ಚೆಟ್ಟಳ್ಳಿ, ಜೂ. 22: ಕುಶಾಲನಗರ ಸಮೀಪದ ದುಬಾರೆಯಲ್ಲಿ ಕೊರೊನಾ ಲಾಕ್‍ಡೌನನ್ನು ಉಲ್ಲಂಘಿಸಿ ಪ್ರವಾಸಿಗರು ವಾಹನದಲ್ಲಿ ಆಗಮಿಸಿ ಮೋಜುಮಸ್ತಿಯಲ್ಲಿ ತೊಡಗಿಕೊಂಡಿರುವುದು ನಿತ್ಯವೂ ಕಂಡುಬರುತ್ತಿದೆ. ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಇತ್ತ ಗಮನ ಹರಿಸದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕಮೂಡಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಎಲ್ಲೆಡೆ ಕಂಡುಬಂದ ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ಸರಕಾರ ಲಾಕ್‍ಡೌನ್ ಮೂಲಕ ಕಡಿವಾಣ ಹಾಕಿದ್ದು, ಜಿಲ್ಲೆಯಲ್ಲಿಯೂ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಅದೇ ರೀತಿ ದುಬಾರೆ ಪ್ರವಾಸಿ ತಾಣಕ್ಕೆ ತೆರಳದಂತೆ ಬ್ಯಾರಿಕೇಡ್ ಹಾಕಿ ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಆದರೂ ಕೆಲವು ದಿನಗಳಿಂದೀಚೆಗೆ ಎಲ್ಲೆಡೆಯಿಂದ ಬರುವ ಪ್ರವಾಸಿಗರು ದುಬಾರೆಯಲ್ಲಿ ಓಡಾಡುತ್ತಿರುವುದು ಕಂಡುಬರುತ್ತಿದೆ. ಯಾರೊಬ್ಬರು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಆದರೆ ಸಂಬಂಧಪಟ್ಟ ನಂಜರಾಯಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಮಾತ್ರ ಇತ್ತ ಗಮನಹರಿಸಿದಂತೆ ಕಂಡು ಬರುತ್ತಿಲ್ಲ. -ಪುತ್ತರಿರ ಕರುಣ್ ಕಾಳಯ್ಯ