ಸೋಮವಾರಪೇಟೆ, ಜೂ. 22: ತಾಲೂಕಿನ ಶನಿವಾರಸಂತೆಯಲ್ಲಿ ನೂತನವಾಗಿ ನಿರ್ಮಿಸಿರುವ ಪತ್ರಿಕಾಭವನವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸ ಬೇಕು. ಸಮಾಜದ ಆಗುಹೋಗು ಗಳನ್ನು ತಿಳಿಸುವದರೊಂದಿಗೆ, ಸ್ವಸ್ಥ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಾಧ್ಯಮ ಗಳು ಸಮಾಜದ ದಿಕ್ಸೂಚಿಯಾಗಿವೆ ಎಂದರು.

ವಿಶ್ವದೊಂದಿಗೆ ದೇಶವನ್ನೂ ಸಹ ಕಾಡುತ್ತಿರುವ ಕೊರೊನಾ ವೈರಸ್‍ನಿಂದಾಗಿ ಸಾಮಾಜಿಕ ಬದುಕು ಅಸ್ತವ್ಯಸ್ಥಗೊಳ್ಳುತ್ತಿದೆ. ಸರ್ಕಾರದ ವತಿಯಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಕೊರತೆ ಕಂಡುಬರುತ್ತಿದೆ ಎಂದ ಸುನಿಲ್ ಸುಬ್ರಮಣಿ, ಸಾಮೂಹಿಕವಾಗಿ ಜಾಗೃತಿ ಹೊಂದುವ ಮೂಲಕ ಕೊರೊನಾ ವಿರುದ್ಧ ಪ್ರತಿಯೋರ್ವರೂ ಹೋರಾಡಬೇಕು ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿ ವೇದಿಕೆಯನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ರಾಜ್ಯ ಸಂಘದಿಂದ ಪತ್ರಕರ್ತರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸರ್ಕಾರದಿಂದಲೂ ಪತ್ರಕರ್ತರಿಗೆ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಸಮಾಜ ಪತ್ರಕರ್ತರ ಮೇಲೆ ಇಂದಿಗೂ ನಂಬಿಕೆಯಿಟ್ಟಿದ್ದು, ಅದನ್ನು ಉಳಿಸಿಕೊಳ್ಳುವ ಕಾರ್ಯ ಆಗಬೇಕು ಎಂದರು.

ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಚಂದ್ರಮೌಳಿ ಮಾತನಾಡಿ, ಬಹುತೇಕ ಮಾಧ್ಯಮಗಳು ಬಂಡವಾಳಶಾಹಿ, ರಾಜಕಾರಣಿಗಳ ಹಿಡಿತದಲ್ಲಿದ್ದು, ಯೆಲ್ಲೋ ಜರ್ನಲಿಸಂನಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿಲ್ಲ. ದೃಶ್ಯ ಮಾಧ್ಯಮಗಳು ಪೈಪೋಟಿಗೆ ಬಿದ್ದಿರುವ ಸನ್ನಿವೇಶಗಳು ಸಮಾಜಕ್ಕೆ ಪೂರಕವಲ್ಲ ಎಂದರಲ್ಲದೇ, ಅಮೇರಿಕಾದಲ್ಲಿ 125 ವರ್ಷಗಳ ಇತಿಹಾಸವಿರುವ ಟ್ರಿಬ್ಯೂನ್ ಪತ್ರಿಕೆ ಬಂದ್ ಆಗಿರುವದು ಬದಲಾಗುತ್ತಿರುವ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಎಂದರು.

ಕೊಡಗಿನಲ್ಲಿ ಇಂದಿಗೂ ಪತ್ರಿಕೆಗಳು ತನ್ನ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವ ಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪತ್ರಕರ್ತರ ಸಂಘದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ, ತಾವು ಕೊಡಗು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಈಗಾಗಲೇ ದತ್ತಿನಿಧಿ ಸ್ಥಾಪಿಸಿದ್ದು, ಪತ್ರಕರ್ತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎರಡೂ ತಾಲೂಕು ಸಂಘದಲ್ಲೂ ದತ್ತಿನಿಧಿ ಸ್ಥಾಪಿಸಲಾಗುವದು. ಶನಿವಾರಸಂತೆ ಸಂಘಕ್ಕೆ ಅಗತ್ಯ ಸಹಕಾರ ನೀಡಲಾಗುವದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶನಿವಾರಸಂತೆ ಹೋಬಳಿ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್, ಜಿಲ್ಲಾಧ್ಯಕ್ಷೆ ಸವಿತಾ ರೈ, ರಾಜ್ಯ ಸಮಿತಿ ನಿರ್ದೇಶಕ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸದಸ್ಯ ಪುಟ್ಟರಾಜು, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್, ಮಾಜೀ ಅಧ್ಯಕ್ಷ ಎಸ್.ಎನ್. ರಘು, ಸೋಮವಾರಪೇಟೆ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಶ್ರೀನಿವಾಸ್ ಚಂಗಪ್ಪ, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಅವರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಸುನಿಲ್ ಸುಬ್ರಮಣಿ, ಶಿವಾನಂದ ತಗಡೂರು, ಮಂಡಿಬೆಲೆ ರಾಜಣ್ಣ, ಚಂದ್ರಮೌಳಿ, ಪತ್ರಿಕಾಭವನ ನಿರ್ಮಾಣಕ್ಕೆ ಸಹಕರಿಸಿದ ಎಸ್.ಎನ್. ರಘು, ಗುತ್ತಿಗೆದಾರ ಅಬ್ದುಲ್ಲ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.