ಮಡಿಕೇರಿ, ಜೂ, 22: ಕೊಡಗು ಜಿಲ್ಲೆಯಲ್ಲಿ ದುಬೈನಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಇದ್ದುದು ನೆಗೆಟಿವ್ ಆದ ಬಳಿಕ ಕೊಡಗು ಕೊರೊನಾ ವೈರಾಣು ವಿಚಾರದಲ್ಲಿ ಹಸಿರು ವಲಯದ ಗರಿ ಹೊತ್ತಿತ್ತು. ಬಳಿಕ ಮತ್ತೆ ಮುಂಬೈನಿಂದ ಬಂದಿದ್ದ ಇಬ್ಬರಿಗೆ ಪಾಸಿಟಿವ್ ಪತ್ತೆಯಾದಾಗ ಪುನಃ ಜಿಲ್ಲೆಯಲ್ಲಿ ಪರಿಸ್ಥಿತಿ ಬದಲಾಯಿತು. ಇಂದು ಮುಂಬೈನ ಈ 2 ಪ್ರಕರಣಗಳು ನೆಗೆಟಿವ್ ಎಂದು ಖಚಿತವಾಗುತ್ತಿದ್ದಂತೆ ಮತ್ತೆ ಹೊಸದಾಗಿ 3 ಪ್ರಕರಣಗಳು ಪಾಸಿಟಿವ್ ಆಗಿ ಜಿಲ್ಲೆಯಲ್ಲಿ ತಲೆಯೆತ್ತಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಇಂದು ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿಯಿತ್ತರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರ್, ಡಾ. ಮಹೇಶ್ ಅವರು ಉಪಸ್ಥಿತರಿದ್ದರು.
ಶನಿವಾರಸಂತೆ ಸನಿಹದ ಶಿರಂಗಾಲ ನಿವಾಸಿ (45 ವರ್ಷ, ರೋಗಿ ಸಂಖ್ಯೆ 9215 (ರಾಜ್ಯ) ಜಿಲ್ಲೆಯ 5ನೇ) ಹಣ್ಣಿನ ವ್ಯಾಪಾರಿ ಯೊಬ್ಬರಿಗೆ ಕೊರೊನಾ ಸೋಂಕು ತಗಲಿದೆ. ಮೂಲತಃ ಕೊಡ್ಲಿಪೇಟೆ ಹೋಬಳಿ ಶನಿವಾರಸಂತೆ ಬಳಿಯ ಶಿರಂಗಾಲ ಗ್ರಾಮದವರಾದ ಇವರು, ಇತ್ತೀಚೆಗೆ ವ್ಯಾಪಾರ ಸಂಬಂಧ ಬೆಂಗಳೂರು ಮತ್ತು ಗದಗ್ ಜಿಲ್ಲೆಗಳಿಗೆ ತೆರಳಿದ್ದರು. ಅವರು ಕಳೆದ ತಾ. 18ರಂದು ಶಿರಂಗಾಲ ಗ್ರಾಮಕ್ಕೆ ವಾಪಸ್ಸಾದರು. ಅವರ ಆರೋಗ್ಯದಲ್ಲಿ ವ್ಯತ್ಯಾಸವುಂಟಾಗಿ ನಿನ್ನೆ ದಿನ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಪರೀಕ್ಷೆಗಾಗಿ ಬಂದರು. ಅವರ ಗಂಟಲ ದ್ರವ ಪರೀಕ್ಷೆ ಬಳಿಕ ಇಂದು ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಇನ್ನೊಂದೆಡೆ ಮೂಲತಃ ಅಯ್ಯಂಗೇರಿಯ ನಿವಾಸಿ (26 ವರ್ಷ, ರೋಗಿ ಸಂಖ್ಯೆ 9214 (ರಾಜ್ಯ) ಜಿಲ್ಲೆಯಲ್ಲಿ 4ನೇ) ಯುವಕನೊಬ್ಬ ತಾ. 19ರಂದು ಮುಂಬೈನಿಂದ ಜಿಲ್ಲೆಗೆ ಬಂದರು. ಅವರನ್ನು ಕೋವಿಡ್ ಆಸ್ಪತ್ರೆಗೆ ಕರೆತರಲಾಯಿತು. ಅವರ ಗಂಟಲ ದ್ರವ ಪರೀಕ್ಷಿಸಿದಾಗ, ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ವ್ಯಕ್ತಿಯು ಮುಂಬೈನಿಂದ ಮಂಗಳೂರುವರೆಗೆ ಬಸ್ಸಿನಲ್ಲಿ ಬಂದಿದ್ದು, ಮಂಗಳೂರಿನಿಂದಲೂ ಕೊಡಗಿಗೆ ಬಸ್ಸಿನಲ್ಲಿಯೇ ಬಂದಿಳಿ ದಿದ್ದರು. ಈ ಇಬ್ಬರ ಪ್ರಕರಣ ಗಳಲ್ಲಿಯೂ ಇದೀಗ ಇವರು ಸಂಪರ್ಕ ಹೊಂದಿದ ವ್ಯಕ್ತಿಗಳೆಲ್ಲರನ್ನೂ ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ಪ್ರಯತ್ನ ನಡೆಸಿದೆ.
