ವೀರಾಜಪೇಟೆ, ಜೂ. 18: ಪೂರ್ವ ಯೋಜಿತ ನಿಗದಿಯಂತೆ ಎಲ್ಲ ರೀತಿಯಿಂದಲೂ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಿಕೊಂಡು ಜೂನ್ 25 ರಿಂದ ಜುಲೈ 4 ರವರೆಗೆ ತಾಲೂಕಿನ ಒಟ್ಟು 2173 ಮಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ತಾಲೂಕಿನ ಎಲ್ಲ 57 ಪ್ರೌಢ ಶಾಲೆಗಳಲ್ಲಿ ಸಿದ್ಧತೆ ನಡೆಸುವಂತೆ ನಿರ್ಧರಿಸಲಾಯಿತು.

ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢ ಶಾಲೆಯ ದ್ವಿಶತಮಾನೋತ್ಸವ ಭವನದಲ್ಲಿ ನಡೆದ ತಾಲೂಕಿನ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರುಗಳ ಸಭೆಯಲ್ಲಿ ಡಿ.ಡಿ.ಪಿ.ಐ. ಮಚ್ಚಾಡೋ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯ, ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ನೋಡೆಲ್ ಅಧಿಕಾರಿ ಪಿ.ಆರ್. ಅಯ್ಯಪ್ಪ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಅವರ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಅನುದಾನ, ಅನುದಾನ ರಹಿತ ಶಾಲೆಯ ಆಡಳಿತ ಮಂಡಳಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯವನ್ನು ಒದಗಿಸಬೇಕು. ತಾಲೂಕಿನಲ್ಲಿ ಬಸ್ ಸೌಕರ್ಯ ಇಲ್ಲದ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಸಾರಿಗೆ ಸಂಸ್ಥೆ ಬಸ್ ಒದಗಿಸಬೇಕು. ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್‍ಗಳು ಉಚಿತವಾಗಿ ನೀಡುವುದು. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿಯೇ, ಥರ್ಮಲ್ ಸ್ಕ್ರೀನ್ ಪರೀಕ್ಷೆ, ಜೊತೆಗೆ ಸ್ಯಾನಿಟೈಸರ್‍ನಿಂದ ಕೈ ಶುಚಿಗೊಳಿಸುವ ವ್ಯವಸ್ಥೆ ಕಲ್ಪಿಸುವುದು. ಕೊಠಡಿಯ ಪ್ರತಿ ಡೆಸ್ಕ್‍ನಲ್ಲಿ ಇಬ್ಬರಿಗೆ ಮಾತ್ರ ಅವಕಾಶ, ವಿಶೇಷ ಕೊಠಡಿಯಲ್ಲಿ ಡೆಸ್ಕ್‍ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸುವುದು. ಪ್ರತಿ ಡೆಸ್ಕ್‍ನ ಅಂತರ ಒಂದು ಮೀಟರ್‍ಗೆ ಸೀಮಿತ ಗೊಳಿಸುವುದು. ಪ್ರತಿ ಕೇಂದ್ರಗಳಲ್ಲಿ ಅಗತ್ಯಕ್ಕನುಸಾರವಾಗಿ 150 ರಿಂದ 450 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಸಭೆ ನಿರ್ಧರಿಸಿತು. ತಾಲೂಕಿನ 8 ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ಕನಿಷ್ಟ 10 ಅಧಿಕಾರಿಗಳ ತಂಡವನ್ನು ನೇಮಿಸುವುದು. ಅಧಿಕಾರಿಗಳು ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸದಂತೆ ಎಲ್ಲ ಅಧಿಕಾರಿ ಗಳಿಂದ ಮೊಬೈಲ್‍ನ್ನು ಪಡೆದು ಕೊಳ್ಳಲು ಕೇಂದ್ರಕ್ಕೆ ತಲಾ ಒಂದರಂತೆ ತಂಡವನ್ನು ರಚಿಸುವುದು. ಪರೀಕ್ಷಾ ಕೇಂದ್ರದಲ್ಲಿ ಸ್ಕೌಟ್ ಮತ್ತು ಗೈಡ್ಸ್, ಎನ್.ಸಿ.ಸಿ., ಎ.ಸಿ.