ಕೂಡಿಗೆ, ಜೂ. 13: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ನಿವಾಸಿಗಳು 25 ವರ್ಷಗಳ ನಂತರ ಕೇಂದ್ರ ಸರ್ಕಾರದ ಸೌಭಾಗ್ಯ ಲಕ್ಷ್ಮಿ ಯೋಜನೆಯ ವಿದ್ಯುತ್ ಸೌಲಭ್ಯಗಳನ್ನು ಪಡೆದಿದ್ದಾರೆ.

ಕೂಡುಮಂಗಳೂರು ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಭೋಗಪ್ಪ ಕೇಂದ್ರ ಸರ್ಕಾರದ ಸೌಭಾಗ್ಯ ಲಕ್ಷ್ಮಿ ವಿದ್ಯುತ್ ಯೋಜನೆಯ ಅಡಿಯಲ್ಲಿ ಬಹುದಿನಗಳಿಂದ ದೊರಕದೆ ಇದ್ದ ವಿದ್ಯುತ್ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಮೈಸೂರು ವಿಭಾಗದ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದಾರೆ. ಯಾವುದೇ ಅಡಚಣೆಗಳು ಆಗದ ಹಾಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಕುಟುಂಬದವರಿಗೆ ಈ ಯೋಜನೆಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದಾರೆ.

ಗ್ರಾಮ ಪಂಚಾಯಿತಿಗೆ ವಿದ್ಯುತ್ ಸೌಲಭ್ಯಗಳನ್ನು ಒದಗಿಸುವಂತೆ ಒಂದು ವರ್ಷದ ಹಿಂದೆ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಯೋಜನೆಯ ಸೌಲಭ್ಯಗಳನ್ನು ಒದಗಿಸಲು ಮನೆಗೆ ಆರ್‍ಟಿಸಿ ಸೇರಿದಂತೆ ಇತರ ದಾಖಲೆಗಳ ಕೊರತೆಯ ಸಮಸ್ಯೆ ಇತ್ತು. ಆದರೆ ಇದೀಗ 25 ವರ್ಷಗಳ ನಂತರ ಮೂರು ಮನೆಗಳಿಗೆ ಬೆಳಕಿನ ಭಾಗ್ಯ ಬಂದಿದೆ ಎಂದು ಫಲಾನುಭವಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.