ಗೋಣಿಕೊಪ್ಪಲು, ಜೂ. 18: ರಾಜ್ಯ ಸರ್ಕಾರ ನೂತನವಾಗಿ ತರಲು ಹೊರಟಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಸರ್ಕಾರವು ತರಲು ಹೊರಟಿರುವ ಭೂ ಸುಧಾರಣೆ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಮುಖ್ಯ ಮಂತ್ರಿಗಳಿಗೆ ಈ ಬಗ್ಗೆ ಜಿಲ್ಲೆಯ ರೈತರು ವಿರೋಧವನ್ನು ವ್ಯಕ್ತಪಡಿಸಿ ಮನವಿ ನೀಡಿದರು. ತಮ್ಮ ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಕಾಯ್ದೆ ಕಲಂ 79 ಎ.ಬಿ.ಸಿ. ಮತ್ತು 80 ಅನ್ನು ತೆಗೆದು ಹಾಕಲು ಕರಡು ಮಸೂದೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದಾರೆ. ಕಂದಾಯ ಮಂತ್ರಿಯವರು ಸುಗ್ರೀವಾಜ್ಞೆ ಮೂಲಕ ಈ ತಿದ್ದುಪಡಿಯನ್ನು ತರುವುದಾಗಿ ಹೇಳಿದ್ದಾರೆ.
ಯಾವುದೇ ತಿದ್ದುಪಡಿ ಅಥವಾ ಕಾಯ್ದೆ ರೂಪಿಸಲು ಸಾರ್ವಜನಿಕರ ಒಳಿತು ಅಡಕವಾಗಿರಬೇಕು. ಅದು ಸಮರ್ಥನೀಯವಾಗಿರಬೇಕು. ಅದನ್ನು ಜನ ಸಮುದಾಯ ಒಪ್ಪುವಂತಿರಬೇಕು. ಆದರೆ ಸರ್ಕಾರ ತರಲು ಉದ್ದೇಶಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕರಡಿನಲ್ಲಿ ನಮೂದಿಸಿರುವ ಕಾರಣಗಳು ಬಾಲಿಷವಾಗಿದ್ದು ಜಿಲ್ಲೆಯಲ್ಲಿ ಅತೀ ಸಣ್ಣ ಹಿಡಿವಳಿ ರೈತರೇ ಅಧಿಕವಿದ್ದು ಇವರ ಸಂಪೂರ್ಣ ಬದುಕು ಬೀದಿಗೆ ಬೀಳುವುದಲ್ಲದೆ ಅಸ್ತಿತ್ವವೇ ಇಲ್ಲದಂತಾಗುತ್ತವೆ. ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಾರ್ಮಿಕರು ಅತ್ಯಂತ ಸಂಕಷ್ಟಕ್ಕೀಡಾಗಲಿದ್ದಾರೆ.
ರೈತಾಪಿ ಕೃಷಿ ಸಂಸ್ಕøತಿ ಮಾಯವಾಗಿ ಬಂಡವಾಳಿಗರ ಕೃಷಿ ಸಂಸ್ಕøತಿ ಬೆಳೆಯುವಂತಾಗುತ್ತದೆ. ಆಹಾರ ಸಾರ್ವಭೌಮತ್ವಕ್ಕೆ ಪೆಟ್ಟು ಬೀಳಲಿದ್ದು ಆಹಾರ ಭದ್ರತೆಯ ಹಕ್ಕು ನಾಶವಾಗಲಿದೆ. ಮುಂದೆ ಆಹಾರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ. ಸಂಪತ್ತು ಸೃಷ್ಟಿಸುವ ಉದ್ಯೋಗ ನಾಶವಾಗಲಿದೆ. ಬಂಡವಾಳಶಾಹಿಗಳು ಕುಲಾಂತರಿ ಬೀಜಗಳ ಬಳಕೆ ರಾಸಾಯನಿಕ ಕೃಷಿ, ಮನೋಕಲ್ಚರ್ಗೆ ಒತ್ತು ನೀಡಿ ಇಡೀ ಪರಿಸರವೇ ನಾಶವಾಗಲಿದೆ. ಇದರಿಂದ ಆಹಾರ ಸಂಸ್ಕøತಿಗೆ ಪೆಟ್ಟು ಬೀಳಲಿದೆ. ಸಾಮರಸ್ಯದಿಂದ ಇರುವ ರೈತರು ಬಂಡವಾಳಶಾಯಿಗಳು ಲಗ್ಗೆ ಇಡುವುದರಿಂದ ಸಾಮರಸ್ಯಕ್ಕೆ ದಕ್ಕೆ ಬರಲಿದೆ.ಈ ತಿದ್ದುಪಡಿ ಮಸೂದೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಆವಕಾಶವನ್ನು ನೀಡಬೇಕು, ಪುನರ್ ವಿಮರ್ಶೆ ಮಾಡಿ ತಿದ್ದುಪಡಿ ತರಲು ಹೊರಟಿರುವುದನ್ನು ಕೈಬಿಟ್ಟು ರೈತ ಸಮುದಾಯವನ್ನು ಉಳಿಸಲು ಮುಖ್ಯಮಂತ್ರಿಗಳು ಮುಂದಾಗ ಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ರೈತ ಮುಖಂಡರಾದ ತೀತಿರಮಾಡ ರಾಜ, ಉಪಸ್ಥಿತರಿದ್ದರು.