ಮಡಿಕೇರಿ, ಜೂ. 18: ನಾಪೋಕ್ಲುವಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು 2006ರಲ್ಲಿ ಪ್ರಾರಂಭವಾಗಿರುತ್ತದೆ. ಈ ಕಾಲೇಜು ಇರುವ ಪ್ರದೇಶವು ಗ್ರಾಮೀಣ ಪ್ರದೇಶವಾಗಿದ್ದು, ಅಲ್ಪಸಂಖ್ಯಾತರು, ಹಿಂದುಳಿದವರೇ ಹೆಚ್ಚಾಗಿರುವ ಪ್ರದೇಶವಾಗಿರುತ್ತದೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷಕ್ಕೆ ಸರಾಸರಿ 150 ರಿಂದ 96, 97, 98 ಇದೆ. ಆದರೆ, ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರು ದ್ವಿತೀಯ ವರ್ಷಕ್ಕೆ ಹೋದಾಗ ವಿದ್ಯಾಭ್ಯಾಸವನ್ನು ಕಡಿತಗೊಳಿಸುತ್ತಿರುವ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಇಡೀ ಮಡಿಕೇರಿ ತಾಲೂಕಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದೊಂದೇ ಆಗಿದ್ದು, ಇದನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತದೆ. 2020-21ನೇ ಸಾಲಿನಲ್ಲಿ ಕೂಡ ಕಾಲೇಜು ಕಟ್ಟಡಗಳ ಅಭಿವೃದ್ಧಿಗೆ 50 ಲಕ್ಷ ಬಿಡುಗಡೆಯಾಗಿರುತ್ತದೆ. ಒಟ್ಟು 10 ಎಕರೆ ಜಾಗವೂ ಕೂಡ ಇದ್ದು, ಮುಂದೆ ಇಲ್ಲಿ ಬೇರೆ ಬೇರೆ ಶೈಕ್ಷಣಿಕ ಕೋರ್ಸ್‍ಗಳನ್ನು ಪ್ರಾರಂಭಿಸಲು ಅವಕಾಶ ಇರುತ್ತದೆ.
ಈ ಕಾಲೇಜನ್ನು ಸ್ಥಳಾಂತರಿಸದೆ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಲ್ಲೇ ಮುಂದುವರೆಸುವಂತೆ ಆದೇಶ ಹೊರಡಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಅವರು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.