ಗಂಗೆಯು ಯಮುನೆಯೊಂದಿಗೆ ಕಾವೇರಿ ಮಾಹಾತ್ಮೈಯ ಕುರಿತು ಹೇಳುವದನ್ನು ಮುಂದುವರಿಸುತ್ತಾಳೆ. ಇದಲ್ಲದೆ, ಕಾವೇರಿ ಜಲದಲ್ಲಿ ಪರಿಶುದ್ಧವಾದ ಗೋಮುಖ ತೀರ್ಥವೂ ಸೇರಿರುತ್ತದೆ. ಅಲ್ಲಿ ಹಗಲಿರುಳೂ ಸಹಸ್ರಾರು ತೀರ್ಥಗಳು ವಾಸಮಾಡುತ್ತಲಿವೆ. ಪೂರ್ವ ಕಾಲದಲ್ಲಿ ಪೃಥು ಚಕ್ರವರ್ತಿಯ ಆಡಳಿತ ಕಾಲದಲ್ಲಿ ಸಮಸ್ತರಿಗೂ ಇಷ್ಟಾರ್ಥ ವನ್ನು ಪೂರೈಸುತ್ತಾ ಭೂಮಿಯು ಪ್ರಸಿದ್ಧಳೂ, ಶ್ರೇಷ್ಠಳು ಎಂದು ಮಾನ್ಯತೆ ಪಡೆದಿದ್ದಳು. ಕೆಂಪಾದ ಕಾಲುಗಳುಳ್ಳ, ಮೇಲುಮುಖಳಾದ, ಪರಿಶುದ್ಧಾಂಗಳಾದ ಭೂಮಿಯನ್ನು ಪ್ರವೇಶಿಸಿ ಕಾವೇರಿಯು ಅಲ್ಲಿಂದ ಹೊರ ಬಂದು ಮತ್ತೆ ಮುನ್ಸಾಗುತ್ತಾಳೆ. ರಾಮನಾಥಪುರ ಎನ್ನುವ ಹೆಸರುಳ್ಳ ಕ್ಷೇತ್ರವು ಕಾವೇರಿ ತೀರದಲ್ಲಿ ಸಕಲ ಇಷ್ಟಾರ್ಥಗಳನ್ನು ಕೊಡುವಂತಹ ಕ್ಷೇತ್ರವಾಗಿದೆ. ಮೋಕ್ಷಾಕಾಂಕ್ಷಿಗಳು ಅಲ್ಲಿ ಸಾಧನೆÀಗೈದರೆ ಮೋಕ್ಷ ದೊರಕುತ್ತದೆ. ಪಾವನವಾದ ಕಪಿಲಾ-ಕಾವೇರಿ ಸಂಗಮವೂ ಮುಕ್ತಿ ಸ್ಥಾನವಾಗಿದೆ. ಅಗಸ್ತ್ಯಾಶ್ರಮವೂ, ಮಾರ್ಕಂಡೇಯನ ಆಶ್ರಮವೂ, ಶಿಲಾತಲ ಸಮೀಪವಿರುವ ಅನಶನ ತೀರ್ಥವೂ ಪಾವನ ಕೇಂದ್ರಗಳಾಗಿವೆ. ಕಾವೇರಿಯು ಎರಡು ಭಾಗವಾಗಿಯೂ, ನಾಲ್ಕು ಭಾಗವಾಗಿಯೂ ಬೇರೆ-ಬೇರೆಯಾಗಿ ಪ್ರವಹಿಸಿದಳು. ಮಹಾವಿಷ್ಣ್ಣುವಿನ ನಿವಾಸ ಸ್ಥಳವಾಗಿ ಮಹತ್ತಾದ ಅಭಿವೃದ್ಧಿಯಿಂದ ಕೂಡಿದ ಶ್ರೀರಂಗವೆಂಬ ಮಹಾಕ್ಷೇತ್ರವಿದೆ, ಅಲ್ಲಿರುವ ಚಂದ್ರ ಪುಷ್ಕರಣಿಯು ನರರ ಪಾಪ ನಾಶಕ ತೀರ್ಥವಾಗಿದೆ.