ಶನಿವಾರಸಂತೆ ಶಿರಂಗಾಲದ ವ್ಯಕ್ತಿ ತಾನು ಬೆಂಗಳೂರಿನಿಂದ ಬಂದ ಬಳಿಕ ಸುಮಾರು 2 ದಿನ ತನ್ನ ಕುಟುಂಬದೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಬೆರೆತಿದ್ದರು. ಇವರು ಕಾರಿನಲ್ಲಿಯೇ ಬಂದಿದ್ದರೂ ಕೂಡ ತನ್ನ ಊರಿನಲ್ಲಿ ಬೆರೆತಿರುವ ಕಾರಣ, ಸುಮಾರು 30 ಕುಟುಂಬಗಳ 126 ಮಂದಿ ಇರುವ ಈ ಗ್ರಾಮವನ್ನು ಜಿಲ್ಲಾಡಳಿತವು ಸೀಲ್‍ಡೌನ್ ಮಾಡಿದೆ. ಕುಟುಂಬದವರನ್ನು ಗೃಹ ಸಂಪರ್ಕ ತಡೆಗೆ ಒಳಪಡಿಸಲಾಗಿದೆ. ಸೋಂಕಿತ ತೆರಳಿದ್ದ ಶನಿವಾರಸಂತೆಯ ಖಾಸಗಿ ಕ್ಲಿನಿಕ್‍ವೊಂದನ್ನು ಕೂಡ ಸೀಲ್‍ಡೌನ್ ಮಾಡಲಾಗಿದೆ.
ವ್ಯಾಪಾರಿಯಾಗಿರುವ ಈ ವ್ಯಕ್ತಿ ಇಂದು ಕೂಡ ಸೋಮವಾರಪೇಟೆ ಸಂತೆಗೆ ತೆರಳಿದ್ದು, ಅಲ್ಲಿಂದ ಕರೆಸಿ ಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೆಯಲ್ಲಿ
(ಮೊದಲ ಪುಟದಿಂದ) ಈ ವ್ಯಕ್ತಿಯನ್ನು ಭೇಟಿ ಮಾಡಿರುವವರ ಬಗ್ಗೆ ಮಾಹಿತಿ ಕಲೆ ಹಾಕುವುದು ಕಷ್ಟಕರವಾಗಿದೆ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದರು. ಅಲ್ಲದೆ, ಈತ ಹೊರ ರಾಜ್ಯ ಸಂಪರ್ಕ ಬೆಳೆಸದಿದ್ದರೂ, ಅಂತರಜಿಲ್ಲಾ ಪ್ರಯಾಣ ಮಾಡಿದ್ದು, ಈ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು. ಅದೇ ರೀತಿ ಅಯ್ಯಂಗೇರಿಯ ಯುವಕ ಮುಂಬೈ ವರೆಗೆ ಮಂಗಳೂರಿಗೆ ಬಂದಿದ್ದು, ಮಂಗಳೂರಿನಿಂದಲೂ ಬಸ್ಸಿನಲ್ಲಿ ಬಂದಿರುವುದರಿಂದ ಈ ಬಸ್ಸ್‍ಗಳಲ್ಲಿ ಪ್ರಯಾಣಿಸಿದವರ ಗುರುತನ್ನು ಪತ್ತೆ ಹಚ್ಚಲು ಆಡಳಿತವು ಇದೀಗ ಹರಸಾಹಸ ಮಾಡಬೇಕಾ ಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ದೊರೆತ ಕೂಡಲೇ ಸಂಪರ್ಕದಲ್ಲಿದ್ದವರ ಪತ್ತೆಗೆ ಪ್ರಯತ್ನ ನಡೆಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ಖಚಿತಪಡಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕಳೆದ ಹದಿನಾಲ್ಕು