ಕರಿಕೆ, ಜೂ. 12: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ಹಾಗೂ ಪೋಷಕರ ಸಭೆ ನಡೆಯಿತು. ಈ ಸಭೆಯಲ್ಲಿ ಕೊರೊನಾದಿಂದಾಗಿ ಶಾಲೆಗಳು ಯಾವಾಗ ಆರಂಭವಾಗಬೇಕು, ಶಾಲೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಲು ಯಾವ ರೀತಿ ತರಗತಿಗಳನ್ನು ನಡೆಸಬೇಕು, ಆರೋಗ್ಯ ದೃಷ್ಟಿಯಿಂದ ಮಾಸ್ಕ್ ಬಳಕೆ ಹಾಗೂ ಸ್ಯಾನಿಟೈಸರ್ ಬಳಕೆ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಂಡು ಅದನ್ನು ನಿಗದಿತ ನಮೂನೆಯಲ್ಲಿ ಇಲಾಖೆಗೆ ಕಳುಹಿಸಿಕೊಡಲು ಚರ್ಚಿಸಲಾಯಿತು.
ಸಭೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳಾದ ಶಿವಪ್ಪ ಕೆ.ಆರ್., ಮಿತ್ರಕುಮಾರ್ ಹೊದ್ದೆಟ್ಟಿ, ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಮುಖ್ಯ ಶಿಕ್ಷಕರುಗಳಾದ ಕುಮಾರ್, ಎನ್.ಎಸ್. ಮನೋಹರ ಉಪಸ್ಥಿತರಿದ್ದರು.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ಪೋಷಕರ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಮೇರಿ ಫಾತಿಮ ವಹಿಸಿದ್ದರು.
ಸರಕಾರದ ಆದೇಶದಂತೆ ಕೊರೊನಾ ವೈರಸ್ ಹಿನ್ನೆಲೆ ಪೋಷಕರ ವಿಶೇಷ ಸಭೆ ನಡೆಯಿತು. ಶಾಲೆಯನ್ನು ಯಾವಾಗ ಪ್ರಾರಂಭಿಸಬೇಕು ಮತ್ತು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲು ಪ್ರತಿಯೊಬ್ಬ ಪೋಷಕರ ಸಹಿ ಪಡೆಯುವ ಪ್ರಕ್ರಿಯೆ ನಡೆಯಿತು.
ಈ ಸಂದರ್ಭ ಹಲವಾರು ಮಂದಿ ಪೋಷಕರು ತಮ್ಮ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸದ್ಯಕ್ಕೆ ಶಾಲೆ ಪ್ರಾರಂಭ ಬೇಡ ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲರಾಗುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
9 ರಿಂದ 10ನೇ ತರಗತಿಗೆ ಉತ್ತೀರ್ಣರಾದ ಮಕ್ಕಳ ಪೋಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಶಾಲೆಯ ಶಿಕ್ಷಕಿ ಮಮತ ಸ್ವಾಗತಿಸಿದರು.