ಅದರ ದಡದಲ್ಲಿ ವಿಷ್ಣುವು ಸರ್ವ ಕಾಲದಲ್ಲಿಯೂ ನೆಲೆ ನಿಂತಿರುವನು. ಹೆಡೆಗಳಲ್ಲಿ ರತ್ನಗಳಿಂದ ಆದಿಶೇಷನ ಶರೀರವೆಂಬ ಹಾಸಿಗೆಯಲ್ಲಿ ಪವಡಿಸಿರುವ ಕಮಲ ನಯನ ನೀಲಾಂಗ ಸುಂದರನನ್ನು ಅಲ್ಲಿ ಕಾಣಬಹುದು. ಪ್ರಳಯ ಕಾಲದಲ್ಲಿ ಸಕಲ ಜನರನ್ನೂ ಸಂಹಾರ ಮಾಡುವ ಪೀತಾಂಬರಧಾರಿ ಯಾದ, ಸೌಮ್ಯ ಶರೀರದ, ಹಾರಕೇಯೂರಗಳಿಂದ ಅಲಂಕೃತನಾದ, ಮನೋಹರಗಳಾದ ರತ್ನಗಳುಳ್ಳ ಕೊರಳನ್ನು ಮುಂಗೈ ಮೇಲೆ ಏರಿಸಿದ ಸುಂದರವಾದ ಪುಷ್ಪಗಳಿಂದಲೂ, ಕಲ್ಯಾಣಕರವಾದ ಉಗುರು ಗಳಿಂದಲೂ ಅಲಂಕೃತನಾದ ಪರಮಾತ್ಮನನ್ನು ಅಲ್ಲಿ ಕಾಣಬಹುದು. ಮನೋಹರವಾದ ರತ್ನಗಳಿಂದ ಸಾಲಂಕೃತವಾಗಿರುವ ಶಿರವನ್ನು ಶೇಷನ ಹೆಡೆಯ ಮೇಲೆ ಇರಿಸಿದ ಮಹಾವಿಷ್ಣುವನ್ನು ಅಲ್ಲಿ ಕಾಣ ಬಹುದು. ಸದಾ ಸಿದ್ಧರಿಂದ ಪೂಜಿತನಾದ, ಸರ್ವ ಕಾಲಗಳಲ್ಲಿಯೂ ಕುಸುಮಗಳಿಂದ ಪೂಜಿಸಲ್ಪಟ್ಟ, ದಿವ್ಯ ಚಂದನಗಳಿಂದ ಲೇಪಿಸಲ್ಪಟ್ಟ ಶರೀರವುಳ್ಳ, ದಿವ್ಯ ಮಾಲಿಕೆಗಳಿಂದ ಅಲಂಕರಿಸಲ್ಪಟ್ಟಿರುವ ದಿವ್ಯ ಪುರುಷನನ್ನು ಅಲ್ಲಿ ದರ್ಶಿಸಬಹುದು. ಮನೋಹರವೂ, ಪ್ರಸನ್ನವೂ ಆದ ಮುಖವುಳ್ಳ, ಮಹರ್ಷಿಗಳಿಂದ ಸೇವಿತನಾದ, ಬ್ರಹ್ಮನಿಂದ ಆರಾಧಿಸಲ್ಪಟ್ಟ, ಜಗದ್ರೂಪಿಯಾದ ಮಹಾವಿಷ್ಣುವನ್ನು ಕವೇರ ತನಯಳಾದ ಕಾವೇರಿಯು ನೋಡಿ ನಮಸ್ಕರಿಸಿದಳು. ತಾನು ಪರಮಾತ್ಮ ಸ್ವರೂಪಿಯಾದ ಶ್ರೀರಂಗನಾಥನನ್ನು ಮೊದಲು ಪೂಜಿಸಿರುವೆನೆಂದು ಅರಿತವಳಾದಳು, ಶ್ರೀ ರಂಗನಾಥನ ಪಕ್ಕಗಳಲ್ಲಿ ವನಮಾಲಿಕೆಯ ತೆರದಲ್ಲಿ ಎರಡು ಪ್ರಕಾರವಾಗಿ ಚಲಿಸಿದಳು. ಭಕ್ತಿಯಿಂದ ಅನುದಿನವೂ ಯಾರು ಶ್ರೀ ರಂಗನಾಥನ ದರ್ಶನವನ್ನು ಮಾಡುವರೋ ಅವರು ಪರಮ ಪದವನ್ನು ಹೊಂದುತ್ತಾರೆ. ಮತ್ತೆ ಜನುಮವನ್ನು ತಳೆಯುವದಿಲ್ಲ. ಚಂದ್ರಪುಷ್ಕರಿಣಿಯು ಶ್ರೀರಂಗನಾಥ ದೇವಾಲಯ ಸನಿಹದಲ್ಲಿದ್ದು, ಮಾನವರ ಪಾಪನಾಶಕಳೆಂದು ಪ್ರಖ್ಯಾತ ಳಾಗಿರುವಳು ಆ ಪುಷ್ಕರಿಣೀ ತೀರದಲ್ಲಿ ಭೂಮಿಯ ಅಧಿಪತಿಯು ಶ್ರೀ ರಂಗನೆಂಬ ಹೆಸರಿನಿಂದ ಪವಡಿಸಿದ್ದಾನೆ.