ದಿನಗಳ ಹಿಂದೆ ಮುಂಬೈ ನಿಂದ ಬಂದಿದ್ದ ಮಹಿಳೆಯೊಬ್ಬರನ್ನು ಆಲೂರು ಸಿದ್ದಾಪುರದ ಅವರ ಗೃಹದಲ್ಲಿ ಗೃಹ ಸಂಪರ್ಕ ತಡೆಗೆ ಒಳಪಡಿಸಲಾಗಿತ್ತು. ನಿನ್ನೆ ದಿನ ಅವರ ಗಂಟಲ ದ್ರವ ಪರೀಕ್ಷಿಸಿದಾಗ, ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಅವರನ್ನೂ ಕೂಡ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿರು ವುದಾಗಿ ತಿಳಿಸಿದರು. ಈ ಸಂಬಂಧ ಆಲೂರು ಸಿದ್ದಾಪುರದ ದೊಡ್ಡಳ್ಳಿ ಗ್ರಾಮದ 37 ಮನೆಗಳ 137 ಮಂದಿ ಯನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಹಿಂದೆಯೇ ಮಹಿಳೆಯನ್ನು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 14 ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ನೆಗೆಟಿವ್ ಬಂದ ಬಳಿಕ ದೊಡ್ಡಳ್ಳಿಗೆ ಹಿಂತಿರುಗಿದ್ದರು. ಇದೀಗ ಮತ್ತೆ ಪಾಸಿಟಿವ್ ಬಂದಿರುವುದರಿಂದ ಮಹಿಳೆ ಓಡಾಡಿದ ಸ್ಥಳ ಹಾಗೂ ಭೇಟಿ ಮಾಡಿದ ವ್ಯಕ್ತಿಗಳ ಪತ್ತೆ ಹಚ್ಚುವ ಕಾರ್ಯ ಆಗಬೇಕಿದೆ ಎಂದು ಮಾಹಿತಿ ನೀಡಿದರು.
ಇಬ್ಬರಿಗೆ ನೆಗೆಟಿವ್
ಮೇ 18ರಂದು ಮುಂಬೈನಿಂದ ಬಂದು ಕೋವಿಡ್ ಆಸ್ಪತ್ರೆಯಲ್ಲಿ ಸೇರಲ್ಪಟ್ಟಿದ್ದ 45 ವರ್ಷದ ಮಹಿಳೆ ಯೊಬ್ಬರು ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಬಹುತೇಕ ಮಂಗಳವಾರ ದಿನ ಆಸ್ಪತ್ರೆ ಯಿಂದ ಬಿಡುಗಡೆ ಗೊಳಿಸಲಿರು ವುದಾಗಿ ತಿಳಿದುಬಂದಿದೆ. ಅದೇ ರೀತಿ ಮೇ 24ರಂದು ಮುಂಬೈನಿಂದ ಬಂದಿದ್ದ 26 ವರ್ಷದ ಯುವಕ ಪೂರ್ಣ ಗುಣಮುಖ ರಾಗಿದ್ದು, ಆತನನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸ ಲಾಗಿದೆ. ಹೀಗಾಗಿ ಹಳೆಯ 2 ಪ್ರಕರಣಗಳು ನೆಗೆಟಿವ್ ಆಗಿದ್ದು, ಜಿಲ್ಲಾಡಳಿತಕ್ಕೆ ತುಸು ನೆಮ್ಮದಿಯುಂಟು ಮಾಡಿದೆ. ಆದರೆ, ಹೊಸದಾಗಿ ಬಂದಿರುವ 3 ಪಾಸಿಟಿವ್ ಪ್ರಕರಣಗಳಿಂದಾಗಿ ಮತ್ತೆ ತಲೆ ನೋವುಂಟಾಗಿದೆ.
