ಗೋಣಿಕೊಪ್ಪಲು, ಜೂ. 18: ತಿತಿಮತಿ ಗ್ರಾಮ ಪಂಚಾಯಿತಿ ಸುತ್ತ ಮುತ್ತಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಹಾಡಿ ನಿವಾಸಿಗಳಿಗೆ ಮಳೆಗಾಲಕ್ಕೆ ಬೇಕಾದ ಟಾರ್ಪಲ್‍ಗಳನ್ನು ವಿತರಿಸಲಾಯಿತು. ಬೊಂಬು ಕಾಡು ಜಂಗಲಾಡಿ, ಆಯಿರ ಸುಳಿ, ಚೀನಿ ಹಡ್ಲು, ಮಜ್ಜಿಗೆ ಹಳ್ಳ ಫಾರಂ, ಮಜ್ಜಿಗೆ ಹಳ್ಳ,ಆನೆ ಕ್ಯಾಂಪ್, ಕಾರೆಕಂಡಿ ಮುಂತಾದ ಹಾಡಿಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಗುಡಿಸಲು ಮನೆಗಳಲ್ಲಿ ಮಳೆಗಾಲದಲ್ಲಿ ನೀರು ಸೋರುವುದನ್ನು ತಡೆಯಲು ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಗಿರಿಜನ ಕಲ್ಯಾಣಾಭಿವೃದ್ಧಿ ಇಲಾಖೆಯಿಂದ ವಿತರಣೆಯಾಗುವ ಪ್ಲಾಸ್ಟಿಕ್ ಹೊದಿಕೆಗಳನ್ನು ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಹಾಡಿಯ ನಿವಾಸಿಗಳಿಗೆ ಗ್ರಾಮ ಪಂಚಾಯ್ತಿ ಮೂಲಕ ವಿತರಿಸಲಾಯಿತು. ಈ ಸಂದರ್ಭ ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ ನೀಡಿರುವ ಸವಲತ್ತುಗಳನ್ನು ದುರುಪಯೋಗ ವಾಗದಂತೆ ಎಚ್ಚರ ವಹಿಸಿ ತಾವೇ ಸದ್ಬಳಕೆ ಮಾಡಿಕೊಳ್ಳುವಂತೆ ಫಲಾನುಭವಿಗಳಿಗೆ ತಿಳಿ ಹೇಳಿದರು.
ಈ ಸಂದರ್ಭ ಪಂಚಾಯ್ತಿ ಉಪಾಧ್ಯಕ್ಷ ರಿಷಿ, ಸದಸ್ಯರುಗಳಾದ ಚುಬ್ರ, ಅನೂಪ್ ಕುಮಾರ್, ಸಿದ್ದರಾಜು, ಮುತ್ತು, ವಿಜಯ, ಪೊನ್ನು, ರೆಣುಕಾ, ರಜನಿ, ಶಾಂತಮ್ಮ, ಪಿಡಿಒ ಮಮತಾ ಹಾಡಿಯ ಅಧ್ಯಕ್ಷ ಪಿ.ಸಿ.ರಾಮು, ಪಂಚಾಯಿತಿ ಸಿಬ್ಬಂದಿಗಳಾದ ಎಂ.ಸಿ. ಶ್ರೀನಿವಾಸ್, ಗಿರೀಶ್, ಶಿವನಂಜಯ್ಯ, ಉಮೇಶ್, ಮಾಧು, ಸವಿತಾ ಮುಂತಾದವರು ಇದ್ದರು.