ಶ್ರೀರಂಗ ಕ್ಷೇತ್ರವು ಭೂ ವೈಕುಂಠವೆಂಬದಾಗಿಯೂ, ಮೋಕ್ಷದಾಯಕ ವೆಂದೂ ಪ್ರಖ್ಯಾತವಾಗಿದೆ. ಯಾವಾತನು ಶುಚಿರ್ಭೂತನಾಗಿ ರಂಗ ರಂಗ ಎಂದು ಯಾವಾಗಲೂ ಹೇಳುವನೋ ಅವನು ಸರ್ವ ಪಾಪಗಳಿಂದಲೂ ಬಿಡುಗಡೆ ಹೊಂದಿ ಶ್ರೀ ಹರಿಯ ಧಾಮಕ್ಕೆ ತೆರಳು ವನು. ಕಾವೇರಿಯ ಉತ್ತರ ದಡದಲ್ಲಿ ವೇದಾರಣ್ಯ ಎಂಬ ದೊಡ್ಡ ಕ್ಷೇತ್ರವಿದೆ. ಆ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ನಾಲ್ಕು ದಾಡೆಗಳುಳ್ಳ ಆನೆಯು ಪರಮೇಶ್ವರನನ್ನು ಪೂಜಿಸಿ ಆತನ ಅನುಗ್ರಹದಿಂದ ಗಜೇಂದ್ರತ್ವ ವನ್ನು ಪಡೆಯಿತು. ಭಕ್ತರಿಗೆ ಅಲ್ಲಿ ಭಗವಂತನು ಕಾಣಿಸಿ ಕೊಂಡು ಜ್ಞಾನವನ್ನು ಅನುಗ್ರಹಿಸುವನು. ಅಲ್ಲಿ ಮೂರು ಪುಷ್ಕರಿಣಿಗಳು ಸನ್ನಿಹಿತವಾಗಿರುವವು. ಅಲ್ಲದೆ ಅಲ್ಲಿ ಮಾಘ ಮಾಸದ ಷಷ್ಠಿಯ ದಿನ ಸ್ನಾನ ಮಾಡಿ ವಿಶೇಷ ವಾಗಿ ಬ್ರಾಹ್ಮಣರಿಗೆ ಅನ್ನ ದಾನ ಮಾಡು ವವನು ಸರ್ವ ಪಾಪ ಗಳಿಂದಲೂ ವಿಮುಕ್ತ ನಾಗುವನು.
