ವರದಿ-ಚಂದ್ರಮೋಹನ್ ಕುಶಾಲನಗರ, ಜೂ. 21: ಕಳೆದ 6 ತಿಂಗಳ ಕಾಲ ತಮ್ಮನ್ನು ಕೊರೊನಾ ಕರಾಳ ಬಾಹುಗಳಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಕೊಡಗು-ಮೈಸೂರು ಜಿಲ್ಲೆಯ ಗಡಿಭಾಗದ ಟಿಬೇಟಿಯನ್ ನಿರಾಶ್ರಿತ ಕೇಂದ್ರಕ್ಕೆ ಇದೀಗ ದೆಹಲಿಯಿಂದ ಬಂದ ವ್ಯಕ್ತಿಯೊಬ್ಬನ ಮೂಲಕ ಶಿಬಿರಕ್ಕೆ ಕೊರೊನಾ ವಕ್ಕರಿಸಿದೆ. ದೇಶ ವಿದೇಶದ ಎಲ್ಲೆಡೆ ಕೊರೊನಾ ವೈರಸ್ ಜನರನ್ನು ಆತಂಕಕ್ಕೆ ದೂಡಿದ್ದರೆ ಇತ್ತ ನೂರಾರು ದೇಶಗಳ ಸಂಪರ್ಕ ಹೊಂದಿದ್ದ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತ ಕೇಂದ್ರ ತನ್ನ ನಾಗರಿಕರನ್ನು ವೈರಸ್‍ನಿಂದ ರಕ್ಷಿಸುವಲ್ಲಿ ಬಹುತೇಕ ಯಶಸ್ವಿಯಾಗಿತ್ತು. ಆದರೆ ಕಳೆದ 4 ದಿನಗಳ ಹಿಂದೆ ದೆಹಲಿಯಿಂದ ಆಗಮಿಸಿದ ಹುಣಸೂರು ಮೂಲದ ಟಿಬೇಟಿಯನ್ ಯುವಕನೊಬ್ಬನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದು ತಲೆನೋವಾಗಿದೆ.ಚೀನಾದಲ್ಲಿ ಕೊರೊನಾ ರೋಗ ಪ್ರಾರಂಭವಾಗುತ್ತಲೆ ಇತ್ತ ಬೈಲುಕೊಪ್ಪ ಟಿಬೇಟಿಯನ್ ಶಿಬಿರದಲ್ಲಿ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಜನವರಿ 15 ರಿಂದಲೇ ಬೈಲುಕೊಪ್ಪೆ ಶಿಬಿರಕ್ಕೆ ಒಳಬರುವ ವಿದೇಶಿ ನಾಗರಿಕರಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಅಲ್ಲದೆ ಮೈಸೂರು ಜಿಲ್ಲಾಡಳಿತ ಸ್ಥಳೀಯ ಆರೋಗ್ಯ ಇಲಾಖೆ ಮೂಲಕ ಪ್ರತಿ ಮನೆಮನೆಗೆ ಕೋವಿಡ್-19 ಬಗ್ಗೆ ಅರಿವು ಜಾಗೃತಿ ಮೂಡಿಸುವ ಮೂಲಕ ಹೆಮ್ಮಾರಿ ವೈರಸ್ ಸೋಂಕದಂತೆ ಎಚ್ಚರವಹಿಸಿತ್ತು. ಶಿಬಿರದ
(ಮೊದಲ ಪುಟದಿಂದ) ಬೌದ್ಧ ಭಿಕ್ಷುಗಳ ಕೇಂದ್ರದಲ್ಲಂತೂ ಪ್ರತ್ಯೇಕ ತಪಾಸಣಾ ಕೇಂದ್ರವೊಂದನ್ನು ನಿರ್ಮಿಸುವ ಮೂಲಕ ದಿನದ 24 ಗಂಟೆಗಳ ಕಾಲ ಒಳಬರುವ ಬೌದ್ಧ ಭಿಕ್ಷುಗಳ ತಪಾಸಣೆ ಕಟ್ಟುನಿಟ್ಟಾಗಿ ಮಾಡಲಾಗುತ್ತಿತ್ತು.
