಲ್ಲಿ ನದಿಗೆ ಇಳಿದಿದ್ದಾರೆ. ಈ ಬಗ್ಗೆ ದೇವಸ್ಥಾನದ ಸಂಪ್ರದಾಯ ಇರುವುದಿಲ್ಲ.

ಆ ಕುಟುಂಬದ ಸದಸ್ಯರು ಪಿಂಡ ಪ್ರದಾನ / ಕೇಶ ಮುಂಡನಕ್ಕಾಗಿ ಭಾಗಮಂಡಲಕ್ಕೆ ಆಗಮಿಸಿರುವುದಿಲ್ಲ. ಇವರ ಮನೆಯ ಓರ್ವ ಸದಸ್ಯ ಕಳೆದ ವರ್ಷ ಮೃತಪಟ್ಟಿದ್ದು, ಈ ಸಂಬಂಧ ವರ್ಷದ ಪೂಜೆಗೆಂದು ಭಾಗಮಂಡಲಕ್ಕೆ ಆಗಮಿಸಿ, ನದಿಗೆ ಇಳಿದ ವೇಳೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅವರ ಕುಟುಂಬದ ಸದಸ್ಯರು ಕಾಪಾಡಲು ನೀರಿಗೆ ಇಳಿದಿರುತ್ತಾರೆ. ನದಿಗೆ ಇಳಿದು ನೀರಿನಲ್ಲಿ ಮುಳುಗುತ್ತಿದ್ದ ಒಟ್ಟು ಮೂರು ಮಂದಿಯನ್ನು ದೇವಸ್ಥಾನ ಕಾವಲು ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ರಕ್ಷಿಸಲು ಪ್ರಯತ್ನಿಸಿದರೂ ಸಹ ನೀರಿನಲ್ಲಿ ಮುಳುಗಿದ್ದ ಸುಬ್ರಮಣಿ ಎಂಬವರು ಅಷ್ಟರಲ್ಲೇ ಮೃತರಾಗಿರುವುದು ಕಂಡುಬಂದಿರುತ್ತದೆ. ರಕ್ಷಿಸಲ್ಪಟ್ಟ ಇಬ್ಬರು ಸದಸ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ. ಈ ಸಂಬಂಧ ಭಾಗಮಂಡಲ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

-ಕುಯ್ಯಮುಡಿ ಸುನಿಲ್