ಕಾವೇರಿಯಲ್ಲಿ ಪ್ರತಿ ಮಾಸ ದಲ್ಲಿಯೂ ಹುಣ್ಣಿಮೆ, ಸಂಕ್ರಮಣ ಮೊದಲಾದ ಪರ್ವಕಾಲಗಳಲ್ಲಿ ಸ್ನಾನವನ್ನು ಮಾಡಿದರೆ ಒಂದು ವರ್ಷದ ಒಳಗೆ ಮುಕ್ತಿಯನ್ನು ಪಡೆಯುವನು. ಕಾವೇರಿಯ ದಕ್ಷಿಣ ತೀರದಲ್ಲಿ ಮಧ್ಯಾರ್ಜುನ ಎಂಬ ಮಹಾಕ್ಷೇತ್ರವಿದೆ. ಅಲ್ಲಿ ವಿಘ್ನೇಶ್ವರನಾದ ಮಹಾಗಣಪತಿಯು ಈಶ್ವರ ನನ್ನು ಪೂಜಿಸಿ ದೇವಾಸುರರಿಂದ ಪೂಜಿಸತಕ್ಕ ಪ್ರಮಥಗಣಗಳ ಒಡೆತನವನ್ನು ಪಡೆದನು. ಸೂರ್ಯನು ಪುಣ್ಯಪ್ರದವೂ, ಶುಭಕರವೂ ಆದ ಪುಣ್ಯತಿಥಿಯಲ್ಲಿ ಮಕರರಾಶಿಗೆ ಪ್ರವೇಶಿಸಿದಾಗ ಮಧ್ಯಾರ್ಜುನ ಮಹಾಕ್ಷೇತ್ರದಲ್ಲಿ ವಿಶೇಷವಾಗಿ ಪ್ರತಿ ಮಾಸದಲ್ಲಿಯೂ ಕಾವೇರಿ ತೀರ್ಥ ಸ್ನಾನವನ್ನು ಮಾಡಬೇಕು. ಬಳಿಕ ಈಶ್ವರ ದರ್ಶನ ಪಡೆದು ಮೂರು ಪ್ರದಕ್ಷಿಣೆ ಬಂದು ನಮಸ್ಕರಿಸಬೇಕು. ಹೀಗೆ ಮಾಡುವ ಮಾನವನು ಒಂದು ವರ್ಷಗಳ ಒಳಗೆ ಸಕಲ ಇಷ್ಟಾರ್ಥಗಳನ್ನು ಪಡೆಯುವನು. ಕಾವೇರಿಯ ದಕ್ಷಿಣ ದಂಡೆಯಲ್ಲಿ ನಾನಾ ಜನರಿಂದ ವ್ಯಾಪ್ತವಾಗಿರುವ ಮುನಿಗಳೂ, ಸಿದ್ಧರೂ ಇವರುಗಳಿಂದ ಸೇವಿಸಲ್ಪಡುವ ಕುಂಭಕೋಣ ಎಂಬ ಮಹಾಕ್ಷೇತ್ರವಿರುವದು. ಮಾಘಮಾಸದಲ್ಲಿ , ಶುಕ್ಲಪಕ್ಷದಲ್ಲಿ ಗುರುವಾರ ದಿವಸ ಮಖಾ ನಕ್ಷತ್ರವು ಬಂದಾಗ ಪ್ರೀತಿಯಿಂದ ಸಕಲ ತೀರ್ಥಗಳೂ ಅಲ್ಲಿ ಕೂಡುವವು. ಮಾನವನು ಕಾವೇರಿಯಲ್ಲಿ ಚೆನ್ನಾಗಿ ಸ್ನಾನ ಮಾಡಿ ಮಹಾದೇವನನ್ನು ಭಕ್ತಿಯಿಂದ ಪೂಜಿಸಬೇಕು. ವಿಪ್ರರಿಗೆ ಕನಕವನ್ನು ದಾನ ಮಾಡಬೇಕು. ಆಗ ಶಿವಲೋಕದಲ್ಲಿ ಮನ್ನಣೆ ದೊರಕುವದು. ಅದರ ಪಕ್ಕದಲ್ಲಿ ದಕ್ಷಿಣದಲ್ಲಿ ಮುನಿಗಳಿಂದ ಸೇವಿತವಾದ ದಿವ್ಯ ಕೆರೆಯಲ್ಲಿ ಸಕಲ ಪ್ರಾಣಿಗಳ ಉಪಕಾರಕ್ಕಾಗಿ ಈಶ್ವರನು ನೆಲೆ ನಿಂತಿರುವನು. ಅಲ್ಲಿ ಕಾವೇರಿ ತೀರ್ಥದಲ್ಲಿ ಸ್ನಾನ ಮಾಡಿ , ಉಪವಾಸ ವ್ರತವನ್ನು ಆಚರಿಸಿ, ಸೇವಾದಿಗಳನ್ನು ನಡೆಸಿ ಸ್ವಲ್ಪವಾದರೂ ವಿಪ್ರರಿಗೆ ದಾನಮಾಡುವವನು ಶಿವಲೋಕದಲ್ಲಿ ಮನ್ನಣೆಗೆ ಪಾತ್ರನಾಗುತ್ತಾನೆ. ಕಾವೇರಿಯ ಉತ್ತರ ತೀರದಲ್ಲಿ ಜಾಪ್ಯೇಶ್ವ ಎಂಬ ದೊಡ್ಡ ಕ್ಷೇತ್ರವಿದೆ. ಅಲ್ಲಿ ಮಹಾಪುಣ್ಯದಾಯಕಗಳೂ, ಪೂಜನೀಯವಾದವುಗಳೂ, ಪಾಪನಾಶಕಗಳೂ, ಮಂಗಳಕರಗಳೂ ಆಗಿರುವ ಐದು ನದಿಗಳಿರುವವು. ಅವುಗಳು ಅಲ್ಲಿ ಈಶ್ವರನ ಆಜ್ಞೆಯಂತೆ ಸದಾ ಸಾನ್ನಿಧ್ಯ ಪೂರ್ಣವಾಗಿವೆ. ಅಲ್ಲಿ ಶಿಲಾಧನ ಎಂಬುವವನು ಈಶ್ವರನನ್ನು ಕುರಿತು ತಪಸ್ಸು ಮಾಡಿ ಸೌಭಾಗ್ಯವನ್ನು ಹೊಂದಿದನು. ಮಂಗಳಕರವಾದ ಮಂತ್ರ ಜಪದಿಂದ ಶೀಘ್ರವಾಗಿ ಈಶ್ವರನ ಆನುಗ್ರಹ ಹೊಂದಿ ದನು. ಅಲ್ಲದೆ ನಂದಿಕೇಶ್ವರನನ್ನು (ಶಿವನ ವಾಹನವದ ಎತ್ತು) ತನ್ನ ಪುತ್ರನ ನ್ನಾಗಿ ಪಡೆದನು. ಅಲ್ಲಿಯೇ ಸಪ್ತ ಮಾತೃಕೆಯರು ಈಶ್ವರನನ್ನು ಪೂಜಿಸಿ ಧನ್ಯರಾದುದು ಅದುವೇ ಸ್ಥಳದಲ್ಲಿ ಧರ್ಮವು ಈಶ್ವರನನ್ನು ಪೂಜಿಸಿ ಸಾಕ್ಷಾತ್ ವೃಷಭ (ಎತ್ತು) ಉದ್ಭವಗೊಂಡಿತು. ಕಾವೇರಿಯ ದಕ್ಷಿಣ ದಂಡೆಯಲ್ಲಿ ದುರ್ಗೇಶ್ವರ ಎಂಬ ಮಹಾಕ್ಷೇತ್ರವಿದೆ. ಅಲ್ಲಿ ದುರ್ಗಾದೇವಿಯು ಶಿವನನ್ನು ಭಕ್ತಿಯಿಂದ ಆರಾಧಿಸಿ ಅವನ ಅನುಗ್ರಹದಿಂದ ಸಮರದಲ್ಲಿ ಮಹಿಷಾಸುರನನ್ನು ಸಂಹರಿಸಿದಳು.
ಅಲ್ಲಿ ಕಾವೇರಿ ತೀರ್ಥದಲ್ಲಿ ಮಿಂದು ಶಿವ ದರ್ಶನವನ್ನು ಮಾಡಿ ನಮಸ್ಕರಿಸಿ ಶಕ್ತ್ಯಾನುಸಾರವಾಗಿ ಅನ್ನದಾನ ಮಾಡುವದರಿಂದ ಶಿವಲೋಕದಲ್ಲಿ ಪೂಜ್ಯನಾಗುತ್ತಾನೆ. ಕಾವೇರಿಯ ದಕ್ಷಿಣ ತೀರದಲ್ಲಿ ಬ್ರಹ್ಮವೆಂಬ ಹೆಸರುಳ್ಳ ಶಿವಕ್ಷೇತ್ರವಿದೆ. ಅಲ್ಲಿಯ ಈಶ್ವರನ ಅನುಗ್ರಹದಿಂದ ಬ್ರಹ್ಮನು ಪೂರ್ವದಲ್ಲಿ ಬ್ರಹ್ಮತ್ವವನ್ನು ಪಡೆದನು. ಅಲ್ಲಿ ಕಾವೇರಿಯಲ್ಲಿ ಸ್ನಾನ ಮಾಡಿ ಭಕ್ತಿಯಿಂದ ಶಿವನನ್ನು ಪೂಜಿಸಿದರೆ ನರರು ಸಕಲ ಪಾಪಗಳಿಂದಲೂ ಮುಕ್ತರಾಗಿ ಶಿವಲೋಕವನ್ನು ಹೊಂದುವರು. ಅಲ್ಲಿಂದ ಮುಂದೆ ಕಾವೇರಿಯು ಸಮುದ್ರ ರಾಜನೊಡನೆ ಸಂಗಮವಾಗುವ ಸ್ಥಳವು ಸಿಗುತ್ತದೆ.(ಬಂಗಾಳಕೊಲ್ಲಿಯನ್ನು ಸೇರುವ ಪೂಂ ಪಟ್ಟಣ) ಅಲ್ಲಿ ಸ್ನಾನ ಮಾಡಿ ನಂದಿವಾಹನನಾದ ಪರಮೇಶ್ವರನನ್ನು ಪೂಜಿಸಿ ಶಕ್ತ್ಯಾನುಸಾರ ದಾನ ಮಾಡುವದರಿಂದ ಶಿವಲೋಕಕ್ಕೆ ಹೋಗುವನು.