ಈ ಮೂಲಕ ದೇಶದ ಯಾವುದೇ ಮೂಲೆಯಲ್ಲಿರುವ ಟಿಬೇಟಿಯನ್ನರಿಗೆ ಕೊರೊನಾ ವೈರಸ್ ಸೋಂಕು ಬಾರದಂತೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಯೇ ಇರುವುದರೊಂದಿಗೆ ಪ್ರಾರ್ಥನೆ ಮುಂತಾದ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದರು. ಕೇಂದ್ರ, ರಾಜ್ಯದ ಹಾಗೂ ಟಿಬೇಟಿಯನ್ ಆಂತರಿಕ ಸರಕಾರದ ನೀತಿ ನಿಯಮಗಳನ್ನು ಕೂಡ ಚಾಚೂ ತಪ್ಪದೆ ಪಾಲಿಸುವಲ್ಲಿ ಕೂಡ ಯಶಸ್ವಿಯಾಗಿದ್ದರು. ಶಿಬಿರದಲ್ಲಿ ನಡೆಯುತ್ತಿದ್ದ ಬೌದ್ಧ ಕೇಂದ್ರಗಳ ಸಾಮೂಹಿಕ ಪೂಜಾ ಪ್ರಾರ್ಥನಾ ಕಾರ್ಯಗಳು ಕೂಡ ಕಳೆದ ಮಾರ್ಚ್ 15 ರಿಂದ ಸಂಪೂರ್ಣ ಸ್ಥಗಿತಗೊಳ್ಳುವುದರೊಂದಿಗೆ ಬೌದ್ಧ ಭಿಕ್ಷುಗಳು ಮನೆಯಲ್ಲಿಯೇ ನಿತ್ಯ ಪ್ರಾರ್ಥನೆ, ಪೂಜಾ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ತಮ್ಮ ಶಿಬಿರದ ಬೌದ್ಧ ಭಿಕ್ಷುಗಳಿಗೆ ಮನೆಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸ ಬೌದ್ಧ ವಿಶ್ವವಿದ್ಯಾಲಯದ ಮೂಲಕ ನಡೆಯುತ್ತಿದೆ ಎಂದು ಸೆರಾಮೆ ಬೌದ್ಧ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ತಶಿ ಸೆರಿಂಗ್ ರಿಂಪೋಚೆ ತಿಳಿಸಿದ್ದಾರೆ. ಶಿಬಿರಕ್ಕೆ ಒಳಬರುವ ಹೊರ ರಾಜ್ಯದ ಟಿಬೆಟ್ ಜನರನ್ನು ಕ್ವಾರಂಟೈನ್‍ಗೆ ಒಳಪಡಿಸಿದ ನಂತರವಷ್ಟೆ ದೈನಂದಿನ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.
ನಿರಂತರ 5 ತಿಂಗಳ ಕಾಲ ತಮ್ಮನ್ನು ಕೊರೊನಾ ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ಬೈಲುಕೊಪ್ಪೆ ಟಿಬೇಟಿಯನ್ ಶಿಬಿರಕ್ಕೆ ದೆಹಲಿಯಿಂದ ಬಂದ ಯುವಕನೊಬ್ಬನಿಗೆ ಸೋಂಕು ತಗುಲಿದ ವಿಷಯ ತಿಳಿಯುತ್ತಿದ್ದಂತೆ ಇಡೀ ಶಿಬಿರ ಆತಂಕಕ್ಕೆ ಒಳಗಾಗಿದೆ. ಇದರೊಂದಿಗೆ ಶಿಬಿರದ ಹಲವರು ಈಗಾಗಲೇ ಕ್ವಾರಂಟೈನ್‍ನಲ್ಲಿ ಇದ್ದರೂ ಕೊರೊನಾ ಪರೀಕ್ಷಾ ವರದಿ ಮಾತ್ರ ನೆಗೆಟಿವ್ ಬರುತ್ತಿತ್ತು. ಈ ಬಾರಿ ಯಾವುದೇ ಮಾಹಿತಿ ಇಲ್ಲದೆ ದೆಹಲಿಯಿಂದ ಬಂದ ನಾಲ್ವರಲ್ಲಿ ಓರ್ವನಿಗೆ ಸೋಂಕು ತಗುಲುವುದರೊಂದಿಗೆ ಆತನನ್ನು ಮೈಸೂರು ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದಂತೆ ಟಿಬೇಟಿಯನ್ ಶಿಬಿರದ ಸೆಟಲ್‍ಮೆಂಟ್ ಅಧಿಕಾರಿ ಸೇರಿದಂತೆ 14 ಮಂದಿಯನ್ನು ಈ ಯುವಕನ ಸಂಪರ್ಕ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
ಟಿಬೇಟಿಯನ್ ನಾಗರಿಕರು ಮತ್ತು ಬೌದ್ಧ ಭಿಕ್ಷುಗಳು ತಮ್ಮ ದೈನಂದಿನ ವ್ಯಾಪಾರ ವಹಿವಾಟಿಗಾಗಿ ಕುಶಾಲನಗರವನ್ನು ಆಶ್ರಯಿಸ ಬೇಕಾಗಿದ್ದು ಕಳೆದ 4 ತಿಂಗಳ ಕಾಲ ಯಾವುದೇ ನಾಗರಿಕರು ಕುಶಾಲನಗರದತ್ತ ಮುಖ ಮಾಡಿರಲಿಲ್ಲ. ಇದೀಗ ಲಾಕ್‍ಡೌನ್ ಸಡಿಲಗೊಂಡ ಬೆನ್ನಲ್ಲಿ ಬೆರಳೆಣಿಕೆಯ ಟಿಬೇಟಿಯನ್ನರು ಮಾತ್ರ ಕುಶಾಲನಗರಕ್ಕೆ ಬಂದು ಹೋಗುತ್ತಿದ್ದು ಕಂಡುಬಂದಿದೆ. ಟಿಬೇಟಿಯನ್ ಶಿಬಿರದ ಲಾಮಾಕ್ಯಾಂಪ್ ಒತ್ತಿನಲ್ಲಿರುವ ಹಲವು ಗ್ರಾಮಸ್ಥರು ಶಿಬಿರದ ಮಾರ್ಗವನ್ನೇ ಅವಲಂಬಿಸಿ ಓಡಾಡಬೇಕಾಗಿದ್ದು ಇದೀಗ ಈ ಭಾಗದ ಜನರಿಗೆ ಈ ಪ್ರಕರಣ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ನೂರಾರು ಕೂಲಿ ಕಾರ್ಮಿಕರು ಶಿಬಿರದ ಮಾರ್ಗದ ಮೂಲಕ ಬೆಳಗ್ಗೆ ಸಂಜೆ ಓಡಾಡಬೇಕಾಗಿದ್ದು ಈ ಮಾರ್ಗವನ್ನು ಸೀಲ್‍ಡೌನ್ ಮಾಡಲು ಅಸಾಧ್ಯ ಎಂದು ಸ್ಥಳೀಯ ಅಧಿಕಾರಿಗಳು ಶಕ್ತಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಬೈಲುಕೊಪ್ಪೆಯ ಟಿಬೇಟಿಯನ್ ಕೇಂದ್ರದ ವ್ಯಾಪ್ತಿಯಲ್ಲಿ ಹಲವಾರು ಶಿಬಿರಗಳು ಅಸ್ತಿತ್ವದಲ್ಲಿದ್ದು ಅಂದಾಜು 20 ಸಾವಿರಕ್ಕೂ ಅಧಿಕ ನಿರಾಶ್ರಿತರು ಇಲ್ಲಿ ನೆಲೆ ಕಂಡಿದ್ದಾರೆ. ಜೊತೆಗೆ ಶಿಬಿರದ ನೆರೆಯಲ್ಲಿ ಕೊಪ್ಪ, ದೊಡ್ಡಹೊಸೂರು, ಚಿಕ್ಕಹೊಸೂರು, ದೊಡ್ಡಹರವೆ, ಬೈಲುಕೊಪ್ಪೆ ಮುಂತಾದ ಗ್ರಾಮಗಳಿದ್ದು ಈ ವ್ಯಾಪ್ತಿಯಲ್ಲಿ ಅಂದಾಜು 50 ರಿಂದ 60 ಸಾವಿರ ನಾಗರಿಕರು ನೆಲೆಸಿದ್ದಾರೆ. ಮೈಸೂರು ಗಡಿಭಾಗದ ಬೈಲುಕೊಪ್ಪೆಯಲ್ಲಿ ಕಂಡುಬಂದ ವೈರಸ್ ಸೋಂಕಿತ ಪ್ರಕರಣದ ಬೆನ್ನಲ್ಲೇ ಈ ಭಾಗದ ಜನತೆ ಬಹುತೇಕ ಆತಂಕದ ನಡುವೆ ದಿನದೂಡುವಂತಾಗಿದೆ.