ಕುಶಾಲನಗರ, ಜೂ. 18: ನಿರ್ಮಾಣ ಹಂತದ ಮನೆಯೊಳಗೆ ಕಾರ್ಮಿಕ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರದ ಬಡಾವಣೆಯೊಂದರಲ್ಲಿ ನಡೆದಿದೆ.
ಗೊಂದಿಬಸವನಹಳ್ಳಿಯ ರಾಜು ಎಂಬವರ ಪುತ್ರ ಕಟ್ಟಡ ಕಾರ್ಮಿಕ ನಂದೀಶ್ (23) ಆತ್ಮಹತ್ಯೆಗೆ ಶರಣಾದ ಯುವಕ. ಕುಶಾಲನಗರದ ಹೊಸ ಹೌಸಿಂಗ್ ಬೋರ್ಡ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡಂತಸ್ತಿನ ಮನೆಯ ಶೌಚಾಲಯದಲ್ಲಿ ಕಿಟಕಿ ಸರಳಿಗೆ ಟವಲ್ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಪ್ರತಿನಿತ್ಯ ಮಾದಾಪುರಕ್ಕೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ ನಂದೀಶ್ ಕುಶಾಲನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎಂದಿನಂತೆ ಗುರುವಾರ ಬೆಳಿಗ್ಗೆ ಮನೆ ನಿರ್ಮಾಣ ಕೆಲಸಕ್ಕೆ ಆಗಮಿಸಿದ ಕಾರ್ಮಿಕರಿಗೆ ಶೌಚಾಲಯದಲ್ಲಿ ನೇಣು ಹಾಕಿಕೊಂಡಿರುವ ದೃಶ್ಯ ಗೋಚರಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಠಾಣಾಧಿಕಾರಿ ವೆಂಕಟರಮಣ ಮತ್ತು ಸಿಬ್ಬಂದಿಗಳು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.