ನಾಪೆÇೀಕ್ಲು, ಜೂ. 22: ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಹಳೇ ತಾಲೂಕು ಪಟ್ಟಣದ ಬಳಿ ಸುಮಾರು 12 ವರ್ಷಗಳ ಹಿಂದೆ ಒಂದು ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ಶೇಖರಣ ಟ್ಯಾಂಕ್ ಅನ್ನು ಗ್ರಾಮ ಪಂಚಾಯಿತಿ ಈಗ ನೆಲಸಮ ಗೊಳಿಸಿರುವದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಹಳೇ ತಾಲೂಕು ಎಸ್‍ಡಿಪಿಐ ಅಧ್ಯಕ್ಷ ಸಾದಿಕ್ ಹಾಗೂ ಸ್ಥಳೀಯರಾದ ನಾಸಿರ್, ಖಬೀದ್, ಬಾಬು, ಅಯ್ಯಪ್ಪ ಮತ್ತಿತರರು ಸುಮಾರು 12 ವರ್ಷಗಳ ಹಿಂದೆಯೇ ಈ ಕಾಮಗಾರಿಗೆ ಒಂದು ಲಕ್ಷ ರೂ. ವೆಚ್ಚವಾಗಿದೆ. ಗ್ರಾಮ ಪಂಚಾಯಿತಿ ಇದರ ನಿರ್ವಹಣೆ ಯನ್ನು ಸರಿಯಾಗಿ ನಿರ್ವಹಿಸದ ಹಿನ್ನಲೆಯಲ್ಲಿ ಸರಿಯಾಗಿ ನೀರು ಕೂಡ ವಿತರಣೆಯಾಗುತ್ತಿರಲಿಲ್ಲ. ಕುಡಿಯುವ ನೀರಿಗೆ ಎಲ್ಲಲ್ಲಿಯೂ ಸಮಸ್ಯೆ ಉಂಟಾಗುತ್ತಿರುವ ಸಂದರ್ಭದಲ್ಲಿ ಅದನ್ನು ದುರಸ್ತಿಪಡಿಸುವದರ ಬದಲು ಜೆಸಿಬಿ ಯಂತ್ರದ ಮೂಲಕ ಅದನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಿದರು. ಆದುದರಿಂದ ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಈ ಸಂದರ್ಭ ಒತ್ತಾಯಿಸಿದ್ದಾರೆ.