ಯೋಧನ ಅಳಲು
ಈ ನಡುವೆ ಪೂನಾದಿಂದ ತನ್ನ ಊರು ಭಾಗಮಂಡಲಕ್ಕೆ ರಜೆಯಲ್ಲಿ ಬಂದಿದ್ದ ಯೋಧನೊಬ್ಬನಿಗೆ ಕ್ವಾರಂಟೈನ್ ಎದುರಾಗಿದೆ. ಈ ಯೋಧ ಸ್ವಯಂ ವೀಡಿಯೊ ವೊಂದನ್ನು ಮಾಡಿ ಆಸ್ಪತ್ರೆಯಲ್ಲಿನ ತನ್ನ ಪರಿಸ್ಥಿತಿಯ ಕುರಿತು ಅಸಹಾಯಕತೆ ವ್ಯಕ್ತಪಡಿಸಿದ ಬೆಳವಣಿಗೆ ಕಂಡು ಬಂದಿದೆ. ಈ ಯೋಧ ತಾನು ಪೂನಾದಿಂದ ಅವರ ನಿಕಟ ಸ್ನೇಹಿತ ರೊಬ್ಬರ ವಾಹನದಲ್ಲಿ ಕೋವಿಡ್ ತಡೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಸೇನಾ ಶಿಬಿರ ದಿಂದಲೇ ಶುದ್ಧ ಕುಡಿಯುವ ನೀರನ್ನೂ ಹೊತ್ತುಕೊಂಡು ಮಂಗಳೂರಿನ ಮೂಲಕವಾಗಿ ಇಲ್ಲಿಗೆ ಬಂದರು. ಮಂಗಳೂರಿನಲ್ಲಿ ಕೊಡಗಿಗೆ ಬರುವ ಅವರ ಕೆಲವು ಕೇರಳ ಮತ್ತು ಇತರ ಒಳ ಜಿಲ್ಲೆಗಳ ಸ್ನೇಹಿತರು ಅವರ ವಾಹನದಲ್ಲಿಯೇ ಬಂದರು. ಭಾಗಮಂಡಲ ತಲುಪಿದಾಗ, ಅವರ ಸ್ನೇಹಿತರೆಲ್ಲರನ್ನೂ ಗೃಹ ಸಂಪರ್ಕ ತಡೆಗೆ ಒಳಪಡಿಸಲಾಯಿತು. ಆದರೆ, ಯೋಧನನ್ನು ಮಾತ್ರ ಕೋವಿಡ್ ಆಸ್ಪತ್ರೆಗೆ ಸೇರಿಸಲಾಯಿತು. ಅವರ ವರದಿಯೂ ನೆಗೆಟಿವ್ ಬಂದಿತ್ತು. ಆದರೆ, ತನ್ನ ಸನಿಹದ ಕೋಣೆಗಳಲ್ಲಿ ಇಂದು ಪಾಸಿಟಿವ್ ಪ್ರಕರಣಗಳಾಗಿ ಬಂದಿದ್ದ ವ್ಯಕ್ತಿಗಳನ್ನು ಇರಿಸಿದ್ದುದನ್ನು ಗಮನಿಸಿ ಅವರು ಆತಂಕಗೊಂಡು, ವೀಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿದರು. ತನ್ನನ್ನು ಹೊಟೇಲ್ ನಲ್ಲಿ ಸಂಪರ್ಕ ತಡೆಗೆ ಒಳಪಡಿಸ ಬೇಕೆಂದು ಮನವಿ ಮಾಡಿದರು. ಇದಕ್ಕೆ ಬಳಿಕ ಸ್ಪಂದಿಸಿದ ವೈದ್ಯರು ಮತ್ತು ಸಿಬ್ಬಂದಿ ಅವರನ್ನು ಆಸ್ಪತ್ರೆಯಿಂದ ಇತರೆಡೆಗೆ ಕಳುಹಿಸಿದ ಸನ್ನಿವೇಶ ಎದುರಾಯಿತು.