ಸಿ. ಮಕ್ಕಳ ತಂಡ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲಿರುವರು. ತಾಲೂಕಿನ ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮೂರು ದಿನಗಳ ಮೊದಲು ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ ಸ್ವಚ್ಛಗೊಳಿಸುವುದು. ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚುವರಿ ಕೊಠಡಿಗಳು, “ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳನ್ನು” ವ್ಯವಸ್ಥೆ ಮಾಡುವುದು. ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರವೂ ಗುಂಪು ಗುಂಪಾಗಿ ಹೊರಗೆ ಹೋಗದೆ ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಹೋಗುವಂತೆ ಕ್ರಮ ವಹಿಸುವುದು. ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲಿ ಮೂರು ಅಡಿ ಅಂತರದಲ್ಲಿ ಚೌಕಗಳನ್ನು ಬರೆಯ ಬೇಕು. ಈ ಚೌಕಗಳ ಮೂಲಕವೇ ಆರೋಗ್ಯ ತಪಾಸಣಾ ಕೌಂಟರ್‍ಗೆ ತೆರಳುವಂತೆ ಮಾಡಬೇಕು. ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿ, ಸಿಬ್ಬಂದಿಗಳ ಹೊರತುಪಡಿಸಿ ಇನ್ನು ಯಾರಿಗೂ ಪ್ರವೇಶ ನಿಷೇಧಿಸ ಲಾಗಿರುತ್ತದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ಯಾವುದೇ ಮಕ್ಕಳು ರಾಜ್ಯದ ಹೊರಗೆ ವಲಸೆ ಹೋಗಿದ್ದರೆ/ಪ್ರಯಾಣಿಸಿದ್ದರೆ ಅಥವಾ ಗಡಿ ರಾಜ್ಯದಲ್ಲಿ ಉಳಿದುಕೊಂಡಿದ್ದರೆ ಜೂನ್ 25 ರಿಂದ ಜುಲೈ 4 ರವರೆಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಯಾವುದೇ ಕಾರಣದಿಂದ ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಮುಂದಿನ ಪೂರಕ ಪರೀಕ್ಷೆಗೆ ಹಾಜರಾಗಲು ಆಯ್ಕೆಯನ್ನು ನೀಡುವಂತೆ ಸಭೆ ತೀರ್ಮಾನಿಸಿತು.

ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆ ಎಸ್.ಎಸ್. ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆರೋಗ್ಯದ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಎಲ್ಲ ರೀತಿಯ ಸುಸಜ್ಜಿತ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯ ಸಭೆಯಲ್ಲಿ ನೆರೆದಿದ್ದ ಪ್ರೌಢಶಾಲೆ ಶಿಕ್ಷಕರಿಗೆ ಕರೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಶಶಿ ಸುಬ್ರಮಣಿ ಮಾತನಾಡಿ, ತಾಲೂಕಿನ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯ ಜೊತೆಯಲ್ಲಿಯೇ ವಿದ್ಯಾರ್ಥಿಗಳ ಆರೋಗ್ಯಕ್ಕೂ ಆದ್ಯತೆ ನೀಡಲು ಶಿಕ್ಷಕರು ಶ್ರಮಿಸಬೇಕು. ವಿದ್ಯಾರ್ಥಿಗಳಿಗೆ ಆರೋಗ್ಯದ ದೃಷ್ಟಿಯಿಂದಲೂ ಎಲ್ಲ ಸೌಲಭ್ಯಗಳಿಗೂ ಶಾಲಾ ಆಡಳಿತ ಕಲ್ಪಿಸಲು ಮುಂದಾಗಬೇಕು ಎಂದರು. ತಾ. 25 ರಂದು ತಾಲೂಕಿನ 8 ಕೇಂದ್ರಗಳಲ್ಲಿ 1054 ಬಾಲಕರು, 1119 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.