ಈ ಪ್ರಕಾರವಾಗಿ ಕಾವೇರಿಯ ಚರಿತೆಯನ್ನು ಸಂಕ್ಷೇಪವಾಗಿ ಹೇಳಿದೆನು ಎಂದು ಗಂಗಾ ಮಾತೆ ತನ್ನ ಸಹವರ್ತಿನಿ ಯಮುನೆ ಯೊಂದಿಗೆ ವಿವರಿಸುತ್ತಾಳೆ. “ತುಲಾಮಾಸಮಹಂ ವತ್ಸೇ ತತ್ರ ತಿಷ್ಠಾಮ್ಯಹರ್ನಿಶಂ” “ಎಲೈ ಮಗಳೆ, ತುಲಾಮಾಸದಲ್ಲಿ ನಾನು ಒಂದು ತಿಂಗಳು ಹಗಲು ರಾತ್ರಿ ಕಾವೇರಿಯಲ್ಲಿ ನೆಲೆಸಿರುತ್ತೇನೆ” ಎಂದು ಸ್ಪಷ್ಟಪಡಿಸುತ್ತಾಳೆ ಗಂಗೆ.
ತುಲಾ ಯಾಂ ತು ರವೌ ಪ್ರಾಪ್ತೇ ವಿಷುವೇ ಕುಂಡಿಕೋದಕೇ
ತ್ರೈಲೋಕ್ಯಸ್ಥಾನಿ ತೀರ್ಥಾನಿ ಸಾನ್ನಿಧ್ಯಂ ಕುರುತೇ ಸದಾ
ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ಸಂಕ್ರಮಣ ಪುಣ್ಯಕಾಲದಲ್ಲಿ ತ್ರಿಲೋಕಗಳಲ್ಲಿ ಇರುವ ಸಕಲ ತೀರ್ಥಗಳೂ ಪ್ರತಿವರ್ಷದಲ್ಲಿಯೂ ತಲಕಾವೇರಿಯಲ್ಲಿ ಬಂದು ಸೇರಿಕೊಳ್ಳುವವು. ಹಾಗಾಗಿ ಅಲ್ಲಿ ಆ ಪುಣ್ಯಕಾಲದಲ್ಲಿ ಸಕಲ ಪ್ರಯತ್ನಪೂರ್ವಕವಾಗಿ ತೀರ್ಥಸ್ನಾನವನ್ನು ಮಾಡಬೇಕು. ಆ ಸಮಯದಲ್ಲಿ ಮಾಡುವ ಸ್ನಾನವು ಸರ್ವ ಪಾಪಗಳನ್ನೂ ನಾಶ ಮಾಡುತ್ತದೆ ಎಂದು ಪುರಾಣಜ್ಞರು ತಿಳಿದಿರುವರು. ಕಾವೇರಿಯ ಪಾವನಕರವಾದ ಜಲದಲ್ಲಿ ತುಲಾ ಮಾಸದಲ್ಲಿ ಒಂದು ತಿಂಗಳು ಎಡೆಬಿಡದೆ ನಿತ್ಯವೂ ಯಾರು ಸ್ನಾನ ಮಾಡುತ್ತಾನೋ ಆ ಪುಣ್ಯಾತ್ಮನು ಅದರಿಂದಾಗಿ ಮಂಗಳಕರವಾದ ದಿವ್ಯ ಗತಿಯನ್ನು ಹೊಂದುವರು.
(ಅಷ್ಟಮ ಅಧ್ಯಾಯ ಮುಕ್ತಾಯ. ಕೃಪೆ; ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮ್ಯೆ. ಅನುವಾದಕರು: ದಿ.ಟಿ.ಪಿ ನಾರಾಯಣಾಚಾರ್ಯರು)