ಶನಿವಾರಸಂತೆ ಸನಿಹದ ಶಿರಂಗಾಲ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಆ ಗ್ರಾಮವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಸೋಮವಾರಪೇಟೆ ತಾಲೂಕು ತಹಶೀಲ್ದಾರ್, ಜಿಲ್ಲಾ ವೈದ್ಯಾಧಿಕಾರಿ, ತಾಲೂಕು ಪಂಚಾಯತ್ ಅಧಿಕಾರಿ ಹಾಗೂ ಶನಿವಾರಸಂತೆ ಪೊಲೀಸ್ ಅಧಿಕಾರಿಗಳು ಒಟ್ಟಾಗಿ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಶಿರಂಗಾಲ ಗ್ರಾಮಕ್ಕೆ ತೆರಳಿ ಸಂಪೂರ್ಣ ಸೀಲ್ಡೌನ್ ಮಾಡಿದರು.ಈ ಸೋಂಕಿತ ಗ್ರಾಮದಲ್ಲಿರುವ 30 ಮನೆಗಳ ನಿವಾಸಿಗಳನ್ನು ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ಅವರಿಗೆ ನಿತ್ಯದ ಅಗತ್ಯಕ್ಕೆ ಬೇಕಾದ ದಿನಸಿ ಪದಾರ್ಥಗಳು ಹಾಗೂ ಆಹಾರ ಸಾಮಗ್ರಿಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕ ಹೊಂದಿದ್ದುದಕ್ಕಾಗಿ ಅವರ ಕುಟುಂಬದ ನಾಲ್ವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಏಕೆಂದರೆ, ಈ ವ್ಯಕ್ತಿಯು ನಿನ್ನೆ ದಿನ ತನ್ನ ಕುಟುಂಬದ ನಾಲ್ವರನ್ನು ಒಂದೇ ಕಾರಿನಲ್ಲಿ ಮಡಿಕೇರಿಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಈ ಹಿಂದೆ ಸೋಂಕಿತ ವ್ಯಕ್ತಿಗೆ ಶನಿವಾರಸಂತೆಯಲ್ಲಿ ಪ್ರಾರಂಭಿಕ ಚಿಕಿತ್ಸೆ ನೀಡಿದ್ದ ಖಾಸಗಿ ವೈದ್ಯರೊಬ್ಬರನ್ನು ಕೂಡ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಗದಗ್ ಜಿಲ್ಲೆಗೆ ತೆರಳಿ ಮರಳಿದ್ದ ಈ ಹಣ್ಣಿನ ವ್ಯಾಪಾರಿ ವ್ಯಕ್ತಿಗೆ ಕೊರೊನಾ ದೃಢಪಟ್ಟಿದ್ದರಿಂದ ಸೋಂಕಿತನ ಸಂಪರ್ಕದಲ್ಲಿದ್ದ ಎಲ್ಲರೂ ಕೂಡಲೇ ತಪಾಸಣೆಗೆ ಒಳಗಾಗಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್, ಶನಿವಾರಸಂತೆ ಗ್ರಾಮ ಪಂಚಾಯಿತಿ ಪಿಡಿಒ ಪಿ.ಜೆ.ಮೇದಪ್ಪ ಹಾಗೂ ಶನಿವಾರಸಂತೆ ಪೊಲೀಸ್ ಅಧಿಕಾರಿ ದೇವರಾಜ್ ಇವರುಗಳು ಕೋರಿದ್ದಾರೆ.
-ನರೇಶ್ ಚಂದ್ರ.