ಮಡಿಕೇರಿ, ಜೂ. 23: ಭಾರತೀಯ ಕಾಫಿ ಮಂಡಳಿಯ ನೂತನ ಕಾರ್ಯದರ್ಶಿಯಾಗಿ ಕೊಡಗು ಜಿಲ್ಲೆಯವರಾದ ಐ.ಆರ್.ಎಸ್. ಶ್ರೇಣಿಯ ಅಧಿಕಾರಿಯಾಗಿರುವ ಆಟ್ರಂಗಡ ನವೀನ್ ಕುಶಾಲಪ್ಪ ಅವರು ಹೆಚ್ಚುವರಿಯಾಗಿ ನಿಯುಕ್ತಿಗೊಂಡಿದ್ದಾರೆ. 2007ರ ಬ್ಯಾಚ್‍ನ ಐ.ಆರ್.ಎಸ್. ಅಧಿಕಾರಿಯಾಗಿರುವ ಇವರು ಪ್ರಸ್ತುತ ಜಾಯಿಂಟ್‍ಡೆವಲಪ್‍ಮೆಂಟ್ ಕಮೀಷನರ್ (ಎಆಅ) ಕೊಚ್ಚಿನ್ ಸ್ಪೆಷಲ್ ಇಕನಾಮಿಕ್‍ಜೋನ್ (ಅSಇZ) ಆಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಜವಾಬ್ದಾರಿಯುತ ಸ್ಥಾನ ವಾಣಿಜ್ಯ ಇಲಾಖೆಯ ಅಧೀನದಲ್ಲಿ ಬರುತ್ತದೆ. ಇದೀಗ ಇವರಿಗೆ ಈ ಜವಾಬ್ದಾರಿಯೊಂದಿಗೆ ಹೆಚ್ಚುವರಿಯಾಗಿ ಮುಂದಿನ ಆರು ತಿಂಗಳವರೆಗೆ ಭಾರತೀಯ ಕಾಫಿ ಮಂಡಳಿಯ ಕಾರ್ಯದರ್ಶಿ ಹುದ್ದೆಯನ್ನು ಜುಲೈ 1 ರಿಂದ ಜಾರಿಗೆ ಬರುವಂತೆ ನೀಡಲಾಗಿದೆ. ಈ ಬಗ್ಗೆ ಭಾರತ ಸರಕಾರದ ಅಧೀನ ಕಾರ್ಯದರ್ಶಿ ಮಹೇಂದರ್ ಚೌದರಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.2007ರ ತಂಡದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಐ.ಆರ್.ಎಸ್. ಅಧಿಕಾರಿಯಾಗಿ ನೇಮಕಗೊಂಡಿರುವ ನವೀನ್ ಕುಶಾಲಪ್ಪ ಅವರು ಮೂಲತಃ ಕಂಡಂಗಾಲ ಸನಿಹದ ರುದ್ರಗುಪ್ಪೆಯವರಾಗಿದ್ದಾರೆ. ಇವರು ಆಟ್ರಂಗಡ ಸೋಮಯ್ಯ ಹಾಗೂ ಕಾಮುಣಿ (ತಾಮನೆ - ಬಲ್ಯಮೀದೇರಿರ) ದಂಪತಿಯ ಪುತ್ರ. ಜಿಲ್ಲೆಯ ವ್ಯಕ್ತಿಯೊಬ್ಬರು ಕಾಫಿ ಮಂಡಳಿಯ ಕಾರ್ಯದರ್ಶಿ ಸ್ಥಾನ ಅಲಂಕರಿಸುತ್ತಿರುವದು ಇದೇ ಪ್ರಥಮ.