ಮಡಿಕೇರಿ, ಜೂ. 14: ರಾಜ್ಯದ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ಗಳನ್ನು ನೇಮಿಸದೆ ತಕ್ಷಣ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ ಸಮಿತಿ ಒತ್ತಾಯಿಸಿದೆ.
ಮಡಿಕೇರಿಯಲ್ಲಿ ಜಿ.ಪಂ. ಉಪ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ಸಮಿತಿಯ ಪ್ರಮುಖರು ಕೊರೊನಾ ‘ಅಸಾಧಾರಣ ಪರಿಸ್ಥಿತಿ’ಯ ನೆಪವೊಡ್ಡಿ ಸ್ಥಳೀಯ ಸರ್ಕಾರದಂತಿರುವ ಗ್ರಾ.ಪಂ.ಗಳನ್ನು ಅತಂತ್ರಗೊಳಿಸುವುದು ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ. ಯಾಕುಬ್ ಮಾತನಾಡಿ, ರಾಜ್ಯ ಚುನಾವಣಾ ಆಯೋಗ ಅವಧಿ ಮುಗಿದಿರುವ ಗಾ.ಪಂ.ಗಳಿಗೆ ತಕ್ಷಣ ಚುನಾವಣೆ ನಡೆಸುವ ಕಾರ್ಯಕ್ಕೆ ಮುಂದಾಗಬೇಕು, ಅಗತ್ಯವಿರುವ ಸಹಕಾರ ಮತ್ತು ಪೂರಕ ನಿರ್ದೇಶನಗಳನ್ನು ಸರ್ಕಾರ ನೀಡಬೇಕು. ಅಲ್ಲಿಯವರೆಗೆ ಪ್ರಸ್ತುತ ಇರುವ ಸ್ಥಳೀಯ ಗ್ರಾ.ಪಂ. ಸರ್ಕಾರವನ್ನೇ ಮುಂದುವರಿಸಬೇಕು, ಚುನಾವಣೆ ನಡೆಸಲು ಅಸಾಧ್ಯವಾದ ಪರಿಸ್ಥಿತಿ ಇರುವಲ್ಲಿ ಮಾತ್ರ ಹಂತ ಹಂತವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು, ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ನೇಮಕ ಮಾಡುವಂತಹ ತಪ್ಪು ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.
ಸರ್ಕಾರ ತಕ್ಷಣ ತನ್ನ ತಪ್ಪು ನಿರ್ಧಾರಗಳಿಂದ ಹಿಂದೆ ಸರಿದು ಚುನಾವಣೆ ನಡೆಯುವಲ್ಲಿಯವರೆಗೆ ಹಿಂದಿನ ಚುನಾಯಿತ ಆಡಳಿತ ಮಂಡಳಿಯನ್ನೇ ಮುಂದುವರೆಸ ಬೇಕೆಂದು ಒತ್ತಾಯಿಸಿದರು.
ಕೆದಕಲ್ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ, ಬಲ್ಲಮಾವಟಿ ಗ್ರಾ.ಪಂ. ಅಧ್ಯಕ್ಷೆ ಸರಸು ಪೆಮ್ಮಯ್ಯ, ಸದಸ್ಯ ಕುಮಾರ್ ಸೋಮಣ್ಣ, ಕೆ. ನಿಡುಗಣೆ ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ, ಕರಿಕೆ ಗ್ರಾ.ಪಂ. ಅಧ್ಯಕ್ಷ ಬಾಲನ್ ನಾಯಕ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.