ಮಡಿಕೇರಿ, ಜೂ. 21: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಿ ಗ್ರಾಹಕರು ಮತ್ತು ಸ್ಥಳೀಯ ವರ್ತಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂಬ ಭರವಸೆಯೊಂದಿಗೆ ನಗರಸಭೆಯಿಂದ ಕೈಗೊಂಡಿದ್ದ ಯೋಜನೆಯೊಂದು ಇಂದು ಸಾರ್ವಜನಿಕರಿಗೆ ಉಪಯೋಗವಾಗದೆ ವ್ಯರ್ಥಗೊಂಡಂತಾಗಿದೆ.ಇಲ್ಲಿನ ಮಹದೇವಪೇಟೆಯಲ್ಲಿ 2010ರಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಕೈಗೊಂಡ ಮಾರುಕಟ್ಟೆ ಸಂಕೀರ್ಣ ಕೆಲಸ, ಬಳಿಕ ಹೆಚ್ಚುವರಿ ರೂ. 1.40 ಕೋಟಿಯೊಂದಿಗೆ 2018ರಲ್ಲಿ ಅಪೂರ್ಣ ಸ್ಥಿತಿಯಲ್ಲಿ ಉದ್ಘಾಟನೆ ಗೊಂಡಿತು. ಆ ಬಳಿಕ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಕನಿಷ್ಟ (ಮೊದಲ ಪುಟದಿಂದ) ಸೌಕರ್ಯವೂ ಇಲ್ಲದೆ ‘ಹೈಟೆಕ್’ ಯೋಜನೆ ‘ಹೇಸಿಗೆ’ ಮೂಡಿಸುವಂತಾಗಿದೆ.
ಪ್ರಸ್ತುತ ಮಳೆಯಿಂದ ಮಾರುಕಟ್ಟೆ ಪ್ರದೇಶ ಸಂತೆ ದಿನ ಓಡಾಟಕ್ಕೂ ಸಾಧ್ಯವಿಲ್ಲದೆ ಕೆಸರು ಗುಂಡಿಗಳ ನಡುವೆ ತೆರಳುವಂತಾಗಿದೆ. ಇಡೀ ಆವರಣ ಮಳೆಯ ನೀರಿನಿಂದ ಬೀದಿ ದನಗಳು, ನಾಯಿಗಳ ತಾಣವಾಗಿ ಸಂಪೂರ್ಣ ಮಲಿನಗೊಂಡಿದೆ. ನಗರಸಭೆ ಕೂಡ ಇತ್ತ ಕಣ್ಣೆತ್ತಿಯೂ ನೋಡದೆ, ಶುಕ್ರವಾರದ ಸಂತೆ ದಿನ ಜನರು ಮೂಗು ಮುರಿಯುತ್ತಾ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕತೊಡಗಿದ್ದಾರೆ.